ಬಾಂಗ್ಲಾದಲ್ಲಿ ತಮ್ಮನ್ನು ತಾವೇ ಸ್ಫೋಟಿಸಿಕೊಂಡು ಒಂದೇ ಕುಟುಂಬದ ಐವರು ಸಾವು
ಡಾಕಾ, ಮೇ 11-ತಮ್ಮ ಅಡಗು ತಾಣಗಳಿಗೆ ನುಗ್ಗಿದ ಪೊಲೀಸರನ್ನು ತಡೆಯಲು ತಮ್ಮನ್ನು ತಾವೇ ಸ್ಫೋಟಿಸಿ ಕೊಂಡು ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಬಾಂಗ್ಲಾದೇಶದ ಗೋದ್ಗರಿ ವ್ಯಾಪ್ತಿಯಲ್ಲಿ ನಡೆದಿದೆ. ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಉಗ್ರರನ್ನು ದಮನ ಮಾಡುವ ನಿಟ್ಟಿನಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದು , ಬೇನಿಪುರ್ ಗ್ರಾಮದ ಮನೆಯೊಂದರಲ್ಲಿ ಉಗ್ರರು ನೆಲೆಯೂರುವ ಖಚಿತ ಮಾಹಿತಿ ಮೇರೆಗೆ ಗೋದ್ಗರಿ ಪೊಲೀಸ್ ಅಧಿಕಾರಿ ಹಿಫ್ಜುಲ್ ಅಲಾಮ್ ಮುನ್ಸಿ ಅವರ ಆದೇಶದಂತೆ ಇಂದು ಬೆಳಗ್ಗೆ ಪೊಲೀಸರು ದಾಳಿ ಮಾಡಿದ್ದಾರೆ.
ಮನೆ ಮೇಲೆ ಪೊಲೀಸರು ದಾಳಿ ಮಾಡಲು ಆರಂಭಿಸುತ್ತಿದ್ದಂತೆ ಮನೆಯಿಂದ ಹೊರಬಂದ ಶಂಕಿತ ಉಗ್ರರು ಇವರ ಮೇಲೆ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಇದರಿಂದ ಇಬ್ಬರು ಪೊಲೀಸರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಳಿಯಿಂದ ಇಬ್ಬರು ಮಕ್ಕಳನ್ನು ಪೊಲೀಸರು ರಕ್ಷಿಸಲು ಮುಂದಾದಾಗ ಮನೆ ಮಾಲೀಕ ಆತನ ಹೆಂಡತಿ, ಮೂರು ವರ್ಷದ ಮಗಳು ಹಾಗೂ ಎಂಟು ವರ್ಷದ ಇಬ್ಬರು ಗಂಡುಮಕ್ಕಳು ಸೇರಿದಂತೆ ಒಟ್ಟು ಐದು ಮಂದಿ ತಮ್ಮನ್ನು ತಾವೇ ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >