ಬಾಗಿಲಲ್ಲಿ ನಿಲ್ಲಬೇಡ ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಪ್ರಯಾಣಿಕನಿಂದ ಹಲ್ಲೆ
ಬೆಳಗಾವಿ, ಸೆ.29-ಬಾಗಿಲಲ್ಲಿ ನಿಲ್ಲಬೇಡಿ ಎಂದಿದ್ದಕ್ಕೆ ಕೆಎಸ್ಆರ್ಟಿಸಿ ಬಸ್ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವ ಘಟನೆ ಇಂದು ಬೆಳಗ್ಗೆ ಚಿಕ್ಕೋಡಿ ತಾಲೂಕಿನ ಝಾರಿಗಲ್ಲಿ ಸಮೀಪ ನಡೆದಿದೆ. ಪ್ರಕಾಶ ಮಾಯನ್ನವರ್ ಹಲ್ಲೆಗೊಳಗಾದ ಕೆಎಸ್ಆರ್ಟಿಸಿ ಬಸ್ ನಿರ್ವಾಹಕ. ಇಂದು ಬೆಳಗ್ಗೆ ಚಿಕ್ಕೋಡಿಯಿಂದ ಕೆಎಸ್ಆರ್ಟಿಸಿ ಬಸ್ ಮಹಾರಾಷ್ಟ್ರದ ಇಚಲಕರಂಜಿಗೆ ಹೋಗುತ್ತಿದ್ದಾಗ ಝಾರಿಗಲ್ಲಿ ಸಮೀಪ ಹಿರೇಕೋಡಿ ನಿವಾಸಿಗಳಾದ ಮಹಮ್ಮದ್ ಭಾಷಿದ್ ಸಾದೀಕ್ ಶೇಖ್ (21) ಹಾಗೂ ಆತನ ತಂದೆ ಸಾದಿಕ್ ಶೇಖ್ ಬಸ್ ಹತ್ತಿದ್ದಾರೆ. ಈ ವೇಳೆ ಮಹಮ್ಮದ್ ಶೇಖ್ ಬಸ್ ಬಾಗಿಲಿನಲ್ಲಿ ನಿಂತಿದ್ದನ್ನು ಗಮನಿಸಿದ ನಿರ್ವಾಹಕ ಒಳಬರುವಂತೆ ಹೇಳಿದ್ದಾನೆ.
ಇದನ್ನು ನಿರಾಕರಿಸಿದ ಮಹಮ್ಮದ್ ಶೇಖ್ ನಿರ್ವಾಹಕರ ಜೊತೆ ಜಗಳವಾಡಿ ಟಿಕೆಟ್ ಮಿಷನ್ ಹೊಡೆದು ಹಾಕಿ ಹಲ್ಲೆ ಮಾಡಿದ್ದಾನೆ.
ಈ ಸಂಬಂಧ ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.