ಬಾಬಾಬುಡನ್‍ಗಿರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಸಿಎಂಗೆ ಸಾಧು-ಸಂತರ ನಿಯೋಗ ಒತ್ತಾಯ

Spread the love

cm-3
ಬೆಂಗಳೂರು, ಏ.25-ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್‍ಗಿರಿ ಮತ್ತು ದತ್ತಾತ್ರೇಯ ಪೀಠದ ದಾಖಲೆ, ವರದಿಗಳನ್ನು ಪರಿಶೀಲಿಸಿ ರಾಜಕೀಯ ಹೊರತಾಗಿ ವಿವಾದ ಬಗೆಹರಿಸಬೇಕೆಂದು ಬಿಜೆಪಿ, ವಿಎಚ್‍ಪಿ, ಭಜರಂಗದಳ ಮುಖಂಡರನ್ನೊಳಗೊಂಡ ಸಾಧು ಸಂತರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗ ಕಂದಾಯ ಇಲಾಖೆಗಳ ದಾಖಲಾತಿ ಪ್ರಕಾರ ಬಾಬಾ ಬುಡನ್‍ಗಿರಿ ಜಾಗ ಇರುವ ಸರ್ವೇ ನಂಬರ್ ಬೇರೆ ಇದೆ. ದತ್ತಾತ್ರೇಯ ಪೀಠ ಜಾಗ ಇರುವ ಸರ್ವೇ ನಂಬರ್ ಬೇರೆ ಇದೆ. ಎರಡನ್ನೂ ಒಟ್ಟಾಗಿ ನೋಡುವುದರಿಂದ ವಿವಾದ ಬಗೆಹರಿಯುತ್ತಿಲ್ಲ.ಕಂದಾಯ ಇಲಾಖೆ ದಾಖಲೆಗಳಲ್ಲಿ ಜಾಗದ ಸರ್ವೇ ನಂಬರ್‍ಗಳು ಸ್ಪಷ್ಟವಾಗಿವೆ. ಈ ದಾಖಲೆಗಳನ್ನು ಆಧರಿಸಿ ಮತ್ತು 2012-13ರಲ್ಲಿ ಮುಜರಾಯಿ ಇಲಾಖೆ ಆಯುಕ್ತರು ನೀಡಿರುವ ವರದಿಯನ್ನು ಆಧಾರವಾಗಿಟ್ಟುಕೊಂಡು ವಿವಾದ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರ ದಲ್ಲಿದ್ದಾಗಲೇ ದಾಖಲೆಗಳನ್ನು ಆಧರಿಸಿ ವಿವಾದ ಬಗೆಹರಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ.ಆ ಸಂದರ್ಭದಲ್ಲಿ ಪ್ರಕರಣ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಯಲ್ಲಿತ್ತು. ಈಗ ಸುಪ್ರೀಂಕೋರ್ಟ್ ಖುದ್ದಾಗಿ ರಾಜ್ಯ ಸರ್ಕಾರಕ್ಕೆ ವಿವಾದ ಬಗೆಹರಿಸುವ ಅಧಿಕಾರ ನೀಡಿದೆ ಇದನ್ನು ಬಳಸಿಕೊಳ್ಳಿ ಎಂದು ನಿಯೋಗದ ಸದಸ್ಯರು ಸಲಹೆ ನೀಡಿದ್ದಾರೆ.

ಭೇಟಿಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ನಿಯೋಗದ ನೇತೃತ್ವ ವಹಿಸಿದ್ದ ಬಿಜೆಪಿ ಶಾಸಕ ಸಿ.ಟಿ.ರವಿ, ಮೇ 9ರೊಳಗಾಗಿ ದಾಖಲೆಗಳನ್ನು ಆಧರಿಸಿ ಮತ್ತು ಮುಜರಾಯಿ ಇಲಾಖೆ ಆಯುಕ್ತರ ವರದಿ ಪರಿಗಣಿಸಿ ವಿವಾದ ಬಗೆಹರಿಸುವಂತೆ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ. ಮೇ 9ಕ್ಕೆ ಕೆಲವೇ ದಿನಗಳು ಬಾಕಿ ಇವೆ. ಕಂದಾಯ ಇಲಾಖೆ ದಾಖಲೆಗಳ ಪ್ರಕಾರ ಚಿಕ್ಕಮಗಳೂರು ತಾಲೂಕು ಯಗರ ಹೋಬಳಿ, ಇನಾಂದತ್ತಾತ್ರೇಯ ಗ್ರಾಮದ ಸರ್ವೇ ನಂ.195ರಲ್ಲಿ ದತ್ತಾತ್ರೇಯ ಪೀಠ ಇದೆ. ಅದೇ ರೀತಿ ಯಗರ ಹೋಬಳಿ, ನಾಗೇನಹಳ್ಳಿ ಗ್ರಾಮದ ಸರ್ವೆ ನಂ.57ರಲ್ಲಿ ಬಾಬಾ ಬುಡನ್ ಗಿರಿ ದರ್ಗಾ ಇದೆ.

ದರ್ಗಾನೇ ಬೇರೆ, ದತ್ತಾತ್ರೇಯ ಪೀಠವೇ ಬೇರೆ. ಎರಡನ್ನೂ ಒಂದಾಗಿಯೇ ನೋಡುತ್ತಿರುವುದು ವಿವಾದ ಹೆಚ್ಚಾಗಲು ಕಾರಣವಾಗಿದೆ. ಇವೆರಡನ್ನು ಪ್ರತ್ಯೇಕಿಸಬೇಕು. ಬಾಬಾ ಬುಡನ್‍ಗಿರಿಯಲ್ಲಿ ಮುಸ್ಲಿಂ ಬಾಂಧವರಿಗೆ ಅವರ ಧಾರ್ಮಿಕ ಆಚರಣೆಗಳನ್ನು ನಡೆಸಲು ಅವಕಾಶಕೊಡಬೇಕು. ಅದೇ ರೀತಿ ದತ್ತಾತ್ರೇಯ ಪೀಠದಲ್ಲಿ ಹಿಂದೂಗಳು ತಮ್ಮ ಶ್ರದ್ಧಾ, ಭಕ್ತಿಯಿಂದ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.ಸಿಎಂ ಅವರು ಬಿಜೆಪಿ ಅಧಿಕಾರದಲ್ಲಿದ್ದಾಗಲೇ ಏಕೆ ವಿವಾದ ಬಗೆಹರಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ. ಆಗ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿತ್ತು. ಈಗ ರಾಜ್ಯ ಸರ್ಕಾರವೇ ವಿವಾದ ಬಗೆಹರಿಸುವ ಜವಾಬ್ದಾರಿಯನ್ನು ಸುಪ್ರೀಂ ಕೋರ್ಟ್ ನೀಡಿದೆ. ಇದು ಸುವರ್ಣಾವಕಾಶ. ಇದನ್ನು ಬಳಸಿಕೊಳ್ಳಿ ಎಂದು ಹೇಳಿದರು.

41 ವರ್ಷದಿಂದ 37 ಪ್ರಕರಣಗಳು ದಾಖಲಾಗಿದ್ದವು. ಅದರಲ್ಲಿ 34 ಪ್ರಕರಣಗಳನ್ನು ನ್ಯಾಯಾಲಯ ವಿವಿಧ ರೀತಿಯಲ್ಲಿ ಇತ್ಯರ್ಥ ಪಡಿಸಿದೆ. ಅಂತಿಮ ತೀರ್ಪು ನೀಡುವ ಸಲುವಾಗಿ ಈಗ ದಿಟ್ಟ ಹೆಜ್ಜೆ ಇಟ್ಟಿದ್ದು, ವಿವಾದ ಬಗೆಹರಿಸುವ ಪ್ರಯತ್ನಕ್ಕೆ ಕೈ ಹಾಕಿದೆ.ರಾಜಕೀಯ ದೃಷ್ಟಿಕೋನಗಳಿಂದ ವಿವಾದವನ್ನು ನೋಡದೆ, ದಾಖಲೆಗಳನ್ನು ಆಧರಿಸಿ ವಿವಾದ ಬಗೆಹರಿಸಬೇಕು ಎಂದು ಮನವಿ ಮಾಡಿದರು.ನಿಯೋಗದಲ್ಲಿ ಸ್ವಾಮೀಜಿಯೊಬ್ಬರು ಮಾತನಾಡಿ, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದತ್ತಾತ್ರೇಯ ಪೀಠದ ಬಗ್ಗೆ ನಾವು ಸುದೀರ್ಘ ವಿವರಣೆ ಕೊಟ್ಟಿದ್ದೇವೆ. ಮುಖ್ಯ ಮಂತ್ರಿಯವರು ಎಲ್ಲವನ್ನೂ ತಾಳ್ಮೆಯಿಂದ ಕೇಳಿದ್ದಾರೆ. ದರ್ಗಾ ಬೇರೆ, ಪೀಠ ಬೇರೆ.

ಎರಡನ್ನೂ ಪ್ರತ್ಯೇಕವಾಗಿ ನೋಡಿದಾಗ ಮಾತ್ರ ವಿವಾದಕ್ಕೆ ಶಾಶ್ವತ ಪರಿಹಾರ ಸಿಗಲು ಸಾಧ್ಯ. ಹಿಂದೂ-ಮುಸ್ಲಿಮರು ಶಾಂತಿಯಿಂದ ಬದುಕಬೇಕು. ವಿವಾದಗಳಿಂದ ಬಡಿದಾಡಿ ಕೊಳ್ಳುವುದು ಸರಿಯಲ್ಲ. ತಮ್ಮ ಮನವಿಯನ್ನು ಮುಖ್ಯಮಂತ್ರಿಗಳು ಶಾಂತಿಯಿಂದ ಕೇಳಿದ್ದಾರೆ. ವಿವಾದ ಬಗೆಹರಿಸುವ ವಿಶ್ವಾಸ ಇದೆ. ಬಾಬಾ ಬುಡನ್‍ಗಿರಿಯಲ್ಲಿ ಮುಸ್ಲಿಮರ ಆಚರಣೆಗೆ ಅವಕಾಶ ಕೊಡಿ. ದತ್ತಾತ್ರೇಯ ಪೀಠದಲ್ಲಿ ಪಾದುಕೆಗಳ ದರ್ಶನ, ಪೂಜೆ ಮತ್ತು ಹಿಂದೂ ಆರ್ಚಕರ ನೇಮಕಕ್ಕೆ ಅವಕಾಶ ಮಾಡಿಕೊಡಿ. ದತ್ತಾತ್ರೇಯ ಪೀಠದ ಧಾರ್ಮಿಕ ನೆಲೆಗಟ್ಟುಗಳು ಉಳಿಯಬೇಕು ಎಂದು ಹೇಳಿದರು.ಒಂದು ವೇಳೆ ಸರ್ಕಾರ ನಮ್ಮ ಮನವಿಗೆ ಸ್ಪಂದಿಸದಿದ್ದರೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಸಾಧುಸಂತರು ಮುಂದೆ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದ್ದು, ಅದರಂತೆ ನಡೆದುಕೊಳ್ಳುತ್ತೇವೆ ಎಂದು ಸಿ.ಟಿ.ರವಿ ಘೋಷಿಸಿದರು.ವಿವಾದ ಕೋರ್ಟ್‍ನಲ್ಲಿದೆ:

ನಿಯೋಗದ ಭೇಟಿನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಾದ ಕೋರ್ಟ್‍ನಲ್ಲಿದೆ. ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಹೊರನಾಡು ಕ್ಷೇತ್ರದ ಸ್ವಾಮೀಜಿ, ಬಸವತತ್ವ ಪೀಠದ ಜಯಬಸವಾನಂದ ಸ್ವಾಮೀಜಿ, ಶಂಕರ ದೇವರು ಮಠದ ಸ್ವಾಮೀಜಿ, ಬೇರುಗಂಡಿ ಮಠದ ಸ್ವಾಮೀಜಿ, ಶಾಸಕರಾದ ಜೀವರಾಜ್, ವಿಎಚ್‍ಪಿ ಮುಖಂಡರಾದ ಗೋಪಾಲ್, ಕೇಶವ ಹೆಗಡೆ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin