ಬಾಲಕಾರ್ಮಿಕ ಪದ್ಧತಿ ನಿಷೇಧಿಸುವ ವಿಶ್ವಸಂಸ್ಥೆಯ ಸಮಾವೇಶಕ್ಕೆ ಆಕ್ಷೇಪ..!

Spread the love

United-Nationas-01

ಲಂಡನ್, ಡಿ.20- ಬಾಲ ಕಾರ್ಮಿಕ ಪದ್ಧತಿ ನಿಷೇಧಿಸುವ ವಿಶ್ವಸಂಸ್ಥೆಯ ಸಮಾವೇಶಕ್ಕೆ ಜಾಗತಿಕ ಸಮುದಾಯದ ಶಿಕ್ಷಣ ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಿಷೇಧಕ್ಕೆ ಸಂಬಂಧಿಸಿದಂತೆ ಸಂಯುಕ್ತರಾಷ್ಟ್ರಗಳ ಕೆಲವು ಅಂಶಗಳು ಪಾಶ್ಚಿಮಾತ್ಯ ಪೂರ್ವಗ್ರಹಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಈ ಪದ್ಧತಿ ನಿಷೇಧಿಸುವ ಕುರಿತು ಪರ-ವಿರೋಧ ನಿಲುವು ವ್ಯಕ್ತವಾಗುತ್ತಿರುವ ಸನ್ನಿವೇಶದಲ್ಲಿ ಇದು ಹೊಸ ಬೆಳವಣಿಗೆಯಾಗಿದೆ.  ಈ ಸಂಬಂಧ ಕೆಲವು ಪ್ರಮುಖ ಶಿಕ್ಷಣ ತಜ್ಞರು ದಿ ಅಬ್ಸರ್ವರ್ ಪತ್ರಿಕೆಗೆ ಪತ್ರ ಬರೆದಿದ್ದು, ಅಪ್ರಾಪ್ತರು ಕೆಲಸ ಮಾಡುವುದರಿಂದ ಸಕರಾತ್ಮಕ ಮತ್ತು ಪೂರಕ ಪರಿಣಾಮಗಳೂ ಉಂಟಾಗುತ್ತವೆ ಎಂಬ ಅಂಶವನ್ನು ವಿಶ್ವಸಂಸ್ಥೆಯ ಸಮಿತಿ ಪರಿಗಣಿಸಿಯೇ ಇಲ್ಲ. ಈ ಸಂಗತಿಯನ್ನು ತಳ್ಳಿಹಾಕಿ ಪಾಶ್ಚಿಮಾತ್ಯ ಪೂರ್ವಗ್ರಹಕ್ಕೆ ಒಳಗಾಗಿ ಲಭ್ಯವಿರುವ ಸಾಕ್ಷ್ಯಗಳನ್ನು ನಿರ್ಲಕ್ಷಿಸಿದೆ ಎಂಬ ವಾದವನ್ನು ಮಂಡಿಸಿದ್ದಾರೆ.

ಮಕ್ಕಳ ಕಲ್ಯಾಣ ಮತ್ತು ಮಾನವ ಹಕ್ಕುಗಳಿಗೆ ಸಂಬಂಧಪಟ್ಟಂತೆ ಸಂಶೋಧನೆ ನಡೆಸುತ್ತಿರುವ ಶಿಕ್ಷಣ ತಜ್ಞರು ತಮ್ಮ ಅಭಿಪ್ರಾಯದ ಸಮರ್ಥನೆಗೆ ಪೂರಕವಾಗುವ ಕೆಲವು ಅಂಶಗಳನ್ನೂ ನೀಡಿದ್ದಾರೆ. ಬಾಲ ಕಾರ್ಮಿಕ ಪದ್ಧತಿಗೆ ಕುರಿತು ವಿಶ್ವಸಂಸ್ಥೆ ಕೆಲವು ನೀತಿ-ಧೋರಣೆಗಳು ಬೇರು ಮಟ್ಟದಲ್ಲಿ ಪ್ರತಿಕ್ರೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬುದು ಅವರ ಸಾಮೂಹಿಕ ಅಭಿಮತವಾಗಿದೆ. ಬಾಲ ಕಾರ್ಮಿಕ ಪದ್ಧತಿ ನಿಷೇಧಿಸಿದರೆ ಕೆಲಸ ಮಾಡುತ್ತಿರುವ ಮಕ್ಕಳು ಶಾಲೆಗೆ ಹಿಂದಿರುಗುವುದಿಲ್ಲ. ಒಂದು ವೇಳೆ ಶಾಲೆಗೆ ಹೋಗುವುದಕ್ಕಾಗಿಯೇ ಅಥವಾ ವಿದ್ಯೆ ಕಲಿಯುವುದಕ್ಕಾಗಿಯೇ ಅವರು ಕೆಲಸ ಮಾಡುತ್ತಿದ್ದರೆ ವಿಶ್ವಸಂಸ್ಥೆಯ ಈ ತೀರ್ಮಾನ ದುಷ್ಪರಿಣಾಮ ಉಂಟು ಮಾಡಲಿದೆ ಎಂದು ಸಸೆಕ್ಸ್ ಯೂನಿವರ್ಸಿಟಿಯ ಗ್ಲೋಬಲ್ ಸ್ಟಡೀಸ್ ವಿಭಾಗದ ಡೊರ್ಟ್ ಥಾರ್ಸನ್ ಹೇಳಿದ್ದಾರೆ.

ಜಗತ್ತಿನಾದ್ಯಂತ 2025ರ ವೇಳೆಗೆ ಬಾಲಕಾರ್ಮಿಕ ಪದ್ದತಿಯನ್ನು ನಿರ್ಮೂಲನೆ ಮಾಡಬೇಕೆಂದು 193 ದೇಶಗಳು ಈಗಾಗಲೇ ನಿರ್ಧರಿಸಿವೆ. ಆದರೆ, ಕೆಲಸಕ್ಕೆ ಸೇರಲು ಇರುವ ಕನಿಷ್ಠ ವಯೋಮಾನ (ಕೆಲವು ದೇಶಗಳಲ್ಲಿ 15, ಮತ್ತೆ ಕೆಲವು ರಾಷ್ಟ್ರಗಳಲ್ಲಿ 18) ಕೈಬಿಡಬೇಕೆಂದು ಶಿಕ್ಷಣ ತಜ್ಞರು ಸಲಹೆ ಮಾಡಿದ್ದಾರೆ. ವಯಸ್ಸಿಗೆ ಅನುಗುಣವಾಗಿ ಕೆಲಸ ಮಾಡುವುದು ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಮಕ್ಕಳ ಶಿಕ್ಷಣಕ್ಕೆ ಪೂರಕವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin