ಬಾಲಗಂಗಾಧರನಾಥ ಸ್ವಾಮೀಜಿ ಅದ್ಭುತ ಪವಾಡವನ್ನೇ ಮಾಡಿದ್ದಾರೆ : ಅಮಿತ್ ಷಾ

Balagangadhara-natha

ಆದಿಚುಂಚನಗಿರಿ, ಆ.13-ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮ, ಅರಣ್ಯ ಹಾಗೂ ಗೋಶಾಲೆ ಮೂಲಕ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಾಧರನಾಥಸ್ವಾಮೀಜಿಗಳು ಅದ್ಭುತವಾದ ಪವಾಡವನ್ನೇ ಮಾಡಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಇಂದಿಲ್ಲಿ ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರದ ಬಿಜಿಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪದ್ಮಭೂಷಣ ಡಾ.ಬಾಲಗಂಗಾಧರನಾಥ ಸ್ವಾಮೀಜಿಗಳ ಕುರಿತ ದ ಸ್ಟೋರಿ ಆಫ್ ಎ ಗುರು ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಒಂದು ಸಣ್ಣ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಮಾಡುವಷ್ಟು ಸಾಧನೆಯನ್ನು ಮಠದ ವತಿಯಿಂದ ಮಾಡಿ ಅನ್ನ, ಅಕ್ಷರ, ಆರೋಗ್ಯವನ್ನು ಎಲ್ಲಾ ವರ್ಗದವರಿಗೂ ತಲುಪಿಸುವ ಕೆಲಸವನ್ನು ಸ್ವಾಮೀಜಿಗಳು ಮಾಡಿದ್ದಾರೆ ಎಂದು ಶ್ಲಾಘಿಸಿದರು. 64 ಶಿಕ್ಷಣ ಸಂಸ್ಥೆಗಳ ಮೂಲಕ 1,48,000 ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಶ್ರೀಮಠ ಇದರೊಂದಿಗೆ ಶಿಕ್ಷಕರು, ಬೋಧಕರು, ಸಿಬ್ಬಂದಿಗೆ ಆಶ್ರಯ ನೀಡಿದೆ. ಆಧ್ಯಾತ್ಮ ಕ್ಷೇತ್ರಕ್ಕೂ ಕೊಡುಗೆ ನೀಡಿರುವ ಅವರು ಸಮಾಜ ಸೇವೆಯ ಮೂಲಕ ಸಮಾಜದ ಕಲ್ಯಾಣಕ್ಕೆ ಮುಂದಾಗಿದ್ದರು. ಅಂತಹ ಮಹತ್ತರ ಸಾಧನೆಯಿಂದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳು ಆದರ್ಶವಾಗಿದ್ದಾರೆ ಎಂದರು.

ಇಂತಹ ಪುಣ್ಯಕ್ಷೇತ್ರಕ್ಕೆ ನಾನು ಮೊದಲು ಬಾರಿ ಬಂದಿದ್ದೇನೆ. ಇದು ನನ್ನ ಪುಣ್ಯವೂ ಹೌದು. ಅವರ ಜೀವನ ಚರಿತ್ರೆಯನ್ನು ಬಿಡುಗಡೆ ಮಾಡುವ ಸೌಭಾಗ್ಯವೂ ನನ್ನದಾಗಿದೆ ಎಂದು ನುಡಿದರು. 2011ರಲ್ಲಿ ದೇಶದ ಸಂತರು, ಯೋಗಿಗಳು ಯೋಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ಕೊಡಿಸಬೇಕು ಮನವಿ ಮಾಡಿದ್ದರು. ಅದರಂತೆ ಪ್ರಧಾನಿಮಂತ್ರಿ ಮೋದಿಯವರು ವಿಶ್ವಸಂಸ್ಥೆಗೆ ಮನವಿ ಮಾಡಿದ ಪ್ರಯುಕ್ತ ಜೂ.21ನ್ನು ಅಂತಾರಾಷ್ಟ್ರೀಯ ಯೋಗದಿನವನ್ನಾಗಿ ಘೋಷಿಸಲಾಗಿದೆ. ಔಷಧಿ ಇಲ್ಲದೆ ಆರೋಗ್ಯ ಕಾಪಾಡುವ ಯೋಗ ಈಗ ವಿಶ್ವಮಾನ್ಯತೆ ಪಡೆದಿದೆ ಎಂದರು.

ನರೇಂದ್ರ ಮೋದಿಯವರು ವಿಶ್ವದಲ್ಲಿ ಭಾರತದ ಸಾಂಸ್ಕøತಿಕ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದಾರೆ. ಧರ್ಮದ ಹಾದಿಯಲ್ಲಿ ಜನಸೇವೆ ಮಾಡುವ ಜೀವನಾಮೃತವನ್ನು ಈ ಕೃತಿ ಕಲಿಸಿಕೊಡುತ್ತದೆ. ಮಠಮಾನ್ಯಗಳು ಕಲ್ಯಾಣ ಸಮಾಜ ನಿರ್ಮಾಣಕ್ಕೆ ಪ್ರಯತ್ನಿಸುತ್ತಿವೆ. ಆದಿಚುಂಚನಗಿರಿ ಮಠ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಕೆಲಸ ಮಾಡುತ್ತಿದೆ ಎಂದು ಕೊಂಡಾಡಿದರು. ಕಾರ್ಯಕ್ರಮದಲ್ಲಿ ದ ಸ್ಟೋರಿ ಆಫ್ ಗುರು ಪುಸ್ತಕದ ಕರ್ತೃ ಸುಧಾಮಹಿ ರಘುನಾಥನ್, ಗುಜರಾತ್ ರಾಜಕೋಟ್‍ನ ಅರ್ಶ ವಿದ್ಯಾಮಂದಿರ್‍ನ ಸ್ವಾಮಿ ಪರಮಾತ್ಮನಂದ ಸರಸ್ವತಿಜೀ, ದೆಹಲಿ ಸಂಸದ ಮಹೇಶ್‍ಗಿರಿ, ಶ್ರೀ ಪ್ರಕಾಶನಾಥಸ್ವಾಮೀಜಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

Sri Raghav

Admin