ಬಿಎಸ್‍ವೈ ವಿರುದ್ಧ ಮತ್ತೆ ಈಶ್ವರಪ್ಪ ಬಂಡಾಯ ಕಹಳೆ

Eshwarappa-Yadiyurappa

ಬೆಂಗಳೂರು, ಫೆ.1-ವರಿಷ್ಠರ ಮಧ್ಯ ಪ್ರವೇಶದಿಂದ ತಾತ್ಕಾಲಿಕವಾಗಿ ಬ್ರೇಕ್ ಬಿದ್ದಿದ್ದ ರಾಜ್ಯ ಬಿಜೆಪಿಯೊಳಗಿನ ಅಸಮಾಧಾನ ಮತ್ತೆ ಭುಗಿಲೇಳುವ ಲಕ್ಷಣಗಳು ಗೋಚರಿಸಿವೆ. ಪದಾಧಿಕಾರಿಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ಕೇಂದ್ರ ವರಿಷ್ಠರು ಸೂಚನೆ ಕೊಟ್ಟಿದ್ದರು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೊಪ್ಪು ಹಾಕದಿರುವುದು ಭಿನ್ನಮತಕ್ಕೆ ಮೂಲಕಾರಣವಾಗಿದೆ.
ಸುಮಾರು 10ಕ್ಕೂ ಹೆಚ್ಚು ಜಿಲ್ಲೆಗಳ ಅಧ್ಯಕ್ಷರು ಹಾಗೂ ವಿವಿಧ ಮೋರ್ಚಾಗಳ ಪಟ್ಟಿಯನ್ನು ಪರಿಷ್ಕರಿಸಿ ಪಕ್ಷದ ನಿಷ್ಠಾವಂತರಿಗೆ ನೀಡಬೇಕೆಂಬುದು ಮುಖಂಡ ಈಶ್ವರಪ್ಪನವರ ಒತ್ತಾಯವಾಗಿತ್ತು.
ಕಳೆದ ವಾರ ದೆಹಲಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಈಶ್ವರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮುಂದೆ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದರು.

ಮೂಲ ಕಾರ್ಯಕರ್ತರನ್ನು ಕಡೆಗಣಿಸಿ ಕೆಜೆಪಿಯಿಂದ ವಲಸೆ ಬಂದವರಿಗೆ ಆದ್ಯತೆ ನೀಡಲಾಗಿದೆ. ಈ ಪಟ್ಟಿಯನ್ನು ಬದಲಾಯಿಸಿ ಪಕ್ಷ ನಿಷ್ಠರಿಗೆ ನೀಡಬೇಕೆಂಬುದು ಅವರ ಮನವಿಯಾಗಿತ್ತು.
ಇದಕ್ಕೆ ಬಹುತೇಕರು ಒಪ್ಪಿಗೆಯನ್ನೂ ಸೂಚಿಸಿದ್ದರು. ರಾಜ್ಯ ಉಸ್ತುವಾರಿ ಮುರಳೀಧರ್ ರಾವ್, ಆರ್‍ಎಸ್‍ಎಸ್ ಮುಖಂಡ ಸಂತೋಷ್, ಮತ್ತೋರ್ವ ಮುಖಂಡ ಅರುಣ್‍ಕುಮಾರ್ ಸೇರಿದಂತೆ ಮತ್ತಿತರರು ಪಟ್ಟಿ ಪರಿಷ್ಕರಣೆ ಮಾಡುವಂತೆ ಬಿಎಸ್‍ವೈಗೆ ಮನವಿ ಮಾಡಿದ್ದರು.  ಪಕ್ಷದ ಹಿತದೃಷ್ಟಿಯಿಂದ ಪಟ್ಟಿಯನ್ನು ಪರಿಷ್ಕರಣೆ ಮಾಡಬೇಕು. ಈ ಬಗ್ಗೆ ಫೆಬ್ರವರಿ 10ರೊಳಗೆ ವರದಿ ನೀಡುವಂತೆ ಬಿಎಸ್‍ವೈಗೆ ಅಮಿತ್ ಷಾ ನಿರ್ದೇಶಿಸಿದ್ದರು.

ಸೊಪ್ಪು ಹಾಕದ ಬಿಎಸ್‍ವೈ:

ವರಿಷ್ಠರೇ ಪಟ್ಟಿ ಬದಲಾಯಿಸುವಂತೆ ಸೂಚಿಸಿದ್ದರೂ ಯಡಿಯೂರಪ್ಪ ಮಾತ್ರ ಈಗಾಗಲೇ ಅಂತಿಮಗೊಂಡಿರುವ ಪದಾಧಿಕಾರಿಗಳ ಪಟ್ಟಿಯನ್ನು ಬದಲಾಯಿಸದಿರಲು ಮೊಂಡು ಹಠ ಹಿಡಿದಿದ್ದಾರೆ. ಇದು ಸಹಜವಾಗಿ ಈಶ್ವರಪ್ಪನವರ ಕಣ್ಣು ಕೆಂಪಾಗುವಂತೆ ಮಾಡಿದೆ. ಇದೇ 10ರೊಳಗೆ ಪಟ್ಟಿ ಪರಿಷ್ಕರಿಸದಿದ್ದರೆ ಪುನಃ ಬಂಡಾಯ ಸಾರುವುದಾಗಿ ಈಶ್ವರಪ್ಪ ತಮ್ಮ ಆಪ್ತರ ಬಳಿ  ಹೇಳಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಸಂಸತ್‍ನ ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ. ಮೂಲಗಳ ಪ್ರಕಾರ ಭಾನುವಾರ ಸಭೆ ಸೇರುವ ಸಾಧ್ಯತೆ ಇದೆ. ಅಮಿತ್ ಷಾ ಸೂಚನೆಯಂತೆ ಸಮನ್ವಯ ಸಮಿತಿಯಲ್ಲಿ ಯಡಿಯೂರಪ್ಪ, ಮುರಳೀಧರ್‍ರಾವ್ ಹಾಗೂ ಅರುಣ್‍ಕುಮಾರ್ ಸಮಿತಿ ಸದಸ್ಯರಾಗಿದ್ದರು.  ಪಟ್ಟಿ ಬದಲಾಯಿಸಿದರೆ ರಾಜಕೀಯವಾಗಿ ತಮಗೆ ಹಿನ್ನಡೆಯಾಗಬಹುದೆಂಬ ಆತಂಕದಿಂದ ಯಡಿಯೂರಪ್ಪ ಮೀನಾಮೇಷ ಎಣಿಸುತ್ತಿದ್ದಾರೆ. ಏಕೆಂದರೆ ಈಗಾಗಲೇ ಸಿದ್ದಗೊಂಡಿರುವ ಪಟ್ಟಿಯಲ್ಲಿ ಬಹುತೇಕರು ಅವರ ಬೆಂಬಲಿಗರು. ಅದರಲ್ಲೂ ಕೆಜೆಪಿಯಿಂದ ಬಿಜೆಪಿಗೆ ವಲಸೆ ಬಂದವರು.

ಎಲ್ಲೆಲ್ಲಿ ಬದಲಾವಣೆ:

ಪದಾಧಿಕಾರಿಗಳ ಪಟ್ಟಿ ಅಂತಿಮಗೊಂಡ ಬಳಿಕ ಅಸಮಾಧಾನ ಹೊರಹಾಕಿದ್ದ ಈಶ್ವರಪ್ಪ ನಿಷ್ಠಾವಂತರನ್ನು ಕಡೆಗಣಿಸಿ ಅವರ ಆಪ್ತರಿಗೆ ಮಣೆ ಹಾಕಲಾಗಿದೆ ಎಂದು ಕಿಡಿಕಾರಿದ್ದರು.
ಅಲ್ಲದೆ ಸಂಗೊಳ್ಳಿರಾಯಣ್ಣ ಬ್ರಿಗೇಡ್ ಮೂಲಕ ಯಡಿಯೂರಪ್ಪನವರಿಗೆ ಸೆಡ್ಡು ಹೊಡೆದು ಪಕ್ಷದಲ್ಲಿ ಪರ್ಯಾಯ ಶಕ್ತಿಯೊಂದನ್ನು ಹುಟ್ಟುಹಾಕಿದ್ದರು. ಈಗಾಗಲೇ ನೇಮಕಗೊಂಡಿರುವ ತುಮಕೂರಿನ ಜ್ಯೋತಿಗಣೇಶ್, ಚಾಮರಾಜನಗರದ ಪ್ರೊಮಲ್ಲಿಕಾರ್ಜುನಪ್ಪ, ಮೈಸೂರಿನ ಡಾ.ಮಂಜುನಾಥ್, ದಾವಣಗೆರೆಯ ಯಶವಂತರಾವ್ ಜಾಧವ್, ಹಾವೇರಿಯ ಶಿವರಾಜ್ ಸಜ್ಜನವರ್, ಬಳ್ಳಾರಿಯ ಎಸ್.ಗುರುಲಿಂಗನಗೌಡ, ಹಾಸನದ ಯೋಗ ರಮೇಶ್, ಕಲಬುರಗಿ ಗ್ರಾಮಾಂತರ ಜಿಲ್ಲೆಯ ದೊಡ್ಡಪ್ಪ ಗೌಡ ಪಾಟೀಲ್, ಮಂಡ್ಯದ ನಾಗನಗೌಡ, ಬೀದರ್‍ನ ಶೈಲೇಂದ್ರ ಬೆಲ್ದಾಳೆ ಅವರುಗಳನ್ನು ಬದಲಾಯಿಸಿ ನಿಷ್ಠರಿಗೆ ನೀಡಬೇಕೆಂಬುದು ಈಶ್ವರಪ್ಪ ಬಣದ ಒತ್ತಾಯ.

ಶಿವಮೊಗ್ಗದಲ್ಲಿ ಬದಲಾವಣೆ ಬೇಡ:

ಅಚ್ಚರಿಯೆಂಬಂತೆ 2013ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣವಾಗಿದ್ದ ಶಿವಮೊಗ್ಗ ಜಿಲ್ಲಾಧ್ಯಕ್ಷ ರುದ್ರೇಶ್‍ಗೌಡ ಅವರನ್ನು ಬದಲಾವಣೆ ಮಾಡದಂತೆ ಈಶ್ವರಪ್ಪ ಬಿಎಸ್‍ವೈಗೆ ಮನವಿ ಮಾಡಿರುವುದಾಗಿ ತಿಳಿದುಬಂದಿದೆ.  ಮೊದಲು ರುದ್ರೇಶ್‍ಗೌಡ ಬದಲಾವಣೆಗೆ ಈಶ್ವರಪ್ಪ ಪಟ್ಟು ಹಿಡಿದಿದ್ದರು. ಇದೀಗ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಅವರೇ ಮುಂದುವರೆಯಲಿ ಎಂದು ಹೇಳಿರುವುದಾಗಿ ತಿಳಿದುಬಂದಿದೆ. ಶಿವಮೊಗ್ಗ ಕ್ಷೇತ್ರದಲ್ಲಿ ನಿರ್ಣಾಯಕವಾಗಿರುವ ಲಿಂಗಾಯತ ಮತದಾರ ತಮ್ಮ ವಿರುದ್ಧ ಮುನಿಸಿಕೊಳ್ಳಬಹುದೆಂಬ ಆತಂಕ ಒಂದೆಡೆಯಾದರೆ, ರುದ್ರೇಶ್‍ಗೌಡ ಈಗಲೂ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಜಿಲ್ಲೆಯಲ್ಲಿ ಅವರ ಬಗ್ಗೆ ಯಾವುದೇ ಅಸಮಾಧಾನ ಇಲ್ಲದ ಕಾರಣ ಮುಂದುವರೆಯಲಿ ಎಂಬ ಇಂಗಿತ ಹೊರಹಾಕಿದ್ದಾರೆ.
ಇನ್ನು ಇದೇ ರೀತಿ ಪಕ್ಷದ ವಿವಿಧ ಮೋರ್ಚಾಗಳ ಪಟ್ಟಿಯನ್ನೂ ಸಹ ಬದಲಾಯಿಸಬೇಕೆಂಬುದು ಕೆಲವರ ಒತ್ತಾಯವಾಗಿದೆ. ಶುಕ್ರವಾರ ಸಂಜೆ ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿರುವ ಯಡಿಯೂರಪ್ಪ ಶನಿವಾರ ಅಥವಾ ಭಾನುವಾರ ವರಿಷ್ಠರ ನಿರ್ದೇಶನದಂತೆ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.  10ರೊಳಗೆ ಪಟ್ಟಿ ಪರಿಷ್ಕರಣೆಯಾಗದಿದ್ದರೆ ಪುನಃ ಬಂಡಾಯದ ಕಹಳೆ ಊದುವುದಾಗಿ ಈಶ್ವರಪ್ಪ ಗುಡುಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin