ಬಿಕ್ಕಟ್ಟಿನಲ್ಲೇ ಅಂತ್ಯವಾದ ಬಿಜೆಪಿ ಕಾರ್ಯಕಾರಿಣಿ

BJP-Executive--01

ಬೆಂಗಳೂರು, ಮೇ 7– ಭಿನ್ನಮತ, ಅಸಮಾಧಾನಗಳನ್ನೆಲ್ಲಾ ಬದಿಗೊತ್ತಿ ಒಗ್ಗಟ್ಟು ಪ್ರದರ್ಶನಕ್ಕೆ ವೇದಿಕೆಯಾಗಬೇಕಿದ್ದ ಮೈಸೂರಿನಲ್ಲಿ ನಡೆದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಬಿಕ್ಕಟ್ಟಿನಲ್ಲೇ ಅಂತ್ಯವಾಯಿತು.   ಮೋಲ್ನೋಟಕ್ಕೆ ಭಿನ್ನಮತ ಶಮನವಾದಂತೆ ಕಂಡರೂ ನಾಯಕರುಗಳು ಒಳಗೊಳಗೇ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದುದು ಕಂಡುಬಂತು. ನಿನ್ನೆ ನಡೆದ ಕಾರ್ಯಕಾರಿಣಿಯಲ್ಲಿ ಭಿನ್ನಮತ ಬಗೆಹರಿಸಲು ನಡೆಸಿದ ಪ್ರಯತ್ನ ವಿಫಲವಾಗಿತ್ತು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಈಶ್ವರಪ್ಪ ನಡುವೆ ಉಂಟಾದ ಬಿಕ್ಕಟ್ಟು ಬಗೆಹರಿದು ಪರಸ್ಪರ ಒಬ್ಬರಿಗೊಬ್ಬರು ಹಸ್ತಲಾಘವ ಮಾಡುತ್ತಾರೆ ಎಂಬ ಬಿಜೆಪಿ ಕಾರ್ಯಕರ್ತರ ನಿರೀಕ್ಷೆ ಹುಸಿಯಾಯಿತು.   ವೇದಿಕೆ ಮೇಲೆ ಕುಳಿತಿದ್ದ ಯಡಿಯೂರಪ್ಪನವರ ಕಡೆ ಈಶ್ವರಪ್ಪ ಕೈ ಮುಗಿದರೂ ಯಡಿಯೂರಪ್ಪ ಕತ್ತೆತ್ತಿ ನೋಡಲಿಲ್ಲ.ಇಂದು ಕೂಡ ಈಶ್ವರಪ್ಪ-ಯಡಿಯೂಪ್ಪನವರ ನಡುವಿನ ಮುನಿಸು ಮುಂದುವರಿದಿತ್ತು. ವೇದಿಕೆಯಲ್ಲಿ ಅಕ್ಕಪಕ್ಕ ಕುಳಿತುಕೊಳ್ಳಲಿಲ್ಲ. ನಡುವೆ ಮುರಳೀಧರ್‍ರಾವ್ ಅವರು ಕುಳಿತುಕೊಂಡಿದ್ದರು. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಲಿಲ್ಲ, ಮಾತನಾಡಲಿಲ್ಲ. ಇದು ಕಾರ್ಯಕರ್ತರನ್ನು, ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡವರಿಗೆ ತೀವ್ರ ಇರಿಸು-ಮುರಿಸು ಉಂಟುಮಾಡಿತು. ಒಬ್ಬರಿಗೊಬ್ಬರು ಮುಖ ಕೊಟ್ಟು ಮಾತನಾಡಲಿಲ್ಲ. ಹಾಗಾಗಿ ಕಾರ್ಯಕಾರಿಣಿಯ ಉದ್ದೇಶ ಈಡೇರಿದಂತೆ ಕಂಡುಬರಲಿಲ್ಲ. ಭಿನ್ನಮತ ಬಗೆಹರಿಯದೆ ಮತ್ತಷ್ಟು ಉಲ್ಬಣವಾಗುತ್ತದೆಯೇನೋ ಎಂಬ ಆತಂಕ ಕಾರ್ಯಕರ್ತರಲ್ಲಿ ಮೂಡಿಬಂದಿತ್ತು.’

ನಿನ್ನೆ ಈಶ್ವರಪ್ಪ ಅವರನ್ನು ಗೋಷ್ಠಿಯಿಂದ ಹೊರಗಿಡಲಾಗಿತ್ತು. ಇಂದು ಈಶ್ವರಪ್ಪ ಅವರಿಗೆ ಬರಗಾಲ ಸಂಬಂಧ ಮಾತನಾಡಲು ಅವಕಾಶ ನೀಡಲಾಗಿತ್ತು. ಈ ಅವಕಾಶ ಉಪಯೋಗಿಸಿಕೊಂಡ ಈಶ್ವರಪ್ಪ, ಬರ ಪರಿಸ್ಥಿತಿ ಕುರಿತು ನಿರ್ಣಯ ಮಂಡಿಸಿ ತಮ್ಮ ಅಸಮಾಧಾನ ಹೊರಹಾಕಿಯೇಬಿಟ್ಟರು.  ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಮೊದಲು ತಮ್ಮ ಪಕ್ಷದವರನ್ನೇ ತರಾಟೆಗೆ ತೆಗೆದುಕೊಳ್ಳುವ ಮೂಲಕ ಯಡಿಯೂರಪ್ಪನವರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.  ಬರ ಪರಿಹಾರ ನಿರ್ವಹಿಸುವಲ್ಲಿ ಪ್ರತಿಪಕ್ಷವಾದ ಬಿಜೆಪಿಯೂ ಕೂಡ ವಿಫಲವಾಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಬರ ಪರಿಹಾರ ಮಾಡುವಲ್ಲಿ ಎಡವಿದ್ದಾರೆ. ನೀರಿನ ಸಮಸ್ಯೆ ಇರುವ ಕಡೆ ಹೋಗುತ್ತಿಲ್ಲ. ಜನರ ಕಷ್ಟವನ್ನು ನಾವು ಕೇಳುತ್ತಿಲ್ಲ ಎಂದು ಟೀಕಿಸಿಕೊಂಡರು. ಆನಂತರ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದರು.

ಕಳೆದ 10 ದಿನಗಳಿಂದ ತೀವ್ರವಾಗಿ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆಗಳು ನಡೆಯುತ್ತಿದ್ದವು. ರಾಯಣ್ಣ ಬ್ರಿಗೇಡ್ ಹಾಗೂ ಬಿಜೆಪಿ ನಡುವೆ ನಡೆಯುತ್ತಿದ್ದ ಭಿನ್ನಮತೀಯ ಚಟುವಟಿಕೆಗಳು ಉಲ್ಬಣಗೊಂಡಿದ್ದವು. ಬಿಜೆಪಿ ಕಾರ್ಯಕಾರಿಣಿಯಲ್ಲಿ ಈ ಭಿನ್ನಮತೀಯ ಚಟುವಟಿಕೆಗಳಿಗೆ ಕಡಿವಾಣ ಬೀಳಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಇದು ಹುಸಿಯಾಗಿದೆ. ನಾಯಕರ ಮುನಿಸು, ಗುದ್ದಾಟ, ಪ್ರತಿಷ್ಠೆ ಮುಂದುವರಿದಿದೆ.   ಈಶ್ವರಪ್ಪ ತಾತ್ಕಾಲಿಕವಾಗಿ ರಾಯಣ್ಣ ಬ್ರಿಗೇಡ್‍ಗೆ ಬ್ರೇಕ್ ಹಾಕಿ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದು ಮತ್ತೆ ಮುಂದುವರಿಸುವ ಸಾಧ್ಯತೆ ಇರುವುದರಿಂದ ವರಿಷ್ಠರಿಗೆ ಬಿಸಿ ತುಪ್ಪವಾಗಲಿದೆ.   ಮುಂದೆ ಪರಿಸ್ಥಿತಿ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin