ಬಿಗ್ ಬಾಸ್ ಷೋ ಮೇಲೆ ತೂಗುಗತ್ತಿ : ರಿಯಾಲಿಟಿ ಶೋ ನಡೆಸುವ ನಟ-ನಟಿಯರ ವಿರುದ್ಧ ಪ್ರತಿಭಟನೆ

Spread the love

Bigg-Boss ಬಿಡದಿ,ಅ.8-ಕನ್ನಡ ಚಿತ್ರರಂಗದ ನಟ-ನಟಿಯರು ರಿಯಾಲಿಟಿ ಶೋ ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ಒತ್ತಾಯಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ನಿರ್ಮಾಪಕರು, ವಿತರಕರು ಇನ್ನೋವೇಟಿವ್ ಫಿಲ್ಮ್ ಸಿಟಿ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.  ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದು, ಕನ್ನಡ ಚಿತ್ರರಂಗದ ಖ್ಯಾತ ನಟ ಸುದೀಪ್ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು, ಅಲ್ಲದೆ ಯಾವುದೇ ರಿಯಾಲ್ಟಿ ಶೋಗಳಲ್ಲಿ ಚಿತ್ರರಂಗದ ಹೆಸರಾಂತ ನಟ-ನಟಿಯರು ಕಾಣಿಸಿಕೊಳ್ಳಬಾರದೆಂದು ಒತ್ತಾಯಿಸಿದರು.

ಕನ್ನಡ ಚಿತ್ರರಂಗದ ನಟ-ನಟಿಯರು ಕಿರುತೆರೆ ಹಾಗೂ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡರೆ ಕನ್ನಡ ಚಿತ್ರಗಳಿಗೆ ಭಾರೀ ಹೊಡೆತ ಬೀಳಲಿದೆ. ಅಲ್ಲದೆ ಚಿತ್ರಮಂದಿರಗಳಿಗೆ ಜನರು ಬರುವುದು ಕಡಿಮೆಯಾಗುತ್ತದೆ. ಇದನ್ನೇ ನಂಬಿಕೊಂಡಿರುವ ನಿರ್ಮಾಪಕರಿಗೆ ಬಹಳಷ್ಟು ತೊಂದರೆಯಾಗಲಿದೆ ಎಂದು ಹೇಳಿದ್ದಾರೆ.  ನಟರು ಯಾವುದೇ ಶೋಗಳಲ್ಲಿ ಭಾಗವಹಿಸಬಾರದೆಂದು ತಿಳಿಸಲಾಗಿದೆ. ಇಂದಿನಿಂದ ಆರಂಭವಾಗಲಿರುವ ಬಿಗ್ ಬಾಸ್‍ನ ಲೈವ್ ಕಾರ್ಯಕ್ರಮದಲ್ಲಿ ಸುದೀಪ್ ಭಾಗವಹಿಸಬಾರದೆಂದು ಫಿಲ್ಮ್ ಸಿಟಿ ಮುಂಭಾಗ ಮಾನವ ಸರಪಳಿ ನಿರ್ಮಿಸು ಮೂಲಕ ಆಗ್ರಹಿಸಲಾಯಿತು.

ಹೆಸರಾಂತ ನಟ-ನಟಿಯರು ಕಿರುತೆರೆ ಹಾಗೂ ರಿಯಾಲ್ಟಿ ಶೋಗಳಲ್ಲಿ ಭಾಗವಹಿಸುವುದರಿಂದ ಕನ್ನಡ ಚಿತ್ರಗಳನ್ನು ನೋಡಲು ಜನ ಬರುವುದಿಲ್ಲ, ಸಿನಿಮಾವನ್ನೇ ನಂಬಿ ಜೀವನ ನಡೆಸುವ ನಿರ್ಮಾಪಕರ ಗತಿಯೇನು ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಕಾರ್ಯದರ್ಶಿ ಎಂ.ಜಿ.ರಾಮಮೂರ್ತಿ, ವೆಂಕಟೇಶ್, ಭಾಮಾ ಹರೀಶ್, ಉಮೇಶ್ ಬಣ್ಣಗಾರ್ ಪ್ರಶ್ನಿಸಿದರು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ಎದ್ದಿರುವ ರಿಯಾಲಿಟಿ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ನಟನಟಿಯರ ಭಾಗವಿಸುವಿಕೆಯ ಬಿರುಗಾಳಿಯಿಂದ ನಿರ್ಮಾಪಕರ ಬದುಕಿಗೆ ಹೊಡೆತ ಬಿದ್ದಂತಾಗಿದ್ದು, ಈ ಹಿನ್ನೆಲೆಯಲ್ಲಿ ಕಲಾವಿದರು ಯಾವ ನಿರ್ಧಾರಕ್ಕೆ ಬರುತ್ತಾರೆ, ನಿರ್ಮಾಪಕರ ಕಷ್ಟಗಳಿಗೆ ಹೇಗೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

► Follow us on –  Facebook / Twitter  / Google+

Facebook Comments

Sri Raghav

Admin