ಬಿಜೆಪಿಗೆ ಟಾಂಗ್ ಕೊಡಲು ಸಿದ್ದರಾಮಯ್ಯ ರೆಡಿ, ‘ಜನಪ್ರಿಯತೆ’ ಬಜೆಟ್ ಮಂಡನೆ

Spread the love

Siddaramaiah-Budget---2017

ಬೆಂಗಳೂರು, ಮಾ.13-ಉತ್ತರ ಭಾರತ ಮತ್ತು ಉತ್ತರಾಖಂಡ್‍ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ರಾಜಕೀಯ ಸಮೀಕರಣದ ದಿಕ್ಕು ದೆಸೆಯನ್ನೇ ಬದಲಾಯಿಸಿರುವ ಹಿನ್ನೆಲೆಯಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್ ಜನಪ್ರಿಯತೆಯ ಹಳಿಯ ಮೇಲೆ ಸಾಗಲಿದೆ.
ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನಪ್ರಿಯ ಬಜೆಟ್‍ಗೆ ಒತ್ತು ನೀಡಲಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವುದು ಹಾಗೂ ಬಿಜೆಪಿ ಅಬ್ಬರವನ್ನು ತಡೆಗಟ್ಟಲು ಹೊಸ ಯೋಜನೆಗಳಿಗೆ ಆದ್ಯತೆ ನೀಡಿದ್ದಾರೆ. ತಮ್ಮ ದಾಖಲೆಯ 12ನೇ ಬಜೆಟ್‍ನಲ್ಲಿ ಮುಖ್ಯಮಂತ್ರಿಯವರು ಸರ್ವಪ್ರಿಯ ಹಾಗೂ ಸರ್ವರೂ ಸಮ್ಮತಿಸುವ ಬಜೆಟ್ ಮಂಡನೆಗೆ ಆಲೋಚಿಸಿದ್ದು , ಅನೇಕ ಹೊಸ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ.

ಭೀಕರ ಬರಗಾಲದ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನಾಡಿನ ಅನ್ನದಾತನಿಗೆ ಸಂಜೀವಿನಿಯಾಗುವ ಸಹಕಾರ ಸಂಘಗಳ ರೈತರ ಸಾಲಮನ್ನಾ ಘೋಷಣೆ ಮಾಡುವುದು ಖಚಿತವಾಗಿದೆ.   ರಾಜ್ಯದ ವಿವಿಧ ಸಹಕಾರ ಬ್ಯಾಂಕ್‍ಗಳಿಂದ ರೈತರು ಪಡೆದಿರುವ 10 ಸಾವಿರ ಕೋಟಿಗೂ ಅಧಿಕ ಸಾಲವನ್ನು ಮನ್ನಾ ಮಾಡುವ ಸಾಧ್ಯತೆ ಇದೆ. ಇದರಿಂದ ಸುಮಾರು 14 ಲಕ್ಷ ರೈತರು ಇದರ ಲಾಭ ಪಡೆಯಲಿದ್ದಾರೆ. ಈ ಮೂಲಕ ಸರ್ಕಾರ ಸಂಕಷ್ಟದಲ್ಲೂ ರೈತರ ನೆರವಿಗೆ ಧಾವಿಸಿದೆ ಎಂಬ ಅನುಕಂಪವನ್ನು ಪಡೆಯುವುದು ಅವರ ಉದ್ದೇಶಿತ ಯೋಜನೆಗಳಲ್ಲೊಂದು.

ರೈತರ ಸಾಲ ಮನ್ನಾ ಮಾಡಿ ಎಂದು ಅಬ್ಬರಿಸುತ್ತಿರುವ ಪ್ರತಿ ಪಕ್ಷ ಬಿಜೆಪಿಗೆ ಟಾಂಗ್ ಕೊಡುವುದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡುವಂತೆ ಕೇಂದ್ರಕ್ಕೆ ಒತ್ತಡ ಹಾಕಿಸುವುದು ಅವರ ಲೆಕ್ಕಾಚಾರ.   ಇನ್ನು ಮುಖ್ಯಮಂತ್ರಿಗಳ ಜನಪ್ರಿಯ ಯೋಜನೆಗಳಾದ ಅನ್ನಭಾಗ್ಯ, ಶಾದಿಭಾಗ್ಯ, ಹಾಲಿನ ಪ್ರೋತ್ಸಾಹ ಧನ ಹೆಚ್ಚಳ , ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ, ಹಿರಿಯ ನಾಗರಿಕರಿಗೆ ನೀಡುತ್ತಿರುವ ಪಿಂಚಣಿ ವೇತನ ಹೆಚ್ಚಳ , ವಿಧವಾ ವೇತನ ಹೆಚ್ಚಳ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳಿಗೆ ಅನುದಾನ ದುಪ್ಪಟ್ಟು ಸಿಗಲಿದೆ.
ನೋಟು ಅಮಾನೀಕರಣದ ನಡುವೆಯೂ ಈ ಬಾರಿ ತೆರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹವಾಗದಿರುವ ಕಾರಣ ತೆರಿಗೆ ಏರಿಕೆ ಹೆಚ್ಚಳವಾಗಿದೆ. ಮುದ್ರಾಂಕ ಮತ್ತು ನೋಂದಣ ಶುಲ್ಕ , ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ, ಸ್ವಂತ ತೆರಿಗೆ, ಆಸ್ತಿ ನೋಂದಣಿ ಸೇರಿದಂತೆ ಸರ್ಕಾರಕ್ಕೆ ಆದಾಯ ತರುವ ಇಲಾಖೆಗಳಿಗೆ ತೆರಿಗೆ ಬಿಸಿ ತಟ್ಟಲಿದೆ.

ಸುಮಾರು 2 ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಿರುವ ಸಿದ್ದರಾಮಯ್ಯನವರು ಎಂದಿನಂತೆ ನೀರಾವರಿ, ಶಿಕ್ಷಣ , ಕೈಗಾರಿಕೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್, ಕೃಷಿ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಹಾಗೂ ಕುಟುಂಬ ಕಲ್ಯಾಣ, ವಿದ್ಯುತ್, ಆಹಾರ ಮತ್ತು ನಾಗರಿಕ ಪೂರೈಕೆ ಸೇರಿದಂತೆ ಮತ್ತಿತರ ಇಲಾಖೆಗಳಿಗೆ ಕಳೆದ ಬಾರಿಗಿಂತ ಹೆಚ್ಚಿನ ಅನುದಾನ ಸಿಗಲಿದೆ.   ಒಂದೆಡೆ ಸಾಲದ ಪ್ರಮಾಣ ಏರಿಕೆ ಹಾಗೂ ತೆರಿಗೆ ಸಂಗ್ರಹಣೆ ಗುರಿ ವಿಫಲವಾಗಿರುವ ನಡುವೆಯೇ ಜನಪ್ರಿಯ ಯೋಜನೆಗಳೆಂದರೆ ಮತದಾರರನ್ನು ಓಲೈಸಬಹುದೆಂಬ ಲೆಕ್ಕಾಚಾರ ಸಿದ್ದರಾಮಯ್ಯನವರದಾಗಿದೆ.
ಮುಂದಿನ ವರ್ಷ ಬಜೆಟ್‍ನಲ್ಲಿ ಇನ್ನಷ್ಟು ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ ಚುನಾವಣೆಗೆ ಹೋಗುವುದು ಸಿಎಂ ಲೆಕ್ಕಾಚಾರವಾಗಿತ್ತು. ಆದರೆ ಕಳೆದ ಶನಿವಾರ ಪ್ರಕಟಗೊಂಡ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್‍ನ ಲೆಕ್ಕಾಚಾರಗಳನ್ನೇ ಬುಡಮೇಲು ಮಾಡಿದೆ.

ಕಾಂಗ್ರೆಸ್ ನಾಯಕರು ಏನೇ ಹೇಳಿದರೂ ದೇಶದಲ್ಲಿ ಈಗಲೂ ನರೇಂದ್ರ ಮೋದಿ ಅಲೆ ಇದೆ ಎಂಬುದು ಫಲಿತಾಂಶದಿಂದಲೇ ಸಾಬೀತಾಗಿದೆ. ಇನ್ನು ಬಿಜೆಪಿ ನಾಯಕರು ಮೋದಿ ಅಲೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಹಪಹಪಿಯಲ್ಲಿದ್ದಾರೆ.   ಹೀಗೆ ಬಿಜೆಪಿಯ ಅಶ್ವಮೇಧ ಯಾಗವನ್ನು ಕಟ್ಟಿ ಹಾಕಬೇಕಾದರೆ ತಾವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದು ಮತದಾರನ ಮೂಗಿಗೆ ತುಪ್ಪ ಸವರಬೇಕೆಂಬ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿಕೊಂಡಿದ್ದಾರೆ. ಹೀಗಾಗಿ ಬುಧವಾರ ಮಂಡನೆಯಾಗಲಿರುವ ಬಜೆಟ್ ಜನಪ್ರಿಯ ಬಜೆಟ್ ಎಂಬುದರಲ್ಲಿ ಎರಡು ಮಾತಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin