ಬಿಜೆಪಿಯತ್ತ ಮುಖ ಮಾಡಿದ ಸಿಎಂ ಸಿದ್ದರಾಮಯ್ಯನವರ ಆಪ್ತ

M.Nagaraj

ಬೆಂಗಳೂರು, ಅ.27- ಕಾಂಗ್ರೆಸ್ ಮುಖಂಡ ಹಾಗೂ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಸಿದ್ದರಾಮಯ್ಯನವರ ಪರಮಾಪ್ತರಲ್ಲಿ ಒಬ್ಬರಾಗಿದ್ದ ಎಂ.ನಾಗರಾಜ್ ಅವರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಗೆಳೆಯರ ಬಳಗ ಹಾಗೂ ನಂದಿನಿ ಲೇಔಟ್ ವಾರ್ಡ್‍ನಲ್ಲಿ ಮೂರು ಬಾರಿ ಕಾಂಗ್ರೆಸ್ ಪಕ್ಷದಿಂದ ಬಿಬಿಎಂಪಿ ಸದಸ್ಯರಾಗಿದ್ದ ಅವರು, ಈಗ ಯಡಿಯೂರಪ್ಪನವರ ನಾಯಕತ್ವದಲ್ಲಿ ಬಿಜೆಪಿ ಸೇರಲು ಮುಂದಾಗಿದ್ದಾರೆ. 2013ರ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿಯೇ ಬಿಜೆಪಿ ಸೇರುವಂತೆ ಆಹ್ವಾನ ನೀಡಲಾಗಿತ್ತಾದರೂ ಸಿದ್ದರಾಮಯ್ಯನವರ ನಾಯಕತ್ವಕ್ಕೆ ಬೆಂಬಲ ನೀಡಿ ಕಾಂಗ್ರೆಸ್ ಪಕ್ಷದಲ್ಲಿ ಉಳಿದುಕೊಂಡಿದ್ದರು. ಈಗ ಅವರ ನಾಯಕತ್ವದಿಂದ ಬೇಸತ್ತು ಭ್ರಮನಿರಸನಗೊಂಡು ಪಕ್ಷ ತೊರೆಯಲು ಮುಂದಾಗಿದ್ದು, ಈ ಕುರಿತು ಯಡಿಯೂರಪ್ಪನವರ ಜೊತೆ ಎರಡು ಬಾರಿ ಪ್ರತ್ಯೇಕವಾಗಿ ಮಾತುಕತೆ ಕೂಡ ನಡೆಸಿದ್ದಾರೆ.


ಬಿಎಸ್‍ವೈ ಅವರು ಇವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಮುಕ್ತ ಮನಸ್ಸು ಹೊಂದಿದ್ದು, ಸಂಸದರು ಹಾಗೂ ಕೇಂದ್ರ ಸಚಿವರಾದ ಸದಾನಂದಗೌಡರು, ಮಾಜಿ ಸಚಿವರಾದ ಆರ್.ಅಶೋಕ್ ಮತ್ತಿತರ ಮುಖಂಡರು ಹಾಗೂ ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಗಣ್ಯರ ನೇತೃತ್ವದಲ್ಲಿ ಸಭೆ ನಡೆಸಿ ಪಕ್ಷ ಸೇರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ನಂತರ ನವೆಂಬರ್ 27 ರಂದು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಹಿಂದುಳಿದ ವರ್ಗದವರ ಬೃಹತ್ ಸಮಾವೇಶದಲ್ಲಿ ವಿದ್ಯುಕ್ತವಾಗಿ ಅಮಿತ್ ಷಾ ಅವರ ನೇತೃತ್ವದಲ್ಲಿ ಎಂ.ನಾಗರಾಜ್ ಅವರು ಬಿಜೆಪಿ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಬಾರಿ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಹರೀಶ್ ಸೇರಿದಂತೆ ಎಲ್ಲಾ ಮುಖಂಡರು, ಮಹಾಲಕ್ಷ್ಮಿ ಲೇಔಟ್ ಬಿಜೆಪಿ ಬಿಬಿಎಂಪಿ ಸದಸ್ಯರು, ಮಾಜಿ ಸದಸ್ಯರು, ಸ್ಥಳೀಯ ಬಿಜೆಪಿ ಮುಖಂಡರು ನಾಗರಾಜ್ ಸೇರ್ಪಡೆಗೆ ಒಲವು ವ್ಯಕ್ತಪಡಿಸಿದ್ದಾರೆ.  2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಮರ್ಥರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರೂ ಕೂಡ ಇವರು ಪಕ್ಷಕ್ಕೆ ಬರುವುದನ್ನು ಸ್ವಾಗತಿಸಿದ್ದು, ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಕೆಲಸ ಮಾಡುವಂತೆ ಸೂಚಿಸಿದ್ದಾರೆ.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ 2018ರ ಚುನಾವಣೆಗೆ ಸಮರ್ಥ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಎಂ.ನಾಗರಾಜ್ ಅವರಿಗೆ ಈ ಅವಕಾಶ ಸಿಕ್ಕರೆ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಸಾಧಕ-ಬಾಧಕಗಳ ಬಗ್ಗೆ ಪಕ್ಷದ ಮುಖಂಡರು ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಇನ್ನೂ ಅನೇಕ ಮುಖಂಡರು ಪಕ್ಷ ಸೇರ್ಪಡೆಗೆ ಮುಂದಾಗಿದ್ದಾರೆ.  ಪಕ್ಷ ಯಾರಿಗೆ ಮಣೆ ಹಾಕುತ್ತದೆ, ಯಾರಿಗೆ ಮನ್ನಣೆ ನೀಡುತ್ತದೆ, ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಯಾರಿಗೆ ಟಿಕೆಟ್ ನೀಡುತ್ತಾರೆ. ಸ್ಥಳೀಯರು ಮುಖಂಡರು ಯಾರಿಗೆ ಶಿಫಾರಸು ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಇದ್ದ ಎಂ.ನಾಗರಾಜ್ ಅವರು ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಸೋತ ನಂತರ ರಾಜಕೀಯದಲ್ಲಿ ತಟಸ್ಥವಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಾಗಲಿ, ಸರ್ಕಾರದಲ್ಲಾಗಲಿ ಯಾವುದೇ ಸಣ್ಣ ಅಧಿಕಾರವೂ ದೊರೆಯಲಿಲ್ಲ. ಇದರಿಂದ ಬೇಸತ್ತು ಪಕ್ಷ ತೊರೆಯುತ್ತಿರುವ ಅವರು ಮುಂಬರುವ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಈ ಸಂಬಂಧ ಕೇಂದ್ರ ಸಚಿವರಾದ ಸದಾನಂದಗೌಡ, ಆರ್.ಅಶೋಕ್, ನಗರ ಬಿಜೆಪಿ ಅಧ್ಯಕ್ಷರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ಎಲ್ಲರ ವಿಶ್ವಾಸಪಡೆದು ಪಕ್ಷ ಸೇರುವ ಸಾಧ್ಯತೆ ಇದೆ.

► Follow us on –  Facebook / Twitter  / Google+

Sri Raghav

Admin