ಬಿಜೆಪಿ ಕಾರ್ಯಕರ್ತ ಸಂತೋಷ್ ನಿವಾಸಕ್ಕೆ ಸಚಿವ ಅನಂತಕುಮಾರ್ ಭೇಟಿ

aNANT-kUMAR--01

ಬೆಂಗಳೂರು, ಫೆ.3-ದುಷ್ಕರ್ಮಿಗಳಿಂದ ಕಗ್ಗೊಲೆಯಾದ ಬಿಜೆಪಿ ಕಾರ್ಯಕರ್ತ ಸಂತೋಷ್ ನಿವಾಸಕ್ಕೆ ಇಂದು ಕೇಂದ್ರ ಸಚಿವ ಅನಂತಕುಮಾರ್ ಭೇಟಿ ನೀಡಿ ಸಾಂತ್ವನ ಹೇಳಿದರು.  ಶಿವಾಜಿನಗರದ ಚಿನ್ನಪ್ಪಗಾರ್ಡನ್‍ನಲ್ಲಿರುವ ಸಂತೋಷ್ ನಿವಾಸಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಮಾಜಿ ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಗೋವಿಂದ ಕಾರಜೋಳ, ವಿ.ಸೋಮಣ್ಣ ಮತ್ತಿತರರು ಸಂತೋಷ್ ಅವರ ತಾಯಿ ಹಾಗೂ ಸಹೋದರರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ಪಕ್ಷದ ವತಿಯಿಂದ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಆಶ್ವಾಸನೆ ಕೊಟ್ಟ ಅನಂತ್‍ಕುಮಾರ್, ಸಂಸತ್‍ನ ಅಧಿವೇಶನದಲ್ಲಿ ಈ ಘಟನೆಯನ್ನು ಗೃಹಸಚಿವರ ಗಮನಕ್ಕೆ ತರುವುದಾಗಿ ತಿಳಿಸಿದರು.

ನಮಗೆ ರಕ್ಷಣೆ ಕೊಡಿ:
ಸಚಿವ ಅನಂತಕುಮಾರ್, ಸಂತೋಷ್ ಮನೆಗೆ ಭೇಟಿ ನೀಡಿದ ವೇಳೆ ಅವರ ಕುಟುಂಬದ ಸದಸ್ಯರು ರಕ್ಷಣೆ ಕೊಡುವಂತೆ ಕಣ್ಣೀರು ಹಾಕಿದರು. ಈ ಭಾಗದಲ್ಲಿ ಗಾಂಜಾ ಮಾರಾಟದಂತಹ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಮುಂದಾದರೆ ದೈಹಿಕ ಹಲ್ಲೆಗಳು ನಡೆಯುತ್ತವೆ. ನಮಗೆ ರಕ್ಷಣೆ ಕೊಡುವಂತೆ ಸಂತೋಷ್ ತಾಯಿ ಮನವಿ ಮಾಡಿದರು. ನಾವು ಈ ಬಗ್ಗೆ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಗಾಂಜಾ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಇಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಹೆಣ್ಣು ಮಕ್ಕಳು ಹಾಡುಹಗಲೇ ತಲೆ ಎತ್ತಿ ಓಡಾಡಲು ಸಾಧ್ಯವಾಗುತ್ತಿಲ್ಲ. ಮಕ್ಕಳನ್ನು ಟೂಷನ್‍ಗೂ ಕಳಿಸದಂತಹ ಪರಿಸ್ಥಿತಿ ಇದೆ ಎಂದರು.

ಸಂಸತ್‍ನಲ್ಲಿ ಹೋರಾಟ:
ಸಂತೋಷ್ ಕುಟುಂಬದ ಸದಸ್ಯರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಕುಮಾರ್, ಕರ್ನಾಟಕದಲ್ಲಿ ನಡೆದಿರುವ ಘಟನೆಯ ಕುರಿತಂತೆ ಸಂಸತ್‍ನ ಉಭಯ ಸದನಗಳಲ್ಲೂ ಚರ್ಚೆ ನಡೆಸುವುದಾಗಿ ಹೇಳಿದರು.   ಸಂತೋಷ್ ಸಮಾಜಘಾತುಕ ಶಕ್ತಿಗಳ ವಿರುದ್ದ ಹೋರಾಟ ಮಾಡುತ್ತಿದ್ದ. ಇದನ್ನು ಸಹಿಸದ ಕೆಲ ದುಷ್ಕರ್ಮಿಗಳು ಅಮಾನುಷವಾಗಿ ಕೊಲೆ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಕಗ್ಗೊಲೆ ಮಾಡಲಾಗಿದೆ. ಈ ಬಗ್ಗೆ ಶಾಸನ ಸಭೆ ಹಾಗೂ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

Sri Raghav

Admin