ಬಿಜೆಪಿ ಗೆದ್ದಿದ್ದು ಮೋದಿ ಅಲೆಯಿಂದಲ್ಲ : ಸಿದ್ದರಾಮಯ್ಯ

Siddaramaiah-CM

ಬೆಂಗಳೂರು, ಮಾ.11-ಆಡಳಿತ ವಿರೋಧಿ ಅಲೆಯಿಂದ ಹಾಗೂ ಮತಗಳ ಧೃವೀಕರಣದಿಂದ ಉತ್ತರಪ್ರ ದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿದೆಯೇ ಹೊರತು, ಮೋದಿ ಅಲೆಯಿಂದಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.  ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಅಲೆ ಇದ್ದಿದ್ದರೆ ಪಂಜಾಬ್‍ನಲ್ಲೂ ಭಾರೀ ಬಹಿರಂಗಸಭೆ, ರೋಡ್‍ಶೋಗಳನ್ನು ಮಾಡಿದ್ದರು. ಅಲ್ಲಿ ಏಕೆ ಸೋಲಬೇಕಿತ್ತು. ಗೋವಾದಲ್ಲಿ ಆಡಳಿತಾರೂಢ ಮುಖ್ಯಮಂತ್ರಿಯೇ ಸೋತಿದ್ದಾರೆ. ಇಲ್ಲಿ ಏಕೆ ಮೋದಿ ಅಲೆ ಕೆಲಸ ಮಾಡಿಲ್ಲ ಎಂದು ಪ್ರಶ್ನಿಸಿದರು.

ಉತ್ತರಪ್ರದೇಶದಲ್ಲಿ ಅಖಿಲೇಶ್ ಯಾದವ್ ಉತ್ತಮವಾಗಿ ಕೆಲಸ ಮಾಡಿದ್ದರು. ಆದರೆ ಆಡಳಿತ ವಿರೋಧಿ ಅಲೆಯಿಂದ ಹಾಗೂ ಹಿಂದೂ ಮತಗಳ ಧೃವೀಕರಣದಿಂದ ಸೋಲುಂಟಾಗಿದೆ. ಮಣಿಪುರ, ಪಂಜಾಬ್,ಗೋವಾದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ ಎಂದು ಹೇಳಿದರು.  ಯಾವುದೇ ಕಾರಣವಿದ್ದರೂ ಪ್ರಜಾಪ್ರಭುತ್ವದಲ್ಲಿ ಸೋಲು-ಗೆಲುವನ್ನು ಸ್ವೀಕರಿಸಲೇಬೇಕು ಎಂದು ಅವರು ತಿಳಿಸಿದರು.  ಆಡಳಿತವಿರೋಧಿ ಅಲೆಯಿಂದ ಫಲಿತಾಂಶ ಪರಿಗಣಿಸುವುದಾದರೆ ರಾಜ್ಯದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಆಡಳಿತ ವಿರೋಧಿ ಅಲೆ ಕೆಲಸ ಮಾಡುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಕರ್ನಾಟಕಕ್ಕೂ ಬೇರೆ ರಾಜ್ಯಗಳಿಗೂ ಬಹಳ ವ್ಯತ್ಯಾಸವಿದೆ. ಕಳೆದ 2008ರಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯವರು ಮಾಡಿದ್ದ ಅದ್ವಾನವನ್ನು ಜನ ಇನ್ನೂ ಮರೆತಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ನಂಜನಗೂಡು-ಗುಂಡ್ಲುಪೇಟೆ ಉಪಚುನಾವಣೆ ಮೇಲೆ ಈ ಫಲಿತಾಂಶ ಪರಿಣಾಮ ಬೀರಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಂಜಾಬ್, ಗೋವಾದಲ್ಲಿ ಕಾಂಗ್ರೆಸ್ ಜಯಗಳಿಸಿಲ್ಲವೇ. ಅದರ ಪರಿಣಾಮ ಇಲ್ಲಿ ಬೀರುತ್ತದೆ ಎಂದು ಹೇಳಲಿಕ್ಕಾಗುತ್ತದೆಯೇ, ಇಲ್ಲಿಯ ಪರಿಸ್ಥಿತಿಯೇ ಬೇರೆ, ಅಲ್ಲಿಯ ಪರಿಸ್ಥಿತಿಯೇ ಬೇರೆ ಇದೆ. ಎರಡೂ ಉಪಚುನಾವಣೆಗಳಲ್ಲೂ ನಾವೇ ಗೆಲ್ಲುತ್ತೇವೆ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin