ಬಿಜೆಪಿ ಗೆಲುವಿಗೆ ಕಂಟಕವಾದ 15 ರೆಬೆಲ್‍ ಅಭ್ಯರ್ಥಿಗಳು..!

tippeswamy--01

ಬೆಂಗಳೂರು,ಮೇ3- ಹದಿನೈದು ಬಂಡಾಯ ಅಭ್ಯರ್ಥಿಗಳು ಕಣದಲ್ಲಿರುವುದು ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಕೊನೆ ಕ್ಷಣದವರೆಗೂ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸದಂತೆ ವರಿಷ್ಠರು ಮಾಡಿದ ಮನವಿಗೆ ಬಂಡಾಯ ಅಭ್ಯರ್ಥಿಗಳು ಸ್ಪಂದಿಸದೇ ಕಣದಲ್ಲಿರುವುದು ಅಧಿಕೃತ ಅಭ್ಯರ್ಥಿಗಳ ಗೆಲುವಿಗೆ ತೊಡರುಗಾಲು ಆಗಬಹುದೆಂಬ ಆತಂಕ ಕಾಡುತ್ತಿದೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಿಂದ ಹಾಲಿ ಶಾಸಕ ಬಸವರಾಜು ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತನಗೆ ಟಿಕೆಟ್ ನೀಡಬೇಕೆಂದು ಮೊದಲಿನಿಂದಲೂ ಹೋರಾಟ ನಡೆಸುತ್ತಿದ್ದ ವಿಧಾನಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ್, ಬೊಮ್ಮಾಯಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಬಂಡಾಯ ಸಾರಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಿಸಿದರು. ಪ್ರಾರಂಭದಲ್ಲಿ ಇದನ್ನು ಪಕ್ಷದ ಮುಖಂಡರು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಸೋಮಣ್ಣ ಬೇವಿನಮರದ್ ಇದೀಗ ಕಣದಲ್ಲೇ ಉಳಿಯುವ ಮೂಲಕ ಬೊಮ್ಮಾಯಿ ವಿರುದ್ಧ ತೊಡೆತಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಕುಮಟಾದಲ್ಲೂ ಬಿಜೆಪಿ ಬಂಡಾಯ ಅಭ್ಯರ್ಥಿ ಕಣದಲ್ಲಿರುವುದು ಕಮಲ ನಾಯಕರ ನಿದ್ದೆಗೆಡುವಂತೆ ಮಾಡಿದೆ. ಪ್ರಾರಂಭದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸೂರಜ್ ನಾಯ್ಕ್ ಸೋನಿ ಕಣದಲ್ಲಿರುವುದು ಪಕ್ಷದ ಉಮೇದುವಾರ ದಿನಕರ್ ಶೆಟ್ಟಿಗೆ ಟಿಕೆಟ್ ನೀಡಿರುವುದರಿಂದ ಬಂಡಾಯ ಎದ್ದಿದ್ದಾರೆ. ಇನ್ನು ಮೊಣಕಾಲ್ಮೂರು ಕ್ಷೇತ್ರದಲ್ಲಿ ಬಿಜೆಪಿ ನಾಯಕರಿಗೆ ಸವಾಲು ಹಾಕಿರುವ ತಿಪ್ಪೇಸ್ವಾಮಿ ಬಂಡಾಯದ ಬಾವುಟ ಹಾರಿಸಿದ್ದಾರೆ. ವರಿಷ್ಠರು ಬಂಡಾಯ ಎದ್ದಿರುವ ಅಭ್ಯರ್ಥಿಗಳನ್ನು ಎಷ್ಟೇ ಮನವೊಲಿಸಿದರೂ ನಾಮಪತ್ರ ಹಿಂಪಡೆಯದೆ ಕಣದಲ್ಲೇ ಉಳಿದಿರುವುದು ಬಿಜೆಪಿಗೆ ತೊಡರುಗಾಲಾಗುವ ಸಂಭವವಿದೆ.

ಈ ಮಧ್ಯೆ ನಾಮಪತ್ರ ಹಿಂಪಡೆಯುವಂತೆ ಪಕ್ಷ ನೀಡಿದ್ದ ಸ್ಪಷ್ಟ ಸೂಚನೆಯನ್ನು ಕಡೆಗಣಿಸಿ ಕಣದಲ್ಲಿ ಉಳಿದ ಪರಿಣಾಮ 15 ಬಂಡಾಯ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಆದರೂ, ಬಂಡಾಯದ ಬಿಸಿ ಬಿಜೆಪಿ ನಾಯಕರನ್ನು ಚಿಂತೆಗೆ ದೂಡಿದೆ.

Sri Raghav

Admin