ಬಿಜೆಪಿ ಪರಿವರ್ತನಾ ಯಾತ್ರೆ ಸಮಾರೋಪಕ್ಕೆ ಅರಮನೆ ಮೈದಾನದಲ್ಲಿ ಭರ್ಜರಿ ಸಿದ್ಧತೆ

Spread the love

Parivartana-Rally--01

ಬೆಂಗಳೂರು,ಜ.31-ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಎಡೆಮಾಡಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭಕ್ಕೆ ಅರಮನೆ ಮೈದಾನದಲ್ಲಿ ಭರ್ಜರಿ ಸಿದ್ಧತೆಗಳು ನಡೆದಿವೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೇರಿಸಿ ಪ್ರಧಾನಿ ಹಾಗೂ ಬಿಜೆಪಿಯ ತಾರಾ ಪ್ರಚಾರಕ ನರೇಂದ್ರ ಮೋದಿ ಅವರ ಮೂಲಕ ಚುನಾವಣಾ ರಣ ಕಹಳೆ ಮೊಳಗಿಸಲು ಕಮಲ ಪಡೆಯ ನಾಯಕರು ಟೊಂಕಕಟ್ಟಿ ನಿಂತಿದ್ದಾರೆ.

ಕನ್ನಡಪರ ಸಂಘಟನೆಗಳು ಅಂದು ಬೆಂಗಳೂರು ಬಂದ್‍ಗೆ ಕರೆ ಕೊಟ್ಟಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆಯ ಹೆಜ್ಜೆ ಇಟ್ಟಿರುವ ಬಿಜೆಪಿ ನಾಯಕರು ಸಮಾರೋಪ ಸಮಾರಂಭವನ್ನು ಯಶಸ್ವಿಗೊಳಿಸಲು ಪಣತೊಟ್ಟಿದ್ದಾರೆ.  ಕಾರ್ಯಕ್ರಮ ನಡೆಯುವ ಅರಮನೆ ಮೈದಾನದಲ್ಲಿ ಈಗಾಗಲೇ ಸಿದ್ದತೆಗಳು ಭರದಿಂದ ಸಾಗಿದೆ. ಕಾರ್ಯಕ್ರಮಕ್ಕೆ ಪ್ರಧಾನಿ ಆಗಮಿಸುತ್ತಿರುವುದರಿಂದ ಮೂರು ಲಕ್ಷ ಕುರ್ಚಿಗಳನ್ನು ಹಾಕಿದ್ದರೆ, ಎರಡು ಲಕ್ಷ ಕಾರ್ಯಕರ್ತರು ನಿಂತು ಭಾಷಣ ಆಲಿಸುವ ವ್ಯವಸ್ಥೆ ಮಾಡಲಾಗಿದೆ.

ಹಲವು ಸಮಿತಿಗಳ ರಚನೆ:
ನವೆಂಬರ್ 2ರಂದು ಬಿಜೆಪಿಯ ಪರಿವರ್ತನಾ ಯಾತ್ರೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಜನರಿಲ್ಲದೆ ಬಿಜೆಪಿ ಭಾರೀ ಮುಜುಗರಕ್ಕೆ ಸಿಲುಕಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ನಾಯಕರು ಸಮಾರೋಪ ಸಮಾರಂಭಕ್ಕೆ ಅಡೆತಡೆ ಉಂಟಾಗದಂತೆ ಹಲವು ಸಮಿತಿಗಳನ್ನು ರಚಿಸಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಸಹಕಾರ್ಯದರ್ಶಿ ಬಿ.ಎಲ್.ಸಂತೋಷ್ , ಮಾಜಿ ಸಚಿವ ಹಾಗೂ ಶಾಸಕ ಅರವಿಂದ ಲಿಂಬಾವಳಿ, ಬಿಜೆಪಿ ಮುಖಂಡ ಸುಬ್ಬಣ್ಣ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ.

ರಾಷ್ಟ್ರೀಯ ನಾಯಕರ ಸೂಚನೆಯಂತೆ ಸಮಿತಿಗಳನ್ನು ರಚಿಸಲಾಗಿದ್ದು, ಒಂದೊಂದು ಸಮಿತಿಯು ತಮಗೆ ವಹಿಸಿರುವ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವೇಡ್ಕರ್ , ಸಹ ಉಸ್ತುವಾರಿ ಪಿಯೂಷ್ ಗೋಯಲ್, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ನಿರ್ಮಲ ಸೀತಾರಾಮನ್ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವು ನಾಯಕರು ಪಾಲ್ಗೊಳ್ಳಲಿದ್ದಾರೆ.

80*40 ಅಡಿ ಅಳತೆಯ ಮುಖ್ಯ ವೇದಿಕೆಯಲ್ಲಿ ಒಟ್ಟು 27 ಮಂದಿ ನಾಯಕರು ಕೂರಲು ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಪಕ್ಕದಲ್ಲಿ ಎರಡು ಸಮನಾಂತರ ವೇದಿಕೆಗಳನ್ನು ನಿರ್ಮಾಣ ಮಾಡಲಾಗಿದ್ದು , ಒಂದರಲ್ಲಿ ಸಂಸದರು, ಶಾಸಕರು, ಮಾಜಿ ಸಚಿವರು, ಪದಾಧಿಕಾರಿಗಳು ಆಸೀನರಾಗಲಿದ್ದರೆ, ಮತ್ತೊಂದು ವೇದಿಕೆಯಲ್ಲಿ ಮನರಂಜನೆ ಕಾರ್ಯಕ್ರಮಕ್ಕಾಗಿಯೇ ವೇದಿಕೆ ಸಿದ್ದಪಡಿಸಲಾಗಿದೆ. ಮೈದಾನದಲ್ಲಿ ಮೋದಿ ಅವರ ಭಾಷಣವನ್ನು ಆಲಿಸಲು ಅನುಕೂಲವಾಗುವಂತೆ 20 ಕಡೆ 40*12 ಅಡಿ ಬೃಹದಾಕಾರದ ಎಲ್‍ಸಿಡಿಗಳನ್ನು ಹಾಕಲಾಗಿದೆ. ಮುಖ್ಯ ವೇದಿಕೆಯ ಉಸ್ತುವಾರಿಯನ್ನು ಬಿಜೆಪಿ ಮುಖಂಡ ಸುಬ್ಬಣ್ಣ ಅವರಿಗೆ ವಹಿಸಲಾಗಿದೆ.

ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಕಾರ್ಯಕರ್ತರಿಗೆ ಬೆಳಗಿನ ತಿಂಡಿ, ಮಧ್ಯಾಹ್ನದ ಭೋಜನಕ್ಕೂ ಸಹ ವ್ಯವಸ್ಥೆ ಕಲ್ಪಿಸಲಾಗಿದೆ. ಮಾಜಿ ಸಚಿವ ಕಟ್ಟಸುಬ್ರಹ್ಮಣ್ಯ ನಾಯ್ಡು ನೇತೃತ್ವದಲ್ಲಿ ಅಡುಗೆ ಸಮಿತಿಯನ್ನು ರಚಿಸಲಾಗಿದೆ. ಬೆಳಗ್ಗೆ ಕಾರ್ಯಕರ್ತರಿಗೆ ಚೌಚೌಬಾತ್, ಚಿತ್ರಾನ್ನ , ಮಧ್ಯಾಹ್ನದ ಊಟಕ್ಕೆ ಪಲಾವ್, ವಾಂಗಿಬಾತ್ ಹಾಗೂ ಮೊಸರನ್ನ ವಿತರಿಸಲಾಗುವುದು. ಇದಕ್ಕಾಗಿಯೇ ನಾಲ್ಕು ತಾತ್ಕಾಲಿಕ ಅಡುಗೆ ಮನೆಗಳನ್ನು ನಿರ್ಮಾಣ ಮಾಡಲಾಗಿದೆ.

ರಾಜ್ಯದ ನಾನಾ ಭಾಗಗಳಿಂದ ಸುಮಾರು 5 ಸಾವಿರ ಬಸ್‍ಗಳು ಆಗಮಿಸಲಿವೆ. ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಹಾಗೂ ಖಾಸಗಿ ಬಸ್‍ಗಳಿಗೆ ಅರಮನೆ ಮೈದಾನದ ಮಾವಿನ ಮಂಡಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಒಟ್ಟು 13 ಕಡೆ ಪ್ರವೇಶದ್ವಾರಗಳನ್ನು ನಿರ್ಮಾಣ ಮಾಡಲಾಗಿದ್ದು , ಬಳ್ಳಾರಿ ರಸ್ತೆಯಲ್ಲಿ ಮೂರು, ಯಶವಂತಪುರದಿಂದ ಆಗಮಿಸುವ ಬಸ್‍ಗಳು, ಮಾವಿನ ಮಂಡಿ ಮೂಲಕ ಪ್ರವೇಶ ಪಡೆಯಬಹುದು.   ಮಾಧ್ಯಮ ನಿರ್ವಹಣೆಗಾಗಿ ಮಾಜಿ ವಿಧಾನಪರಿಷತ್ ಸದಸ್ಯ ಅಶ್ವಥ್ ನಾರಾಯಣ ಹಾಗೂ ಪಕ್ಷದ ಸಹ ವಕ್ತಾರ ಎ.ಎಚ್.ಆನಂದ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಇಡೀ ಕಾರ್ಯಕ್ರಮ ಮುಗಿಯುವರೆಗೂ ಮಾಧ್ಯಮ ನಿರ್ವಹಣೆಯನ್ನು ಈ ಸಮಿತಿ ಮಾಡಲಿದೆ.

ಗೃಹ ಇಲಾಖೆಗೆ ಸಂಬಂಧಿಸಿದಂತೆ ಮಾಜಿ ಬಿಬಿಎಂಪಿ ಉಪಮೇಯರ್ ಹರೀಶ್ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ರಚಿಸಲಾಗಿದೆ. ಸಂಚಾರ ನಿರ್ವಹಣೆ ಸಮಿತಿಗೆ ಮಾಜಿ ಬಿಬಿಎಂಪಿ ಸದಸ್ಯ ರಾಮಮೂರ್ತಿ, ಹೊರಭಾಗದಿಂದ ಆಗಮಿಸುವ ಕಾರ್ಯಕರ್ತರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸಚ್ಚಿದಾನಂದಮೂರ್ತಿ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚನೆಯಾಗಿದೆ.  ಪ್ರಧಾನಿಯವರು ದೆಹಲಿಯಿಂದ ವಿಶೇಷ ವಿಮಾನದಲ್ಲಿ ಎಚ್‍ಎಚ್‍ಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಅರಮನೆ ಮೈದಾನಕ್ಕೆ ಆಗಮಿಸಲಿದ್ದಾರೆ. ಇದಕ್ಕಾಗಿ ಮೂರು ಹೆಲಿಪ್ಯಾಡ್‍ಗಳನ್ನು ನಿರ್ಮಾಣ ಮಾಡಲಾಗಿದೆ. ಇಡೀ ಕಾರ್ಯಕ್ರಮದ ಉಸ್ತುವಾರಿಯನ್ನು ಸಂತೋಷ್, ಅರವಿಂದ ಲಿಂಬಾವಳಿ, ಸುಬ್ಬಣ್ಣ , ರವಿಕುಮಾರ್ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಲೋಪದೋಷ ಉಂಟಾಗದಂತೆ ಹೆಜ್ಜೆ ಹೆಜ್ಜೆಗೂ ಎಚ್ಚರಿಕೆಯನ್ನು ವಹಿಸಲಾಗಿದೆ. ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ವಿಧಾನಸಭೆ ಚುನಾವಣೆಗೆ ಕೇಸರಿಪಡೆ ಅಂದೇ ರಣ ಕಹಳೆ ಊದಲಿದೆ.

Facebook Comments

Sri Raghav

Admin