ಬಿಜೆಪಿ ಪರಿವರ್ತನಾ ರ‍್ಯಾಲಿ ಸಮಾರೋಪ ಸಮಾರಂಭ ಮುಂದೂಡಿಕೆ : ಕಾರಣವೇನುಗೊತ್ತೇ..?

Parivartana-Yatre--01

ಬೆಂಗಳೂರು,ಜ.12-ವಿಧಾನಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಇದೇ 28ರಂದು ಬೆಂಗಳೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ಬಿಜೆಪಿ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ಮುಂದೂಡಲ್ಪಟ್ಟಿದೆ.   ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ಮುಖ್ಯಮಂತ್ರಿಗಳು ಸೇರಿದಂತೆ ಸುಮಾರು 5 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಸೆರಿಸಿ ಆಡಳಿತಾರೂಢ ಕಾಂಗ್ರೆಸ್ ವಿರುದ್ದ ಶಕ್ತಿ ಪ್ರದರ್ಶಿಸಲು ಕಮಲ ಪಡೆ ಲೆಕ್ಕ ಹಾಕಿತ್ತು.

ಇದೇ 25ರಂದು ಮೈಸೂರಿನಲ್ಲಿ ಕೊನೆಯ ಪರಿವರ್ತನಾ ರ್ಯಾಲಿ ಮುಗಿದ ಬಳಿಕ 28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾರಂಭ ನಡೆಸಲು ತೀರ್ಮಾನಿಸಲಾಯಿತು.  ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಂದ ದಿಕ್ಸೂಚಿ ಭಾಷಣದ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸುವುದು ರ್ಯಾಲಿಯ ಮುಖ್ಯ ಉದ್ದೇಶವಾಗಿತ್ತು. ಆದರೆ ಮಹದಾಯಿ ನದಿನೀರು ಹಂಚಿಕೆ ವಿವಾದ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಕನ್ನಡಪರ ಸಂಘಟನೆಗಳು ಇದೇ 25ರಂದು ಕರ್ನಾಟಕ ಬಂದ್‍ಗೆ ಕರೆ ನೀಡಿವೆ. 26ರಂದು ಗಣರಾಜ್ಯೋತ್ಸವ ದಿನವಾದರೆ 27 ಶನಿವಾರವಾಗಿರುತ್ತದೆ.

25ರಂದೇ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್ ಇರುವ ಕಾರಣ ಸಾಮಾನ್ಯವಾಗಿ 24ರಂದೇ ಜನರ ತಮ್ಮ ತಮ್ಮ ಊರುಗಳಿಗೆ ಮರಳುತ್ತಾರೆ. ಸರಿಸುಮಾರು 4ರಿಂದ 5 ದಿನ ರಜೆ ಸಿಗುವ ಕಾರಣ ರಾಜಕೀಯ ಸಮಾವೇಶಗಳ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಳ್ಳುವುದಿಲ್ಲ. ಈ ಹಿಂದೆ ನ.2ರಂದು ಬಿಜೆಪಿ ಪರಿವರ್ತನಾ ರ್ಯಾಲಿಯ ಉದ್ಘಾಟನಾ ಸಮಾರಂಭದಲ್ಲಿ ಜನರು ನಿರೀಕ್ಷಿತ ಪ್ರಮಾಣದಲ್ಲಿ ಸೇರದೆ ಇರುವ ಕಾರಣ ಪಕ್ಷದ ಮುಖಂಡರು ಮುಜುಗರಕ್ಕೆ ಒಳಗಾಗಿದ್ದರು. ಒಂದೆಡೆ ಕರ್ನಾಟಕ ಬಂದ್ ಹಾಗೂ ಸಾಲು ಸಾಲು ರಜೆಗಳಿರುವ ಕಾರಣ 28ರಂದು ನಡೆಸಲು ಉದ್ದೇಶಿಸಿದ್ದ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭವನ್ನು ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಸಮಾವೇಶಕ್ಕೆ ಸ್ಥಳವೇ ಸಿಕ್ಕಿಲ್ಲ:

ಇನ್ನು ಬಿಜೆಪಿಯ ಪರಿವರ್ತನಾ ರ್ಯಾಲಿಯ ಸಮಾರೋಪ ಸಮಾರಂಭ ನಡೆಯುವ ಬೆಂಗಳೂರಿನ ಅರಮನೆ ಮೈದಾನದಲ್ಲಿ ಈವರೆಗೂ ಸ್ಥಳವೇ ಸಿಕ್ಕಿಲ್ಲ. 28ರಂದು ನಡೆಯಬೇಕಿದ್ದ ಬಿಜೆಪಿಯ ಪರಿವರ್ತನಾ ರ್ಯಾಲಿ ಸಂದರ್ಭದಲ್ಲೇ ಖಾಸಗಿ ಕಾರ್ಯಕ್ರಮವೊಂದು ನಡೆಯಲಿದೆ. ಅರಮನೆ ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆಯಬೇಕೆಂದರೆ ಸರ್ಕಾರದ ಅನುಮತಿ ಪಡೆಯಬೇಕು. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ(ಡಿಪಿಎಆರ್) ಇಲಾಖೆ ಒಪ್ಪಿಗೆ ಸೂಚಿಸಿದ ನಂತರವೇ ನಿಗದಿತ ಸ್ಥಳದಲ್ಲಿ ಕಾರ್ಯಕ್ರಮವನ್ನು ಆಯೋಜಿಸಬೇಕು.

ಬಿಜೆಪಿ ಘಟಕದ ವತಿಯಿಂದ ಕಾರ್ಯಕ್ರಮ ಆಯೋಜನೆಗೆ ಅನುಮತಿ ಕೋರಿ ಪತ್ರ ನೀಡಲಾಗಿದೆಯಾದರೂ 28ರಂದು ಈಗಾಗಲೇ ಪೂರ್ವ ನಿಯೋಜಿತ ಕಾರ್ಯಕ್ರಮ ನಿಗದಿಯಾಗಿರುವ ಕಾರಣ ಸ್ಥಳ ನೀಡಲು ಆಗುವುದಿಲ್ಲ ಎಂದು ಇಲಾಖೆಯಿಂದ ಬಂದಿದೆ. ಹೀಗಾಗಿ 28ರ ಬದಲಿಗೆ ಬೇರೊಂದು ದಿನಾಂಕದೊಂದು ಕಾರ್ಯಕ್ರಮವನ್ನು ನಡೆಸಲು ಬಿಜೆಪಿ ಚಿಂತನೆ ನಡೆಸಿದೆ. ಫೆ.1ರಂದು ಕೇಂದ್ರದಲ್ಲಿ ಬಜೆಟ್ ಮಂಡನೆಯಾಗಲಿದೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಆಸಿಯಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ವಿದೇಶಕ್ಕೆ ತೆರಳುತ್ತಾರೆ. ಫೆಬ್ರವರಿ ಮೊದಲ ವಾರದಲ್ಲಿ ದಿನಾಂಕವನ್ನು ನಿಗದಿಪಡಿಸಿ ಕಮಲಪಡೆ ವಿಧಾನಸಭೆ ಚುನಾವಣೆಗೆ ರಣ ಕಹಳೆ ಮೊಳಗಿಸಲಿದೆ.

Sri Raghav

Admin