ಬಿಜೆಪಿ ಪ್ರಣಾಳಿಕೆಯಲ್ಲಿವೆ ಭರಪೂರ ‘ಭರವಸೆ’ಗಳು :  1 ಲಕ್ಷದವರೆಗೆ ರೈತರ ಸಾಲ ಮನ್ನಾ

BJP--01

ಬೆಂಗಳೂರು ,ಮೇ4-ರಾಷ್ಟ್ರೀಕೃತ ಹಾಗೂ ಸಹಕಾರಿ ಸಂಘಗಳಲ್ಲಿನ ಒಂದು ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ, 20 ಲಕ್ಷ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ 10 ಸಾವಿರ ಆರ್ಥಿಕ ನೆರವು, ರೈತರ ಪಂಪ್‍ಸೆಟ್‍ಗಳಿಗೆ 10 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಕೆ,ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇ.1ರ ಬಡ್ಡಿ ದರದಲ್ಲಿ ಎರಡು ಲಕ್ಷ ಸಾಲ,ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ಸೇರಿದಂತೆ ಹತ್ತು ಹಲವು ಭರವಸೆಗಳನ್ನೊಳಗೊಂಡ ಬಿಜೆಪಿ ಪ್ರಣಾಳಿಕೆ ಬಿಡುಗಡೆಯಾಗಿದೆ.  ನಮ್ಮ ಕರ್ನಾಟಕಕ್ಕೆ ನಮ್ಮ ವಚನ ಎಂಬ ಘೋಷ ವಾಕ್ಯದಡಿ ಸಿದ್ದಪಡಿಸಲಾಗಿರುವ ಈ ಪ್ರಣಾಳಿಕೆಯಲ್ಲಿ ಮುಂದಿನ 5 ವರ್ಷ ಕರ್ನಾಟಕದ ಸರ್ವಾಂಗೀಣ ಅಭಿವೃದ್ದಿ ಒಳಗೊಂಡ ಮುನ್ನೋಟಗಳನ್ನು ಅಳವಡಿಸಲಾಗಿದೆ.

ಕಾಲಮಿತಿಯೊಳಗೆ ಈಡೇರಿಸಬಹುದಾದ ಭರವಸೆಗಳನ್ನು ಮಾತ್ರ ಘೋಷಣೆ ಮಾಡಲಾಗಿದ್ದು , ಮುಖ್ಯವಾಗಿ ನಾಡಿನ ಅನ್ನದಾತನ ಬದುಕನ್ನು ಹಸನು ಮಾಡುವುದು, ಮಹಿಳೆಯರ ಸಬಲೀಕರಣ,ಮಹಿಳೆಯರು ಮತ್ತು ಸ್ತ್ರೀ ಶಕ್ತಿ ಸಂಘಟನೆಗಳ ಸಬಲೀಕರಣ, ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಯುವಕರಿಗೆ ಉದ್ಯೋಗಾವಕಾಶ ಸೇರಿದಂತೆ ಹಲವು ರೀತಿಯ ಭರವಸೆಗಳನ್ನು ನೀಡಲಾಗಿದೆ.  ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಮತ್ತಿತರ ಮುಖಂಡರು ಪ್ರಣಾಳಿಕೆ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಶಾಸಕ ವಿಜಯಕುಮಾರ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಒಟ್ಟು 58 ಪುಟಗಳ ಪ್ರಣಾಳಿಕೆಯಲ್ಲಿ ಕರ್ನಾಟಕದ ಸಮಗ್ರ ದೃಷ್ಟಿಕೋನವನ್ನು ಬಿಂಬಿಸುವ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ.  ನಂತರ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಮನ್ನಾ ಮಾಡುವಂತೆ ಹೋದಲ್ಲೆಲ್ಲಾ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ನಾವು ಅಧಿಕಾರಕ್ಕೆ ಬಂದ ಕೂಡಲೇ ಕೇಂದ್ರದ ಕಡೆ ನೋಡದೆ ರಾಷ್ಟ್ರೀಕೃತ ಬ್ಯಾಂಕ್‍ಗಳ 1 ಲಕ್ಷದವರೆಗಿನ ರೈತರ ಸಾಲ ಮನ್ನಾ ಮಾಡಿ ಆದೇಶ ಹೊರಡುಸುತ್ತೇವೆ. ಜೊತೆಗೆ ಸಹಕಾರಿ ಸಂಘದ ಸಾಲ ಮನ್ನಾವನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಳ,ಮೂರು ತಿಂಗಳೊಳಗೆ ನೇಕಾರರ 1 ಲಕ್ಷದವರೆಗಿನ ಸಾಲವನ್ನೂ ಮನ್ನಾ ಮಾಡುವುದಾಗಿ ಪ್ರಕಟಿಸಿದರು.

ರಾಜ್ಯದ 224 ಕ್ಷೇತ್ರಗಳ ಪ್ರವಾಸದ ವೇಳೆ ಕಂಡು ಬಂದ ಸಮಸ್ಯೆಗಳನ್ನು ಕ್ರೂಢೀಕರಿಸಿ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಅದನ್ನು ಗೌರವದಿಂದ ನಾಡಿನ ಜನತೆಗೆ ಅರ್ಪಣೆ ಮಾಡುತ್ತಿದ್ದೇವೆ.  ಮುಂದಿನ 5 ವರ್ಷ ರಾಜ್ಯದ ಅಭಿವೃದ್ಧಿಗೆ ಪೂರಕ ರೀತಿಯಲ್ಲಿ ಪ್ರಣಾಳಿಕೆ ಸಿದ್ಧಪಡಿಸಿದ್ದೇವೆ. ಜನರ ಆಶೋತ್ತರ ತಿಳಿದು ಪ್ರಣಾಳಿಕೆ ಸಿದ್ಧಪಡಿಸಲಾಗಿದೆ.   ಮೋದಿಯವರ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಮಾರ್ಗಸೂಚಿ ಇದಾಗಿದೆ ಎಂದು ಪ್ರಣಾಳಿಕೆಯನ್ನು ಸಮರ್ಥಿಸಿಕೊಂಡರು.
ಇದು ಈಡೇರಿಸಲಾಗದ ಭರವಸೆಯ ಪಟ್ಟಿ ಅಲ್ಲ, ನಮ್ಮನ್ನು ಜನ ಅಧಿಕಾರಕ್ಕೆ ತರುವುದು ಖಚಿತ, ಹಾಗಾಗಿ ಇದು ಹಣಕಾಸು ವಿವರ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಯುವ ಜನತೆ ಭವಿಷ್ಯ, ಸರ್ವರಿಗೂ ಸಮಪಾಲು ಸಮಬಾಳು ಸಾಮಾಜಿಕ ನ್ಯಾಯ, ಮಕ್ಕಳ ಶಿಕ್ಷಣಕ್ಕೆ ಕಾಯಕಲ್ಪ, ಆರೋಗ್ಯ ಕರ್ನಾಟಕ, ಮೂಲಸೌಕರ್ಯ ವಿಸ್ತರಣೆ, ಆರ್ಥಿಕ ಔದ್ಯೋಗಿಕ ವಿಸ್ತರಣೆ, ನವ ಭಾರತಕ್ಕಾಗಿ ನವ ಬೆಂಗಳೂರು ಸೇರಿದಂತೆ ಹತ್ತು ಹಲವು ಅಂಶ ಒಳಗೊಂಡ ಪ್ರಣಾಳಿಕೆ ಇದಾಗಿದೆ.  ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ ಉದ್ದೇಶದೊಂದಿಗೆ ಪ್ರಣಾಳಿಕೆ ರಚಿಸಲಾಗಿದೆ ಎಂದರು.

ಸರ್ಕಾರಿ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಅಮರಶಿಲ್ಪಿ ಜಕಣಾಚಾರಿ ಜಯಂತಿ ಆಚರಣೆ, ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ನ್ಯಾಪ್‍ಕಿನ್ ವಿತರಣೆ, ಜಿಲ್ಲಾ ಕೇಂದ್ರದಲ್ಲಿ 2, ತಾಲೂಕಿನಲ್ಲಿ 1 ಅನ್ನಪೂರ್ಣ ಕ್ಯಾಂಟಿನ್ ಆರಂಭ, ರೇಷ್ಮೆ ಬೆಳೆಗಾರರಿಗೆ 75 ಸಾವಿರದಿಂದ 1 ಲಕ್ಷದವರೆಗೆ ಸಬ್ಸಿಡಿ, ಕರ್ನಾಟಕ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಪ್ರತಿ ಮನೆಗೆ ಸೌಭಾಗ್ಯ ಯೋಜನೆಯಡಿ ವಿದ್ಯುತ್, ಮಂಗಳೂರಿನಲ್ಲಿ ಎನ್‍ಐಎ ತನಿಖಾ ಸಂಸ್ಥೆ ಸ್ಥಾಪನೆ, ಬೆಂಗಳೂರಿನಲ್ಲಿ ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ಕಿತ್ತೂರು ರಾಣಿ ಚೆನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ರಚನೆ, ಎಲ್ಲ ಜಿಲ್ಲೆಗಳಲ್ಲಿ ಲಾಲ್‍ಬಾಗ್ ಮಾದರಿ ಉದ್ಯಾನವನ ರಚನೆ, ದೇವನಹಳ್ಳಿಯಲ್ಲಿ ಡಾ.ರಾಜ್‍ಕುಮಾರ್ ಮೆಗಾಫಿಲಂ ಸಿಟಿ ಸ್ಥಾಪನೆ, ಎಟಿಎಂ ಇಲ್ಲದ ಗ್ರಾಮಗಳಲ್ಲಿ ಎಟಿಎಂ ಸ್ಥಾಪನೆ ಸೇರಿದಂತೆ ಹಲವಾರು ಮಹತ್ವದ ಯೋಜನೆಗಳನ್ನು ಬಿಜೆಪಿಯಿಂದ ಘೋಷಿಸಲಾಯಿತು.

ಬೆಂಗಳೂರಿನಲ್ಲಿ ಕರ್ನಾಟಕ ಫ್ಲೋರೆನ್ಸಿಕ್ ಸೈನ್ಸ್ ಯೂನಿವರ್ಸಿಟಿ ಸ್ಥಾಪನೆ ಮತ್ತು ಅದರ ಭಾಗವಾಗಿ ವಿಶ್ವದರ್ಜೆಯ ಸೈಬರ್ ಫ್ಲೋರೆನ್ಸಿಕ್ ಪ್ರಯೋಗಾಲಯ ನಿರ್ಮಾಣ, ಮೈಸೂರು, ಧಾರವಾಡ, ಕಲಬುರಗಿ ಮತ್ತು ಮಂಗಳೂರಿನಲ್ಲಿ ನಾಲ್ಕು ಹೊಸ ಸೈಬರ್ ಫ್ಲೋರೆನ್ಸಿಕ್ ಪ್ರಯೋಗಾಲಯಗಳ ಸ್ಥಾಪನೆ ಸೇರಿದಂತೆ ಕಾನೂನು ಸುವ್ಯವಸ್ಥೆಗೆ ಹತ್ತು-ಹಲವು ದಿಟ್ಟ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ನವ ಬೆಂಗಳೂರು ನಿರ್ಮಾಣ :
ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಸಂಚಾರಿ ದಟ್ಟಣೆಯನ್ನು ನಿವಾರಿಸಿ ಪ್ರತಿಯೊಬ್ಬರಿಗೂ ಉತ್ತಮ ಸಾರಿಗೆ ಸೌಲಭ್ಯ ಒದಗಿಸಲು ನಗರದ ಎಲ್ಲ ಪ್ರದೇಶಗಳಿಗೂ ಮೆಟ್ರೊ ವಿಸ್ತರಣೆ, ಜನರ ಅಗತ್ಯಗಳನ್ನು ಪೂರೈಸಲು ನವ ಬೆಂಗಳೂರು ಕಾಯ್ದೆ, ಮಹಾನಗರವನ್ನು ವಿಶ್ವ ದರ್ಜೆಗೇರಿಸುವುದು ನಾಗರಿಕರ ಸುರಕ್ಷತೆ, ಮೂಲಭೂತ ಸೌಕರ್ಯಗಳಿಗೆ ಒತ್ತು, ವಿಮಾನ ನಿಲ್ದಾಣದವರೆಗೆ ಮೆಟ್ರೋ ವಿಸ್ತರಣೆ ಸೇರಿದಂತೆ ಬಿಜೆಪಿಯ ಪ್ರಣಾಳಿಕೆಯಲ್ಲಿ ಬೆಂಗಳೂರು ನಗರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಸಿದ್ಧಪಡಿಸಿರುವ ಪ್ರಣಾಳಿಕೆಯಲ್ಲಿ ಬೆಂಗಳೂರು ಮಹಾನಗರಕ್ಕೆ ವಿಶೇಷ ಒತ್ತು ನೀಡಲಾಗಿದೆ.

ಇಂದು ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ರಾಜ್ಯ ಬಿಜೆಪಿ ಉಸ್ತುವಾರಿ ಮುರುಳೀಧರ್ ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಸಂಸದ ಪಿ.ಸಿ.ಮೋಹನ್ ಸೇರಿದಂತೆ ಮತ್ತಿತರ ಮುಖಂಡರು ಬಿಡುಗಡೆ ಮಾಡಿದರು. ಸಂಚಾರಿ ಸಮಸ್ಯೆಯನ್ನು ನಿವಾರಿಸಲು ಬೆಂಗಳೂರು ಮಹಾನಗರ ವಲಯದ ಎಲ್ಲ ಪ್ರದೇಶಗಳಿಗೆ ಹಂತ ಹಂತವಾಗಿ ಮೆಟ್ರೋ ವಿಸ್ತರಣೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತ್ವರಿತಗತಿಯಲ್ಲಿ ಮೆಟ್ರೋ ಸಂಪರ್ಕವನ್ನು ಅನುಷ್ಠಾನ ಮಾಡುವ ಭರವಸೆಯನ್ನು ನೀಡಲಾಗಿದೆ.

ಅತ್ತಿಬೆಲೆ , ನೆಲಮಂಗಲ, ಕನಕಪುರ, ರಾಮನಗರ, ಬಿಐಎಎಲ್, ಹೊಸಕೋಟೆಯಲ್ಲಿ ಮಲ್ಟಿ ಮೋಡಲ್ ಸಾರಿಗೆ ಕೇಂದ್ರಗಳನ್ನು ನಿರ್ಮಿಸಿ ಸಂಚಾರ ಒತ್ತಡವನ್ನು ತಗ್ಗಿಸಲಾಗುವುದು. ಬಿಡದಿ, ದಾಬಸ್‍ಪೇಟೆ, ದೇವನಹಳ್ಳಿ ಮತ್ತು ಅತ್ತಿಬೆಲೆಯಲ್ಲಿ ಲಾಜಸ್ಟಿಕ್ ಪಾರ್ಕ್ ನಿರ್ಮಿಸಿ ಭಾರೀ ಸಂಚಾರ ನಿಯಂತ್ರಣವನ್ನು ತಡೆಗಟ್ಟಲು ಈ ಕ್ರಮಗಳನ್ನು ಕೈಗೊಳ್ಳುವ ಆಶ್ವಾಸನೆಗಳನ್ನು ನೀಡಲಾಗಿದೆ. ಬೆಂಗಳೂರು ಮಹಾನಗರವನ್ನು ವಿಶ್ವದರ್ಜೆ ನಗರವನ್ನಾಗಿಸಲು ಅತ್ಯಾಧುನಿಕ ಮೂಲಭೂತ ಸೌಕರ್ಯ, ಗುಣಮಟ್ಟದ ಜೀವನ ಹಾಗೂ ನಾಗರಿಕರ ಆಶೋತ್ತರಗಳನ್ನು ಈಡೇರಿಸಲು ಅವಕಾಶ ಸೃಷ್ಟಿ , ಜನರ ಅಗತ್ಯಗಳನ್ನು ಪೂರೈಸಲು ನವ ಬೆಂಗಳೂರು ಕಾಯ್ದೆ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಲಾಗಿದೆ.

ಮನೆಗಳ ಬೆಲೆ ಕಡಿಮೆ ಮಾಡಲು ಉತ್ತಮ ನಗರ ಯೋಜನೆ ಮತ್ತು ವಸತಿ ಪ್ರದೇಶಗಳು ವಾಣಿಜ್ಯ ಚಟುವಟಿಕೆ ಪ್ರದೇಶಗಳಾಗುವುದನ್ನು ತಡೆಗಟ್ಟಲು ಜಪಾನಿ ಜೋನಿಂಗ ಮಾದರಿಯಲ್ಲಿ ಯೋಜನೆ ನಿರ್ಮಾಣ, ದೇವನಹಳ್ಳಿ ಬಳಿ ಐಟಿ ಸಿಟಿ ನಿರ್ಮಾಣ, ಐಐಎಸ್‍ಸಿ ಬೆಂಗಳೂರು ಹಾಗೂ ಐಐಎಂ ಬೆಂಗಳೂರು ಇವುಗಳ ಸಹಯೋಗದೊಂದಿಗೆ 200 ಕೋಟಿ ವೆಚ್ಚದಲ್ಲಿ ಕೆ-ಹಬ್ ನಿರ್ಮಾಣ ಮಾಡುವುದಾಗಿ ಘೋಷಿಸಲಾಗಿದೆ. ಐಟಿ ಉದ್ಯಮ ಎದುರಿಸುತ್ತಿರುವ ಸವಾಲುಗಳಿಗೆ ಸ್ಪಂದಿಸಲು 2011ರ ಕರ್ನಾಟಕ ಐಸಿಟಿ ನೀತಿ ಪರಿಷ್ಕರಣೆ, ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗಿನ ರಸ್ತೆ ವಿಸ್ತರಣೆ, ಬಿಟಿಎಂ ಲೇಔಟ್‍ನಿಂದ ಇಂದಿರಾನಗರ, ವರ್ತೂರು ಮೂಲಕ ಬೊಮ್ಮಸಂದ್ರದಿಂದ ಕಾಡುಗೋಡಿಗೆ, ಬೈರಮಂಗಲ ಹಾಗೂ ಇನೋವೇಟಿವ್ ಫಿಲಂ ಸಿಟಿ ಮೂಲಕ ಹಾರೋಹಳ್ಳಿಯಿಂದ ಬಿಡದಿ ಟರ್ಮಿನ್ಸ್‍ವರೆಗೆ ಸಂಪರ್ಕ ಮಾರ್ಗಗಳ ನಿರ್ಮಾಣ ಮಾಡುವ ವಾಗ್ದಾನ ಮಾಡಲಾಗಿದೆ.

ಪ್ರತಿಯೊಂದು ಮೆಟ್ರೋ ಸ್ಟೇಷನ್‍ಗಳಲ್ಲಿ ಸೈಕಲ್ ಪಾರ್ಕಿಂಗ್, ಬಸ್ ನಿಲ್ದಾಣ, ಆಟೋ ನಿಲ್ದಾಣ, ಟ್ಯಾಕ್ಸಿ ನಿಲ್ದಾಣ ಸೌಲಭ್ಯಗಳನ್ನು ಒದಗಿಸಿ ಮಲ್ಟಿ ಮೋಡಲ್ ಟ್ರಾನ್ಸ್‍ ಪೋರ್ಟ್ ಸ್ಟೇಷನ್‍ಗಳನ್ನು ಪರಿವರ್ತನೆ ಮಾಡಲಾಗುವುದು. ಕೇಂದ್ರ ಸರ್ಕಾರ ಘೋಷಿಸಿದ 17 ಸಾವಿರ ಕೋಟಿಗಳನ್ನು ಬಳಸಿ ಬೆಂಗಳೂರು ಉಪನಗರ ರೈಲ್ವೆ ಜಾಲ ಪೂರ್ಣಗೊಳಿಸಲು ಬಿ ರೈಡ್ ಸ್ಥಾಪನೆ, ಬಿಎಂಟಿಸಿ ಬಸ್ ಸಂಖ್ಯೆ ದ್ವಿಗುಣ, ಸಂಚಾರ ದಟ್ಟಣೆ ತಗ್ಗಿಸಲು ಮಿನಿ ಬಸ್ ಸೇವೆ, ಸಮೂಹ ಸಾರಿಗೆ ಜನಪ್ರಿಯಗೊಳಿಸಲು ವಿಶೇಷ ರಿಯಾಯ್ತಿ ಪ್ಯಾಕೇಜ್‍ಗಳನ್ನು ನೀಡುವ ಭರವಸೆ ನೀಡಲಾಗಿದೆ.

ಸುರಕ್ಷಿತ ಬೆಂಗಳೂರು:
ಬೆಂಗಳೂರಿನಲ್ಲಿರುವ ಪ್ರತಿಯೊಬ್ಬರಿಗೂ ಸುರಕ್ಷತೆ ಒದಗಿಸುವ ದೃಷ್ಟಿಯಿಂದ ನಗರದಲ್ಲಿನ ಪೊಲೀಸ್ ಠಾಣೆಗಳ ದ್ವಿಗುಣ, ಠಾಣೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ,ಮೂರು ಪಾಳಿಗಳ ವ್ಯವಸ್ಥೆ ಜಾರಿ, ಮಹಿಳಾ ಪೊಲೀಸ್ ಠಾಣೆಗಳ ಸಂಖ್ಯೆ ಹೆಚ್ಚಳ , ತೊಂದರೆಗೊಳಗಾಗುವ ಮಹಿಳೆಯರಿಗೆ ಸಹಾಯ ಒದಗಿಸಲು ಕಿತ್ತೂರು ರಾಣಿ ಚನ್ನಮ್ಮ ಫ್ಲೈಯಿಂಗ್ ಸ್ಕ್ವಾಡ್ ವ್ಯವಸ್ಥೆ ಜಾರಿ ಮಾಡುವ ಭರವಸೆ ಕೊಡಲಾಗಿದೆ.ಉದ್ಯೋಗಸ್ಥ ಮಹಿಳೆಯರಿಗಾಗಿ ರಾತ್ರಿ 10ರಿಂದ ಬೆಳಗ್ಗೆ 5 ಗಂಟೆಯವರೆಗೆ ಕೇವಲ ಮಹಿಳೆಯರು ಸಂಚರಿಸುವ ಜಿಪಿಎಸ್ ಬಸ್ ಸೌಲಭ್ಯ,ಆಡಳಿತಾತ್ಮಕ ವಲಯದಲ್ಲಿ ಸುಭದ್ರ ಕೇಂದ್ರಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಕಾನೂನು, ಭದ್ರತೆ, ಆಪ್ತಸಮಾಲೋಚನೆ, ವೈದ್ಯಕೀಯ ಸೌಲಭ್ಯ ನೀಡಲಾಗುವುದು.

ಬೆಂಗಳೂರಿನಲ್ಲಿರುವ ಐತಿಹಾಸಿಕ ತಾಣಗಳಿಗೆ ಪ್ರವಾಸಿಗರನ್ನು ಆಕರ್ಷಿಸಲು ನಗರದಾದ್ಯಂತ ಹೆರಿಟೇಜ್ ವಾಕ್ ಪ್ರಚುರಪಡಿಸಲಾಗಿದೆ. ಬೆಂಗಳೂರು ದರ್ಶಿನಿ ಬಸ್‍ಗಳ ಸಂಖ್ಯೆ ದ್ವಿಗುಣ, ಸೋಮೇಶ್ವರ, ಕಾಡುಮಲ್ಲೇಶ್ವರ, ಬಸವನಗುಡಿಯಂತಹ ಇತಿಹಾಸ ಪ್ರಸಿದ್ದ ದೇವಸ್ಥಾನಗಳಿಗೆ ಮೂಲಸೌಕರ್ಯ ಒದಗಿಸುವುದು, ಉದ್ಯಾನವನಗಳ ಅಭಿವೃದ್ದಿ , ಕೆರೆಗಳ ಪುನಶ್ಚೇತನ, ನಗರದಾದ್ಯಂತ ಫ್ರೀ ಆರ್ಟ್ ವಲಯ ಸ್ಥಾಪನೆ, ಪ್ರತಿಯೊಂದು ವಾರ್ಡ್‍ಗಳಲ್ಲಿ ಬಯಲು ರಂಗಮಂದಿರಗಳನ್ನು ತೆರೆಯುವ ಆಶ್ವಾಸನೆ ನೀಡಲಾಗಿದೆ.

ಮೂಲಭೂತ ಸೌಕರ್ಯಗಳ ಅಭಿವೃದ್ದಿ:
ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ಕೊಡಲಾಗುವುದು. ನಗರದಲ್ಲಿರುವ ಕೆರೆಗಳನ್ನು ಸ್ವಚ್ಛಗೊಳಿಸಿ ಪುನರುಜ್ಜೀವನಗೊಳಿಸಲು 2500 ಕೋಟಿ ವೆಚ್ಚದಲ್ಲಿ ನಾಡಪ್ರಭು ಕೆಂಪೇಗೌಡರ ನಿಧಿ ಸ್ಥಾಪಿಸಲಾಗುವುದು. 2022ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು ನೀಡುವ ಉದ್ದೇಶದೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಬೆಂಗಳೂರಿನಲ್ಲಿ ಅನುಷ್ಠಾನ ಮಾಡಲಾಗುವುದು.  ಬೆಂಗಳೂರನ್ನು ಕಸ ಮುಕ್ತ ನಗರವನ್ನಾಗಿಸುವುದು, ತ್ಯಾಜ್ಯ ಪುನರ್ಬಳಕೆ, ಪ್ರತಿ ವಾರ್ಡ್‍ನಲ್ಲಿ 10 ಸಾರ್ವಜನಿಕ ಸೌಲಭ್ಯಗಳ ಸ್ಥಾಪನೆ, ಪ್ರತಿಯೊಬ್ಬರಿಗೂ ಉತ್ತಮ ಆರೋಗ್ಯ ನೀಡಲು ಎಲ್ಲ ವಾರ್ಡ್‍ಗಳಲ್ಲೂ ಆಯುಷ್ಮಾನ್ ಚಿಕಿತ್ಸಾಲಯ ಸೇರಿದಂತೆ ಬೆಳೆಯುತ್ತಿರುವ ಬೆಂಗಳೂರಿನ ಸಮಸ್ಯೆಗಳನ್ನು ನಿವಾರಿಸಲು ಹಲವು ರೀತಿಯ ಭರವಸೆಗಳನ್ನು ನೀಡಲಾಗಿದೆ.

Sri Raghav

Admin