ಬಿಜೆಪಿ ಬಿಕ್ಕಟ್ಟು ಮತ್ತಷ್ಟು ಉಲ್ಬಣ, ವರಿಷ್ಠರಿಗೆ ತಲೆಬಿಸಿ

Yadiyurappa-And-Eshwarapa

ಬೆಂಗಳೂರು, ಮೇ 3- ಪರಸ್ಪರ ಒಬ್ಬರ ಮೇಲೆ ಮತ್ತೊಬ್ಬರು ಕತ್ತಿ ಮಸೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕದೊಳಗೆ ನಡೆಯುತ್ತಿರುವ ಭಿನ್ನಮತೀಯ ಚುಟುವಟಕೆಗಳನ್ನು ಹತ್ತಿಕ್ಕುವುದು ಕೇಂದ್ರ ವರಿಷ್ಠರಿಗೆ ಭಾರೀ ಸವಾಲಾಗಿ  ಪರಿಣಿಮಿಸಿದೆ.ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಒಳ ಜಗಳ ಸದ್ಯಕ್ಕೆ ಶಮನವಾಗುವ ಲಕ್ಷಣವಿಲ್ಲ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಸಡ್ಡು ಹೊಡೆಯಲು ಭಿನ್ನಮತೀಯರು ತೀರ್ಮಾನಿಸಿದ್ದು, ಮತ್ತೊಮ್ಮೆ ರಾಜ್ಯ ಕಮಲದ ಒಳ ಜಗಳ ತಾರಕಕ್ಕೇರುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹಾಗೂ ಭಿನ್ನಮತೀಯ ನಾಯಕನಾಗಿರುವ ಕೆ.ಎಸ್.ಈಶ್ವರಪ್ಪ ಪರಸ್ಪರ ಕತ್ತಿ ಮಸೆಯುತ್ತಿರುವುದರಿಂದ ಕೇಂದ್ರ ನಾಯಕರು ಮುಂದೆ ಯಾವ ಕ್ರಮ ಜರುಗಿಸಲಿದ್ದಾರೆಂಬುದು ಕುತೂಹಲಕ್ಕೆ ಕಾರಣವಾಗಿದೆ.ಶನಿವಾರದಿಂದ ಎರಡು ದಿನಗಳ ಕಾಲ ಮೈಸೂರಿನಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ ನಡೆಯಲಿದೆ.ಅಷ್ಟರೊಳಗೆ ಪಕ್ಷದಲ್ಲಿನ ಭಿನ್ನಮತವನ್ನು ಶಮನ ಮಾಡಬೇಕು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಮುಂದುವರೆದರೆ ಈಶ್ವರಪ್ಪ ಬಣ ಗೈರು ಹಾಜರಾಗುವ ಮೂಲಕ ಇನ್ನಷ್ಟು ಮುಜುಗರ ಸೃಷ್ಟಿಸಲು ತೀರ್ಮಾನಿಸಿದೆ.ಈಗಾಗಲೇ ಸ್ವತಃ ಈಶ್ವರಪ್ಪ ಹೇಳಿರುವಂತೆ ನನಗೆ ಕಾರ್ಯಕಾರಿಣಿ ಸಭೆಗೆ ಭಾಹವಹಿಸಲು ಯಾವುದೇ ಸೂಚನೆ ಬಂದಿಲ್ಲ ಎಂದು ಹೇಳುವ ಮೂಲಕ, ನಮ್ಮ ಬಣ ದೂರ ಉಳಿಯಲಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.ಶಿಸ್ತಿನ ಪಕ್ಷವೆಂದು ಬೀಗುತ್ತಿದ್ದ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಜಗಜ್ಜಾರಿಯಾಗಿದೆ.ಪರಸ್ಪರ ಒಬ್ಬರ ಮುಖ ಮತ್ತೊಬ್ಬರು ನೋಡಲಾಗದಷ್ಟು ದೂರ ಸರಿದಿರುವುದರಿಂದ ಪಕ್ಷದೊಳಗಿನ ಅಸಮಾಧಾನವನ್ನು ಅಷ್ಟು ಸರಳವಾಗಿ ಪರಿಹರಿಸಲು ಸಾಧ್ಯವಿಲ್ಲ.

ಈ ಬೆಳವಣಿಗೆಗಳ ನಡುವೆಯೇ ಯಡಿಯೂರಪ್ಪ, ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಪಕ್ಷದ ಉಪಾಧ್ಯಕ್ಷ ಸ್ಥಾನ ನೀಡಿದ್ದಾರೆ. ಜೊತೆಗೆ ಈಶ್ವರಪ್ಪ ಟಾಂಗ್ ನೀಡಲೇಂದೇ ಅವರೇ ಸಮೂದಾಯದ ಬಿಬಿಎಂಪಿ ಮಾಜಿ ವಿರೋಧ ಪಕ್ಷದ ನಾಯಕ ಎಂ ನಾಗರಾಜ್ ಅವರನ್ನು ಕಾರ್ಯಕಾರಿಣಿ ಸಭೆಯ ವಿಶೇಷ ಆಹ್ವಾನಿತರನ್ನಾಗಿ ಮಾಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.ಅನುಮಾನಕ್ಕೆ ಎಡೆಮಾಡಿಕೊಟ್ಟ ಕೇಂದ್ರ ನಾಯಕರ ಮೌನ ಕರ್ನಾಟಕದಲ್ಲಿ ಕಳೆದ ಒಂದು ವಾರದಿಂದ ಇಬ್ಬರು ನಾಯಕರ ನಡುವೆ ಪರಸ್ಪರ ಕಚ್ಚಾಟ, ಹಾದಿ ಬೀದಿ ಜಗಳ, ಒಬ್ಬರ ಮೇಲೆ ಮತ್ತೊಬ್ಬರು ಕೆಸರೆರಚಾಟ ನಡೆಸುತ್ತಿದ್ದರೂ ಕೇಂದ್ರ ನಾಯಕರು ಮೌನ  ವಹಿಸಿರುವುದು ಹಲವು ಅನುಮಾನಗಳನ್ನು ಹುಟ್ಟಿ ಹಾಕಿದೆ.

ಬೇರೆ ರಾಜ್ಯಗಳಲ್ಲಿ ಸಣ್ಣ ಪುಟ್ಟ ಸಮಸ್ಯೆ ಬಂದರೆ ತಕ್ಷಣವೇ ಕೇಂದ್ರ ವರಿಷ್ಟರು ಮಧ್ಯ ಪ್ರವೇಶ ಮಾಡಿ ಪ್ರಾರಂಭದಲ್ಲೇ ಭಿನ್ನಮತವನ್ನು ಹೋಗಲಾಡಿಸುತ್ತಿದ್ದರು. ಆದರೆ ಒಂದು ವಾರದಿಂದ ಕರ್ನಾಟಕದಲ್ಲಿ ಇಷ್ಟೆಲ್ಲಾ ಹಾದಿ-ರಂಪ. ಬೀದಿ ರಂಪ ನಡೆಯುತ್ತಿದ್ದರೂ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಷಾ ಆಗಲೀ ಇಲ್ಲವೇ ಇತರೆ ನಾಯಕರಾಗಲೀ ಬಾಯಿ ಬಿಡದಿರುವುದೇ ಗೊಂದಲ ಮುಂದುವರೆಯಲು ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಪ್ರಾರಂಭದಲ್ಲೇ ಉಭಯ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಸಂಧಾನ ನಡೆಸಿದ್ದರೆ, ಬಿಕ್ಕಟ್ಟು ಈ ಹಂತಕ್ಕೆ ತಲುಪುತ್ತಿರಲಿಲ್ಲ.ದೆಹಲಿ ನಾಯಕರು ಕೂಡಾ ಇನ್ನಷ್ಟು ಬೀದಿ ರಂಪಾಟ ನಡೆಯಲಿ ಎಂಬ ಮನಸ್ಥಿತಿಗೆ ಬಂದಿರುವ ಕಾರಣ ಬಿಜೆಪಿಯಲ್ಲಿ ಬಿಕ್ಕಟ್ಟು ಬೃಹದಕಾರವಾಗಿ ಬೆಳೆಯುವಂತೆ ಮಾಡಿದೆ ಎಂದು ಕಾರ್ಯಕರ್ತರು ಅಸಮಾಧಾನ ಹೊರಹಾಕುತ್ತಿದ್ದಾರೆ.

ಸಡ್ಡು ಹೊಡೆಯುತ್ತಿರುವ ಈಶ್ವರಪ್ಪ :

ಮೊನ್ನೆಯಷ್ಟೇ ಯಡಿಯೂರಪ್ಪ ಮತ್ತು ಈಶ್ವರಪ್ಪ ಬಣಗಳಿಗೆ ಸರಿಯಾಗಿ ಚುರುಕು ಮುಟ್ಟಿಸಿದ್ದ ಅಮಿತ್ ಶಾ, ಭಿನ್ನಮತದ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಮತ್ತು ಅಂತಹ ಸಮಾವೇಶಗಳನ್ನು ನಡೆಸಬಾರದು ಎಂದು ಎಚ್ಚರಿಕೆ ನೀಡಿದ್ದರು.  ಸ್ವತಃ ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರರಾವ್, ಇನ್ನು ಮುಂದೆ ಸಂಗೊಳ್ಳಿ ರಾಯಣ್ಣ ಬಿಗ್ರೇಡ್ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ತಾಕೀತು ಮಾಡಿದ್ದರು.ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಈಶ್ವರಪ್ಪ ಬಣ ಮತ್ತೆ ತೊಡೆ ತಟ್ಟಲು ಸಿದ್ಧವಾಗಿದೆ. ರಾಯಚೂರಿನ ಹರ್ಷಿತಾ ಗಾರ್ಡನ್ ನಲ್ಲಿ ಮೇ 7 ಮತ್ತು 8 ರಂದು ರಾಯಣ್ಣ ಬ್ರಿಗೇಡ್ ಕಾರ್ಯಕಾರಿಣಿ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಈಶ್ವರಪ್ಪ ಖುದ್ದಾಗಿ ಸಿದ್ಧತೆಗಳನ್ನು ಪರಿಶೀಲಿಸಿದರು.ಈ ಮೂಲಕ ಪಕ್ಷದೊಳಗೆ ಇನ್ನೂ ಭಿನ್ನಮತ ತಣ್ಣಾಗಾಗಿಲ್ಲ ಎಂಬುದನ್ನು ದೃಢಪಡಿಸಿದ್ದಾರೆ.

ಯಡಿಯೂರಪ್ಪ – ಶೋಭಾ ವಿರುದ್ಧವೂ ದೂರು :

ಬಿಜೆಪಿಯಲ್ಲಿ ಮೂಡಿರುವ ಭಿನ್ನಮತದ ಬಿರುಕಿಗೆ ಒಗ್ಗಟ್ಟಿನ ತೇಪೆ ಹಾಕುವ ಪ್ರಯತ್ನವಾಗಿ ಪಕ್ಷದ ರಾಜ್ಯ ಘಟಕದಲ್ಲಿನ ಸಂಪೂರ್ಣ ಬೆಳವಣಿಗೆಗಳ ಮಾಹಿತಿ ಹೊತ್ತು ದೆಹಲಿಗೆ ತೆರಳಿದ್ದ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಪಕ್ಷದ ರಾಷ್ಟ್ರಿಯ ಅಮಿತ್ ಷಾ ಅವರಿಗೆ ಸಮಗ್ರ ವರದಿ ಸಲ್ಲಿಸಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಅವರ ಆಪ್ತೆ ಶೋಭಾ ಕರಂದ್ಲಾಜೆ ವಿರುದ್ಧವೂ ದೂರು ನೀಡಿದ್ದಾರೆ.

ಯಡಿಯೂರಪ್ಪ ಅವರು ಶೋಭಾ ಅವರ ಮಾತು ಕೇಳುವುದನ್ನು ಬಿಟ್ಟರೆ ಸಮಸ್ಯೆ ತನ್ನಿಂದ ತಾನೇ ನಿವಾರಣೆಯಾಗಲಿದೆ ಎಂದು ಪಕ್ಷದ ರಾಜ್ಯ ಮುಖಂಡರು ಹೈಕಮಾಂಡ್‍ಗೆ ಮನವರಿಕೆ ಮಾಡಿದ್ದಾರೆ. ಎಲ್ಲಾ ನಿರ್ಧಾರಗಳಲ್ಲೂ ಶೋಭಾ ಕರಂದ್ಲಾಜೆ ಮೂಗೂ ತೂರಿಸುತ್ತಿದ್ದಾರೆ. ಶೋಭಾ ಅವರು ಪಕ್ಷಕ್ಕೆ ನಿಷ್ಠರಾದವರನ್ನು ಕಡೆಗಣಿಸಿ, ತಮಗೆ ಆಪ್ತರಾದವರಿಗೆ ಮಣೆ ಹಾಕುತ್ತಿದ್ದಾರೆ ಎಂದೂ ಹೇಳಲಾಗಿದೆ.ಕೆ.ಎಸ್ ಈಶ್ವರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ನಾಯಕರು ಒತ್ತಾಯಿಸಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಎರಡು ತಿಂಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮನ್ವಯ ಸಮಿತಿ ರಚಿಸಿದ್ದರು. ಆದರೆ ಯಡಿಯೂರಪ್ಪ ಇದುವರೆಗೂ ಒಂದೇ ಒಂದು ಸಭೆ ಕೂಡ ನಡೆಸಲಿಲ್ಲ. ಜೊತೆಗೆ ಭಿನ್ನಮತೀಯರ ಸಮಸ್ಯೆಗಳನ್ನು ಆಲಿಸಲಿಲ್ಲ ಎಂದು ದೂರಿನಲ್ಲಿ ಹೇಳಲಾಗಿದೆ.

ಪಕ್ಷದ ಸಂಘಟನೆಯ ಹಾಗೂ ಭವಿಷ್ಯದ ದೃಷ್ಟಿಯಿಂದ ಭಿನ್ನರ ವಿರುದ್ಧ ಶೀಘ್ರ ಕ್ರಮ ಅನಿವಾರ್ಯ. ಬಂಡಾಯವನ್ನು ಕೂಡಲೇ ಶಮನಗೊಳಿಸದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆಗಳಿವೆ ಎಂದು ಮನವರಿಕೆ ಮಾಡಿದ್ದಾರೆ.ಒಟ್ಟಿನಲ್ಲಿ ಬಿಜೆಪಿಯೊಳಗೆ ನಡೆಯುತ್ತಿರುವ ಬೆಳವಣಿಗೆಗಳು ದಿನಕ್ಕೊಂದು ಹೊಸ ಸ್ವರೂಪ ಪಡೆದುಕೊಳ್ಳುತ್ತಿರುವ ಕಾರಣ ಕಮಲ ವಿಲ ವಿಲ ಎನ್ನುವಂತಾಗಿರುವುದು ಸುಳ್ಳಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin