ಬಿಜೆಪಿ ಮಹಿಳಾ ಮಣಿಗಳ ನಡುವೆ ಶೀಥಲ ಸಮರ : ಏಕವಚನದಲ್ಲಿ ಭಾರತೀಶೆಟ್ಟಿ-ಮಂಜುಳಾ ಕಿತ್ತಾಟ

Spread the love

BJP-womern-Manjula-Bharathi

ಬೆಂಗಳೂರು, ಜ.12- ರಾಜ್ಯ ಬಿಜೆಪಿಯಲ್ಲಿ ಉಭಯ ನಾಯಕರ ನಡುವೆ ಶೀಥಲ ಸಮರ ತಾರಕಕ್ಕೇರಿರುವ ಸಂದರ್ಭದಲ್ಲೇ ಇಬ್ಬರು ಮಹಿಳಾ ಮಣಿಗಳ ನಡುವೆ ಭಾರೀ ವಾಗ್ವುದ್ಧ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಮತ್ತು ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ನಡುವೆ ಏಕವಚನ ಪದ ಪ್ರಯೋಗವು ನಡೆದಿದೆ. ಇಷ್ಟಕ್ಕೂ ಈ ಇಬ್ಬರು ನಾಯಕಿಯರ ನಡುವೆ ಆರೋಪ ಮತ್ತು ಪ್ರತ್ಯಾರೋಪ ನಡೆಯಲು ಕಾರಣವಾಗಿರುವ ಅಂಶವೆಂದರೆ ಮಂಜುಳಾ ಅವರನ್ನು ಭಾರತೀ ಕಡೆಗಣಿಸಿದ್ದಾರೆ ಎಂಬ ಕಾರಣಕ್ಕಾಗಿ.

ಸಮಾಜಕಲ್ಯಾಣ ಇಲಾಖೆವತಿಯಿಂದ ನಡೆಯುತ್ತಿರುವ ವಿದ್ಯಾರ್ಥಿನಿಯರ ವಸತಿ ನಿಲಯಗಳ ಅವ್ಯವಸ್ಥೆ ಕುರಿತಂತೆ ಬಿಜೆಪಿ ಮಹಿಳಾ ಮೋರ್ಚ ಸಿದ್ಧಪಡಿಸಿದ್ದ ವರದಿಯನ್ನು ಸಚಿವ ಎಚ್.ಆಂಜನೇಯ ಅವರಿಗೆ ಸಲ್ಲಿಸಲು ಕೆಲ ಪ್ರಮುಖರು ತೆರಳಿದ್ದರು. ಈ ತಂಡದಲ್ಲಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ, ವಿಧಾನಪರಿಷತ್ ಸದಸ್ಯೆ ತಾರಾ ಸೇರಿದಂತೆ ಕೆಲವರು ವಿಧಾನಸೌಧದ ಸಚಿವರ ಕಚೇರಿಗೆ ಹೋಗಿದ್ದರು. ಆದರೆ, ಮಹಿಳಾ ಆಯೋಗದ ರಾಜ್ಯಾಧ್ಯಕ್ಷರಾಗಿದ್ದ ಮಂಜುಳಾ ಅವರನ್ನು ಭಾರತಿಶೆಟ್ಟಿ ಆಹ್ವಾನಿಸಿರಲಿಲ್ಲ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಅವರು ದೂರವಾಣಿ ಕರೆ ಮಾಡಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ನಾನು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ. ರಾಜ್ಯಾಧ್ಯಕ್ಷರು ನೀಡಿರುವ ಸೂಚನೆಯಂತೆ ಯಾರ್ಯಾರು ವಿವಿಧ ವಸತಿ ನಿಯಲಯಗಳಿಗೆ ಭೇಟಿ ನೀಡಿದ್ದೆವು ಅದರಂತೆ ಸಚಿವರಿಗೂ ವರದಿ ನೀಡಲು ಹೋಗಿದ್ದೆವು. ನಿಮ್ಮನ್ನು ನಾನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲ್ಲ ಎಂಬ ಸಮರ್ಥನೆಯನ್ನು ಭಾರತಿ ಶೆಟ್ಟಿ ನೀಡಿದ್ದರು. ಇದನ್ನು ಒಪ್ಪದ ಮಂಜುಳಾ ನೀವು ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷರಾದ ಮೇಲೆ ನನ್ನನ್ನು ಎಲ್ಲಾ ಹಂತಗಳಲ್ಲೂ ತುಳಿಯಲು ಯತ್ನಿಸಿದ್ದೀರಿ. ನಾನು ಕೂಡ ಪಕ್ಷದ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ಧೇನೆ.  ಹಿಂದೆ ಮಹಿಳಾ ಆಯೋಗದ ಅಧ್ಯಕ್ಷೆಯಾಗಿಯೂ ಕೆಲಸ ಮಾಡಿದ್ದೇನೆ. ಕಡೆ ಪಕ್ಷ ವಿದ್ಯಾರ್ಥಿನಿಯರಿಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನನ್ನನ್ನು ಕಡೆಗಣಿಸಿದ್ದು ಅತೀವ ನೋವು ತಂದಿದೆ ಎಂದು ತಮ್ಮ ಬೇಸರವನ್ನು ಹೊರ ಹಾಕಿದ್ದರು.

ಹೀಗೆ ಇಬ್ಬರು ನಾಯಕಿಯರ ನಡುವೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿ ನೀವು ಯಾರಿಂದ ಅಧ್ಯಕ್ಷರಾಗಿದ್ದೀರಿ ಎಂಬುದು ನನಗೆ ಗೊತ್ತು. ಇದರ ಹಿಂದೆ ಯಾರ ಕೈವಾಡ ಇದೆ ಎಂಬುದು ತಿಳಿದಿದೆ. ಸೂಕ್ತ ಸಂದರ್ಭದಲ್ಲಿ ಎಲ್ಲವನ್ನು ಬಹಿರಂಗ ಪಡಿಸಿವೆ ಎಂದು ಮಂಜುಳಾ ಅವರು ಶೆಟ್ಟಿಗೆ ಎಚ್ಚರಿಸಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಭಾರತಿಶೆಟ್ಟಿ, ನೀವು ಯಾರ ಕೃಪೆಯಿಂದ ಮಹಿಳಾ ಮಹಿಳಾ ಆಯೋಗದ ಅಧ್ಯಕ್ಷರಾಗಿದ್ದೀರಿ ಎಂಬುದು ನನಗೂ ಗೊತ್ತು. ಅಧ್ಯಕ್ಷರ ಸೂಚನೆಯಂತೆ ನಾನು ಕೆಲಸ ಮಾಡುತ್ತಿದ್ದೇನೆ. ನಿಮ್ಮ ಒಣ ಉಪದೇಶ ನನಗೆ ಬೇಕಿಲ್ಲ ಎಂದು ತಿರುಗೇಟು ನೀಡಿದ್ದಾರೆ ಎನ್ನುತ್ತಿವೆ ಪಕ್ಷದ ಮೂಲಗಳು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin