ಬಿತ್ತು ಮತ್ತೊಬ್ಬ RSS ಕಾರ್ಯಕರ್ತನ ಹೆಣ : ಮಾಗಳಿ ರವಿ ನಿಗೂಢ ಸಾವಿನ ಸುತ್ತ ನೂರಾರು ಪ್ರಶ್ನೆ

Ravi-Murder-Mysuru-01

ಮೈಸೂರು, ನ.5- ಬೆಂಗಳೂರಿನಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಪ್ರಕರಣ ತಲ್ಲಣ ಮೂಡಿಸಿದ ಬೆನ್ನಲ್ಲೇ ಮೈಸೂರಿನಲ್ಲೇ ಮತ್ತೊಬ್ಬ ಆರ್‍ಎಸ್‍ಎಸ್ ಕಾರ್ಯಕರ್ತ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಮಾಗಳಿ ಗ್ರಾಮದ ರವಿ (35) ನಿನ್ನೆ ರಾತ್ರಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ತಾಲ್ಲೂಕು ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಹಾಗೂ ಆರ್‍ಎಸ್‍ಎಸ್‍ನ ಸಕ್ರಿಯ ಕಾರ್ಯಕರ್ತನಾಗಿದ್ದ ರವಿ ಟಿಪ್ಪು ಸುಲ್ತಾನ್ ಜಯಂತಿ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಮಿತಿ ಸಭೆ ಮುಗಿಸಿ ಊರಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ.

Magali-Ravi-Murder-Mysuru

ಮೇಲ್ನೋಟಕ್ಕೆ ವಾಹನದಿಂದ ಬಿದ್ದು ಮೃತರಾಗಿದ್ದಾರೆ ಎಂದು ಕಂಡು ಬರುತ್ತಿದ್ದು, ಬಿಜೆಪಿ ಮುಖಂಡರು, ರವಿ ಸಂಬಂಧಿಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಮೃತ ರವಿ ಬಿಜೆಪಿ ಹಾಗೂ ಆರ್‍ಎಸ್‍ಎಸ್‍ನ ಸಕ್ರಿಯ ಕಾರ್ಯಕರ್ತರಾಗಿದ್ದರು. ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಸದ್ಯ ಪಿರಿಯಾಪಟ್ಟಣದ ಆಸ್ಪತ್ರೆಗೆ ಶವವನ್ನು ಮರಣೋತ್ತರ ಪರೀಕ್ಷೆಗೆ ತರಲಾಗಿದ್ದು, ಮುಖದ ಭಾಗದಲ್ಲಿ ಗಾಯಗಳಾಗಿವೆ.  ದೇಹದ ಇತರೆ ಭಾಗದಲ್ಲಿ ಗಾಯಗಳಾಗಿದೆಯೇ, ಇಲ್ಲವೇ ಎಂಬುದು ಗೊತ್ತಾಗಬೇಕಾಗಿದೆ. ಮರಣೋತ್ತರ ಪರೀಕ್ಷೆ ನಂತರ ಸಾವಿನ ನಿಖರ ಕಾರಣ ತಿಳಿಯಲಿದೆ. ನಿನ್ನೆ ರಾತ್ರಿ ರವಿ ಒಬ್ಬರೇ ಇದ್ದರೆ ಜತೆಯಲ್ಲಿ ಮತ್ಯಾರೂ ಇದ್ದರೆ ಎಂಬುದು ತಿಳಿದು ಬಂದಿಲ್ಲ. ಬಿಜೆಪಿ ಕಾರ್ಯಕರ್ತರು ಇದು ಅನುಮಾನಾಸ್ಪದ ಸಾವು. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಸೂಕ್ತ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಪಿರಿಯಾಪಟ್ಟಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ. ಪಿರಿಯಾಪಟ್ಟಣದಲ್ಲಿ ಬಿಗುವಿನ ವಾತಾವರಣವಿದೆ. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Sri Raghav

Admin