ಬಿಬಿಎಂಪಿ ಅವ್ಯವಹಾರ : ನ್ಯಾ. ನಾಗಮೋಹನ್‍ದಾಸ್ ನೇತೃತ್ವದಲ್ಲಿ ತನಿಖೆ

Spread the love

BBMP
ಬೆಂಗಳೂರು, ಅ.25- ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ 2008ರಿಂದ ನಡೆದಿದೆ ಎನ್ನಲಾದ ಅಕ್ರಮ ಮತ್ತು ಅವ್ಯವಹಾರಗಳ ಸಮಗ್ರ ತನಿಖೆಗೆ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿ ಆದೇಶ ಹೊರಡಿಸಿದೆ.ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‍ದಾಸ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ನಿವೃತ್ತ ಪ್ರಧಾನ ಅಭಿಯಂತ ಚಂದ್ರಶೇಖರ್, ನಿವೃತ್ತ ಮುಖ್ಯ ಅಭಿಯಂತರರಾದ ನಟರಾಜ್ ಮತ್ತು ವೈಕುಂಠಯ್ಯ ಅವರು ಸಮಿತಿಯ ಸದಸ್ಯರಾಗಿರುತ್ತಾರೆ. ಗಾಂಧಿನಗರ, ಮಲ್ಲೇಶ್ವರಂ, ರಾಜರಾಜೇಶ್ವರಿ ನಗರ ವಲಯಗಳ ಇಂಜಿನಿಯರಿಂಗ್ ವಿಭಾಗದಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದರ ಜೊತೆಗೆ ರಾಜೇಂದ್ರ ಕಟಾರಿಯಾ ಸಮಿತಿ ಕೂಡ 2008 ರಿಂದ ಬಿಬಿಎಂಪಿಯ 198 ವಾರ್ಡ್‍ಗಳಲ್ಲಿ ಕೋಟ್ಯಂತರ ರೂ.ಗಳ ಅವ್ಯವಹಾರ ನಡೆದಿದೆ ಎಂದು ವರದಿ ನೀಡಿತ್ತು.

ಇದರ ಬೆನ್ನಲ್ಲೇ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ಅವರು ಯಶವಂತಪುರ, ಕೆ.ಆರ್.ಪುರ, ಆರ್‍ಆರ್‍ನಗರ ಹಾಗೂ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರಗಳಲ್ಲಿ 3500 ಕೋಟಿಗೂ ಹೆಚ್ಚು ಅನುದಾನ ದುರ್ಬಳಕೆಯಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು.ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಸರ್ಕಾರ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲಿರುವ ನ್ಯಾಯಮೂರ್ತಿ ನಾಗಮೋಹನ್‍ದಾಸ್ ನೇತೃತ್ವದ ಸಮಿತಿ ಜಯನಗರ 2ನೆ ಬ್ಲಾಕ್‍ನಲ್ಲಿರುವ ಜಂಟಿ ಆಯುಕ್ತರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದೆ.

ತನಿಖೆ ಸಮಯದಲ್ಲಿ ಸಮಿತಿ ಸದಸ್ಯರು ಕೇಳುವ ಎಲ್ಲಾ ಮಾಹಿತಿ ಹಾಗೂ ದಾಖಲೆಗಳನ್ನು ಬಿಬಿಎಂಪಿ ಹಿರಿಯ ಅಧಿಕಾರಿಗಳು ಒದಗಿಸಿಕೊಡಬೇಕು. ಸದರಿ ಸಮಿತಿ ಅವ್ಯವಹಾರಗಳ ಸಮಗ್ರ ತನಿಖೆ ನಡೆಸಿ ಕಾಲಮಿತಿಯೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕಾಗಿದೆ.ತನಿಖಾ ಸಮಿತಿಗೆ ಅಗತ್ಯ ಸಿಬ್ಬಂದಿ,ವಾಹನ ಮತ್ತು ಮತ್ತಿತರ ಮೂಲಭೂತ ಸೌಕರ್ಯ ಒದಗಿಸುವಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

 

► Follow us on –  Facebook / Twitter  / Google+

Sri Raghav

Admin