ಬಿಬಿಎಂಪಿ ಕಸ ಹಾಕಲು ಶ್ರೀಮಠ ವಿರೋಧ

ಮಧುಗಿರಿ, ಫೆ.13-ತಾಲೂಕಿನಲ್ಲಿ ಬಿಬಿಎಂಪಿ ಕಸ ಹಾಕುವ ಪ್ರಕ್ರಿಯೆಗೆ ಶ್ರೀಮಠ ವಿರೋಧ ವ್ಯಕ್ತಪಡಿಸಿದ್ದು, ಇದರ ವಿರುದ್ಧ ಎಂತಹ ಹೋರಾಟಕ್ಕೂ ನಾವು ಸಿದ್ಧ ಎಂದು ಹೊಸದುರ್ಗದ ಕುಂಚಿಟಿಗ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ಶಾಂತವೀರಸ್ವಾಮೀಜಿ ಗುಡುಗಿದ್ದಾರೆ.ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಬರಪೀಡಿತವಾದ ಮಧುಗಿರಿಯಲ್ಲಿ ಸಾಮಾನ್ಯ ಜನತೆ ಅಸಂಖ್ಯಾತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಲ್ಲಿನ ಶ್ರಮಿಕರು, ಬಡ ರೈತರು, ದೀನ ದಲಿತರು ಇಂದು ಆಸ್ಪತ್ರೆಗೆ ಹಣ ಹೊಂದಿಸಲಾಗದೆ ತತ್ತರಿಸುತ್ತಿದ್ದಾರೆ.

ಇಂತಹ ಸಮಯದಲ್ಲಿ ಸರಕಾರ ಇಲ್ಲಿ ಬಿಬಿಎಂಪಿ ಕಸ ಹಾಕುವ ಹುನ್ನಾರ ನಡೆಸುತ್ತಿದೆ. ಇದರ ವಿರುದ್ದ ಜನಾಂದೋಲವಾಗಬೇಕು. ನಾವು ಸಹ ನಿಮ್ಮೊಂದಿಗಿರುತ್ತೇವೆ ಎಂದು ಭರವಸೆ ನೀಡಿದರು.ಕೆಂಪೇಗೌಡ ಯುವ ವೇದಿಕೆಯ ಜಯವರ್ಧನ್ ಮತ್ತು ಸ್ನೇಹಿತರು ಬರಪೀಡಿತ ಜನರ ಆರೋಗ್ಯ ಕಾಯಲು ಇಂತಹ ಶಿಬಿರವನ್ನು ಏರ್ಪಡಿಸಿರುವುದು ಶ್ಲಾಘನೀಯ ಎಂದರು.ತಾಲೂಕಿನವರಾದ ಬಿಬಿಎಂಪಿಯ ನಿವೃತ್ತ ಆರೋಗ್ಯಾಧಿಕಾರಿ ಡಾ.ಸುಶೀಲಮ್ಮ, ಕಾರ್ಯದರ್ಶಿ ಜಯವರ್ಧನ್, ಕುಂಚಿಟಿಗ ವೇದಿಕೆಯ ಅಧ್ಯಕ್ಷ ಶಿವರುದ್ರಯ್ಯ, ಫ್ಲೈ ಚಲನಚಿತ್ರ ತಂಡದ ಸುರೇಶ್‍ಮೂರ್ತಿ, ಕುಂಚಿಟಿಗ ಸೇನೆ ವ್ಯವಸ್ಥಾಪಕ ರಾಜಣ್ಣ, ಹಾಗೂ ಮತ್ತಿತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin