ಬಿಬಿಎಂಪಿ ಕೌನ್ಸಿಲ್ ಕಟ್ಟಡದಲ್ಲಿದೆ ಸೊಳ್ಳೆಗಳ ಸಾಮ್ರಾಜ್ಯ..!

BBMP-01

ವರದಿ: ರಮೇಶ್‍ಪಾಳ್ಯ
ಚಿತ್ರಗಳು: ಕ್ಯಾತನಹಳ್ಳಿ ಚಂದ್ರಶೇಖರ್
ಬೆಂಗಳೂರು, ಜು.21- ನಗರದೆಲ್ಲೆಡೆ ಡೆಂಘೀ ಡಂಗೂರ ಸಾರಿದೆ. ಇದರುವರೆಗೂ 1651ಕ್ಕೂ ಹೆಚ್ಚು ಮಂದಿ ಮಾರಣಾಂತಿಕ ರೋಗ ಲಕ್ಷಣಗಳು ಕಂಡು ಬಂದಿವೆ. ರೋಗ ನಿರ್ಮೂಲನೆಗೆ ಬಿಬಿಎಂಪಿ ಪಣತೊಟ್ಟಿದೆ. ಆದರೆ, ದೀಪದ ಕೆಳಗೆ ಕತ್ತಲು ಎನ್ನುವಂತೆ ಪಾಲಿಕೆಯ ಕೌನ್ಸಿಲ್ ಕಟ್ಟಡವೇ ಸೊಳ್ಳೆಗಳ ಆವಾಸ ಸ್ಥಾನವಾಗಿ ಪರಿವರ್ತನೆಗೊಂಡಿದೆ. ಊರನ್ನೇ ಉದ್ದಾರ ಮಾಡ್ತೀನಿ ಅನ್ನೋ ಬಿಬಿಎಂಪಿಯವರಿಗೆ ತಮ್ಮದೇ ಕಟ್ಟಡದ ತಳ ಭಾಗದಲ್ಲಿ ಸೊಳ್ಳೆಗಳ ಆವಾಸ ಸ್ಥಾನವಿರುವ ಬಗ್ಗೆ ತಿಳಿಯದೇ ಇರುವುದು ವಿಪರ್ಯಾಸವೇ ಸರಿ.

ಹಲವಾರು ಸ್ಥಾಯಿ ಸಮಿತಿಗಳು, ಪ್ರತಿಪಕ್ಷ, ಆಡಳಿತ ಪಕ್ಷ ನಾಯಕರ ಕಚೇರಿ ಹಾಗೂ ಪಾಲಿಕೆ ಸಭೆ ನಡೆಯುವ ಸಭಾಂಗಣವಿರುವ ಬಿಬಿಎಂಪಿಯ ಕೌನ್ಸಿಲ್ ಕಟ್ಟಡದ ಕೆಳ ಅಂತಸ್ತಿನಲ್ಲಿ ಸೊಳ್ಳೆಗಳ ಸಂಸಾರ ಹೇರಳವಾಗಿದೆ.  ಕಟ್ಟಡದ ಕೆಳ ಅಂತಸ್ತಿನಲ್ಲಿ ನಿರುಪಯುಕ್ತ ವಸ್ತುಗಳನ್ನು ಸಂಗ್ರಹಣೆ ಮಾಡಲಾಗಿದೆ. ಗೋಡೆಗಳು ಶಿಥಿಲಗೊಂಡಿವೆ. ಸ್ಯಾನಿಟರಿ ಲೈನ್‍ಗಳು ಹಾಳಾಗಿದ್ದು, ಕೊಳಚೆ ನೀರು ತೊಟ್ಟಿಕ್ಕುತ್ತಿದೆ.  ಡ್ರೈನೇಜ್‍ಗಳಲ್ಲಿ ನೀರು ಸಂಗ್ರಹಗೊಂಡಿದ್ದು, ಮೂಗು ಮುಚ್ಚಿಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನಗಳ ನಿಲುಗಡೆಗೆ ಅವಕಾಶವಿದ್ದರೂ ಇಲ್ಲಿನ ಪರಿಸ್ಥಿತಿ ಕಂಡು ಯಾರೊಬ್ಬರೂ ತಮ್ಮ ವಾಹನಗಳನ್ನು ನಿಲ್ಲಿಸುವ ಗೋಜಿಗೆ ಹೋಗುವುದಿಲ್ಲ.

ಕೌನ್ಸಿಲ್ ಕಟ್ಟಡದ ಕೆಳ ಅಂತಸ್ತಿನ ಈ ಗಲೀಜಿನಿಂದ ಪ್ರತಿಪಕ್ಷ , ಆಡಳಿತ ಪಕ್ಷ ನಾಯಕರ ಕಚೇರಿಗಳಲ್ಲಿ ಸೊಳ್ಳೆಗಳ ಹಾವಳಿ ವಿಪರೀತವಾಗಿದೆ. ಪರಿಸ್ಥಿತಿ ಹೀಗಿದ್ದರೂ ಯಾವೊಬ್ಬ ಅಧಿಕಾರಿಯೂ ಕೆಳ ಅಂತಸ್ತನ್ನು ದುರಸ್ತಿಗೊಳಿಸುವ ಹಾಗೂ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ ಮೇಯರ್ ಜಿ.ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ನಗರದಲ್ಲಿ ಹೆಚ್ಚಾಗಿರುವ ಡೆಂಘೀ ರೋಗ ನಿರ್ಮೂಲನೆಗೆ ಪಾಲಿಕೆ ಸಜ್ಜಾಗಿದೆ ಎಂದು ಘೋಷಿಸಿದ್ದರು.

ಮಾತ್ರವಲ್ಲ ಯಾವುದೇ ಸ್ಥಳದಲ್ಲಿ ಡೆಂಘೀ ಲಕ್ಷಣ ಕಂಡು ಬಂದರೂ ಅದನ್ನು ಪತ್ತೆಹಚ್ಚುವ ಹೈಟೆಕ್ ಸಾಫ್ಟ್‍ವೇರ್ ಅಭಿವೃದ್ಧಿ ಪಡಿಸಿದ್ದೇವೆ. ಇದರ ಸಹಾಯದಿಂದ ಎಲ್ಲೇ ಮಾರಣಾಂತಿಕ ರೋಗ ಪತ್ತೆಯಾದರೂ ಕೂಡಲೇ ಕ್ರಮ ಕೈಗೊಂಡು ರೋಗ ನಿರ್ಮೂಲನೆ ಮಾಡುವ ತಾಕತ್ತು ನಮಗಿದೆ ಎಂದು ಭರವಸೆ ನೀಡಿದ್ದರು. ಆದರೆ, ಇಂತಹ ಅಧಿಕಾರಿಗಳ ಮೂಗಿನ ಕೆಳಗೇ ಇರುವ ಕೌನ್ಸಿಲ್ ಕಟ್ಟಡ ಸೊಳ್ಳೆಗಳ ಆವಾಸ ಸ್ಥಾನವಾಗಿರುವುದು ಇವರ ಗಮನಕ್ಕೆ ಬಾರದಿರುವುದು ಹಾಸ್ಯಸ್ಪದವಾಗಿದೆ.   ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿರುವ ಕೌನ್ಸಿಲ್ ಕಟ್ಟಡವನ್ನು ಶುಚಿಗೊಳಿಸಲು ಮುಂದಾಗಲಿ ಎನ್ನುವುದು ನಮ್ಮ ಆಗ್ರಹವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Sri Raghav

Admin