ಬಿಬಿಎಂಪಿ ಬಜೆಟ್ ಕುರಿತಂತೆ ನೀವೂ ಸಲಹೆ ಸೂಚನೆ ಕೊಡಬಹುದು

BBMP

ಬೆಂಗಳೂರು,ಅ.3– ನಗರದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಉದ್ದೇಶದಿಂದ ಬಿಬಿಎಂಪಿ ಮಂಡಿಸಲಿರುವ ಬಜೆಟ್ ಕುರಿತಂತೆ ಸಾರ್ವಜನಿಕರು ಸಲಹೆ-ಸೂಚನೆಗಳನ್ನು ನೀಡಬಹುದಾಗಿದೆ. ನಾಳೆಯಿಂದ ಮೈ ಸಿಟಿ-ಮೈ ಬಜೆಟ್ ಎಂಬ ಸಲಹೆ-ಸೂಚನೆ ಸ್ವೀಕರಿಸುವ ವಾಹನ 60 ದಿನಗಳ ಕಾಲ ನಗರದ 250 ಸ್ಥಳಗಳಲ್ಲಿ ಸಂಚರಿಸಲಿದ್ದು, ಈ ವಾಹನಕ್ಕೆ ಸಾರ್ವಜನಿಕರು ಬಜೆಟ್ ಬಗ್ಗೆ ಸಲಹೆ- ಸೂಚನೆಗಳನ್ನು ಚೀಟಿಯಲ್ಲಿ ಬರೆದು ಹಾಕಬಹುದು. ಸಾರ್ವಜನಿಕರ ಸಲಹೆ-ಸೂಚನೆಗಳ ಬಗ್ಗೆ ಮುಂದಿನ ಬಜೆಟ್‍ನಲ್ಲಿ ಪ್ರಸ್ತಾಪಿಸಲಾಗುವುದು. ವಾಹನಕ್ಕೆ ಮೇಯರ್ ಜಿ.ಪದ್ಮಾವತಿ, ಉಪಮೇಯರ್ ಆನಂದ್, ಆಯುಕ್ತ ಮಂಜುನಾಥ್ ಪ್ರಸಾದ್ ಇಂದು ಹಸಿರು ನಿಶಾನೆ ತೋರಿಸಿದರು.

ಜನಾಗ್ರ ಸಂಸ್ಥೆ ಈ ಅಭಿಯಾನಕ್ಕೆ ಚಾಲನೆ ನೀಡಿದ್ದು, ಸಾರ್ವಜನಿಕರು ಪಾಲ್ಗೊಳ್ಳಬಹುದಾಗಿದೆ. ನಂತರ ಮಾತನಾಡಿದ ಆಯುಕ್ತ ಮಂಜುನಾಥ್ ಪ್ರಸಾದ್, ಬಜೆಟ್ ಪ್ರಕ್ರಿಯೆಯಲ್ಲಿ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯವಾಗಿದೆ. ಯಾವ ಯಾವ ಕಾಮಗಾರಿಗಳಿಗೆ ಎಷ್ಟೆಷ್ಟು ಹಣ ಖರ್ಚು ಮಾಡಿದ್ದೇವೆ ಎಂಬುದರ ಬಗ್ಗೆ ಜನರಿಗೆ ತಿಳಿಸಬೇಕು. ಇದಕ್ಕಾಗಿ ಜನಾಗ್ರ ಸಂಸ್ಥೆ ಕಾರ್ಯ ಅರ್ಥಪೂರ್ಣವಾಗಿದೆ ಎಂದರು. ಕಳೆದ ವರ್ಷದ ಬಜೆಟ್‍ನಲ್ಲಿ ಶೇ.24ರಷ್ಟು ಸಾರ್ವಜನಿಕರ ಸಲಹೆ-ಸೂಚನೆಗೆ ಒತ್ತು ನೀಡಲಾಗಿತ್ತು. ಈ ಬಾರಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಸಲಹೆ-ಸೂಚನೆಗೆ ವಾರ್ಡ್ ಮಟ್ಟದ ಸಮಿತಿ ರಚನೆ ಮೂಲಕ ನಗರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಾರ್ಡ್ ಮಟ್ಟದ ಸಮಿತಿ ರಚನೆಗಿದ್ದ ಅಡೆ-ತಡೆಗಳು ನಿವಾರಣೆಯಾಗಿದ್ದು, ನಗರಾಭಿವೃದ್ಧಿ ಇಲಾಖೆ ಶೀಘ್ರದಲ್ಲೇ ವಾರ್ಡ್ ಮಟ್ಟದ ಸಮಿತಿ ರಚಿಸಲಿದೆ. ನಂತರ ಸಮಿತಿ ನೀಡುವ ಸಲಹೆ-ಸೂಚನೆ ಮೇರೆಗೆ ಬಜೆಟ್ ಮಂಡಿಸಲಾಗುವುದು. ಆನ್‍ಲೈನ್ ಮೂಲಕವೂ ಸಾರ್ವಜನಿಕರು ಸಲಹೆ-ಸೂಚನೆಗಳನ್ನು ನೀಡಬಹುದಾಗಿದೆ ಎಂದರು. ಮೇಯರ್ ಪದ್ಮಾವತಿ ಮಾತನಾಡಿ, ಬೆಂಗಳೂರು ದಿನೇ ದಿನೇ ಬೆಳೆಯುತ್ತಿದೆ. ಇಂತಹ ಸನ್ನಿವೇಶನದಲ್ಲಿ ಅಭಿವೃದ್ಧಿಗೆ ತಕ್ಕಂತೆ ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಹಾಗಾಗಿ ಮುಂದೆ ಮಂಡಿಸಲಿರುವ ಬಜೆಟ್‍ಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಅವರ ಸೂಚನೆ ಮೇರೆಗೆ ಉತ್ತಮ ಬಜೆಟ್ ಮಂಡಿಸಲಾಗುವುದು ಎಂದರು.

► Follow us on –  Facebook / Twitter  / Google+

Sri Raghav

Admin