ಬಿಬಿಎಂಪಿ ಬಜೆಟ್ – 2017-18 (Live Updates)

BBMP-Bajet--Live

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್’ನ್ನು ಪಾಲಿಕೆಯ ತೆರಿಗೆ ಹಾಗೂ ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಗುಣಶೇಖರ್‌ ಮಂಡಿಸುತ್ತಿದ್ದಾರೆ. ಬಜೆಟ್ ನಲ್ಲಿನ ಪ್ರಮುಖ ಹೈಲೈಟ್ಸ್ ಇಲ್ಲಿವೆ ನೋಡಿ..

ಬಿಬಿಎಂಪಿ ಬಜೆಟ್ ನ ಹೈಲೈಟ್ಸ್ : (Live)

+ 9,241 ಕೋಟಿ ರೂ. ಗಾತ್ರದ ಬಜೆಟ್‍ :

 ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಎಂ.ಕೆ.ಗುಣಶೇಖರ್ ಅವರು ವಿವಿಧ ಮೂಲಗಳಿಂದ ಆರ್ಥಿಕ ಕ್ರೋಢೀಕರಣ, ಪಾರ್ಕ್‍ಗಳ ಅಭಿವೃದ್ದಿ , ಮೂಲ ಸೌಕರ್ಯಗಳಿಗೆ ಒತ್ತು ಸೇರಿದಂತೆ 9,241 ಕೋಟಿ ರೂ. ಗಾತ್ರದ 2017-18ನೇ ಉಳಿತಾಯದ ಬಜೆಟ್‍ನ್ನು ಬಿಬಿಎಂಪಿ ಸಭೆಯಲ್ಲಿಂದು ಮಂಡಿಸಿದರು.


+ ಬೆಂಗಳೂರನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಯೋಜನೆ
+ ಆರ್ಥಿಕ ಶಿಸ್ತಿಗೆ ಚಿಂತನೆ,
+ ಇ-ಆಡಳಿತಕ್ಕೆ ಆದ್ಯತೆ-ಲೆಕ್ಕಪತ್ರ ನಿರ್ವಹಣೆಗೂ ಇ-ಆಡಳಿತ
+ ತೋಟಗಾರಿಕೆಗೆ 144.30 ಕೋಟಿ ಮೀಸಲು
+ ಕೆರೆ ಅಭಿವೃದ್ಧಿಗೆ 89.50 ಕೋಟಿ ಮೀಸಲು
+ 210 ಪಾರ್ಕ್‍ಗಳ ನಿರ್ಮಾಣಕ್ಕೆ 40 ಕೋಟಿ
+ 20 ವಿಧಾನಸಭಾ ಕ್ಷೇತ್ರಗಳಲ್ಲಿ 20 ಡಯಾಲಿಸಿಸ್ ಕೇಂದ್ರ
+ ಪೌರಕಾರ್ಮಿಕರ ಕಲ್ಯಾಣಕ್ಕೆ 29.5 ಕೋಟಿ
+ ರುದ್ರಭೂಮಿ ಅಭಿವೃದ್ಧಿಗೆ 125 ಕೋಟಿ
+ ಟೆಂಡರ್ ಶ್ಯೂರ್ 3ನೇ ಹಂತಕ್ಕೆ 250 ಕೋಟಿ
+ ಬಿಟಿಎಂ ಲೇಔಟ್, ಶಿವಾಜಿನಗರ, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ
+ ನಗರದ ಎಲ್ಲ ಮನೆಗಳಿಗೆ ಡಿಜಿಟಲ್ ಸಂಖ್ಯೆ
+ ನೂತನ ಪಾರ್ಕಿಂಗ್ ನೀತಿ ಜಾರಿಗೆ ನಿರ್ಧಾರ
+ ಬೃಹತ್ ಮಳೆ ನೀರು ಕಾಲುವೆ ನಿರ್ವಹಣೆ
+ ನಗರ ಸೌಂದರ್ಯ ಕಾಪಾಡಲು ಮಾರ್ಷಲ್‍ಗಳ ನೇಮಕ
+ 198 ವಾರ್ಡ್‍ಗಳಲ್ಲಿ ಕಾಂಪೋಸ್ಟ್ ಖರೀದಿ ಕೇಂದ್ರ
+ ಪಾಲಿಕೆಯ ಹೊಸ ವಲಯಗಳಲ್ಲಿ 12 ವಿವಾಹ ಸಮುದಾಯ ಭವನ ನಿರ್ಮಾಣಕ್ಕೆ 24 ಕೋಟಿ
+ ನೂತನ ವಾರ್ಡ್ ಕಚೇರಿಗಳ ನಿರ್ಮಾಣಕ್ಕೆ 10 ಕೋಟಿ
+ ಸುವರ್ಣ ಪಾಲಿಕೆ ಸೌಧ ನಿರ್ಮಾಣಕ್ಕೆ 5 ಕೋಟಿ
+ ಎಚ್‍ಎಂಟಿ ವಾರ್ಡ್‍ನಲ್ಲಿ ದೇವರಾಜ ಅರಸು ಕಲಾಕ್ಷೇತ್ರ ನಿರ್ಮಾಣ
+ ನಗರ ನಾಗರಿಕರ ಕಲ್ಯಾಣಕ್ಕೆ 503 ಕೋಟಿ
+ ನಮ್ಮ ಸ್ವಂತ ಮನೆ ಯೋಜನೆ 100 ಕೋಟಿ
+ ಆನ್‍ಲೈನ್ ಕಟ್ಟಡ ಪರಿಶೀಲನೆ ಮತ್ತು ಅನುಮೋದನೆ ಪದ್ಧತಿ
+ ಗಣಕೀಕೃತ ಇ-ಖಾತಾ ನೋಂದಣಿ
+ 12 ಕಡೆ ವಾಹನ ನಿಲುಗಡೆಗೆ ಬಹು ಅಂತಸ್ತಿನ ಪಾರ್ಕಿಂಗ್ ಕಟ್ಟಡ ನಿರ್ಮಾಣ
+ 649 ಕೋಟಿ ರೂ. ವೆಚ್ಚದಲ್ಲಿ 43 ರಸ್ತೆ ಅಭಿವೃದ್ಧಿ
+ ಖಾಸಗಿ ಸಹಭಾಗಿತ್ವದಲ್ಲಿ ಹೈಟೆಕ್ ಪಾರ್ಕಿಂಗ್


+ ಬಿಬಿಎಂಪಿ ಬಜೆಟ್ : ಪಾರದರ್ಶಕತೆ ಹೆಚ್ಚಿಸಲು ಇ-ಆಡಳಿತಕ್ಕೆ ಒತ್ತು

ಬೆಂಗಳೂರು,ಮಾ.25-ಆಡಳಿತ ವೆಚ್ಚ ಕಡಿತಗೊಳಿಸಲು ಹಾಗೂ ಪಾರದರ್ಶಕತೆ ಹೆಚ್ಚಿಸಲು ಇ-ಆಡಳಿತಕ್ಕೆ ಹೆಚ್ಚಿನ ಒತ್ತು ನೀಡಿ ಕಾಗದ ರಹಿತ ಆಡಳಿತವನ್ನು ಜಾರಿಗೆ ತರಲಾಗುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಇಂದು ತಾವು ಮಂಡಿಸಿದ ಬಿಬಿಎಂಪಿ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ. ಕಡತ ನಿರ್ವಹಣೆಗೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಕಡತಗಳ ವಿಲೇವಾರಿ ಹಂತಗಳನ್ನು ಪರಿವೀಕ್ಷಿಸಲು ಅನುವು ಮಾಡಿಕೊಡಲಾಗುವುದು, ಪ್ರತಿ ವಾರ್ಡ್‍ನಲ್ಲೂ ಬೆಂಗಳೂರು ಒನ್ ಕೇಂದ್ರಗಳ ಸ್ಥಾಪನೆಗೆ ಇ-ಆಡಳಿತ ಇಲಾಖೆಗೆ ಪಾಲಿಕೆ ಕಟ್ಟಡಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಆಸ್ತಿ ಜಾಹೀರಾತು ಮುಂತಾದವುಗಳ ಏಕೀಕೃತಗೊಳಿಸುವ ವಿಧಾನದ ಯೋಜನೆಗೆ ಮೊಬೈಲ್ ಅಪ್ಲಿಕೇಷನ್ ಅನುಷ್ಠಾನ, ಲೆಕ್ಕಪತ್ರ ನಿರ್ವಹಣೆ, ಆರ್ಥಿಕ ವ್ಯವಸ್ಥೆಗೆ ತಂತ್ರಾಂಶ ಅಳವಡಿಕೆ, ಗಣಕೀಕೃತ ಇ-ಖಾತಾ ನೋಂದಣಿ, ಆನ್‍ಲೈನ್ ಕಟ್ಟಡ ನಕ್ಷೆ ಪರಿಶೀಲನೆ ಹಾಗೂ ಅನುಮೋದನಾ ಪದ್ದತಿ, ಸಾರ್ವಜನಿಕ ಆರೋಗ್ಯ ನಿರ್ವಹಣೆ ವ್ಯವಸ್ಥೆಯಲ್ಲಿ ಜಿ.ಐ.ಎಸ್ ಆಧಾರಿತ ವ್ಯವಸ್ಥೆ ಜಾರಿ ಸೇರಿದಂತೆ ಹಲವು ಸೌಲಭ್ಯಗಳನ್ನು ಇಂದು ಮಂಡಿಸಿದ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ.


+ ಬೆಂಗಳೂರಿನ 5 ಲಕ್ಷ ಬೀದಿ ದೀಪಗಳು ಎಲ್‍ಇಡಿಗೆ ಪರಿವರ್ತನೆ

ಬೆಂಗಳೂರು, ಮಾ.25-ಸಾರ್ವಜನಿಕ ಸಹಭಾಗಿತ್ವದ ಅಡಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಇರುವ ಐದು ಲಕ್ಷ ಬೀದಿ ದೀಪಗಳನ್ನು ಎಲ್‍ಇಡಿ ದೀಪಗಳಾಗಿ ಪರಿವರ್ತನೆ ಮಾಡಲಾಗುವುದು ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ತಿಳಿಸಿದ್ದಾರೆ. ಪಾಲಿಕೆ ಬಜೆಟ್ ಭಾಷಣದಲ್ಲಿ ವಿದ್ಯುತ್ ವಲಯದ ಬಗ್ಗೆ ಕೆಲವು ಯೋಜನೆಗಳನ್ನು ಪ್ರಕಟಿಸಿರುವ ಅವರು, ಕೇಂದ್ರ ಕಚೇರಿಯ ಕೌನ್ಸಿಲ್ ಕಟ್ಟಡಗಳಿಗೆ ವಿದ್ಯುತ್ ವ್ಯವಸ್ಥೆಯನ್ನು ಸೋಲಾರ್ ವ್ಯವಸ್ಥೆಗೆ ಪರಿವರ್ತನೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ 4 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ ಎಂದು ಹೇಳಿದ್ದಾರೆ. ವಿದ್ಯುತ್ ಚಿತಾಗಾರಗಳ ನಿರ್ವಹಣೆಗಾಗಿ 1.30 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.


+ ಪ್ರಸಕ್ತ ಸಾಲಿನಲ್ಲಿ ಬೆಂಗಳೂರಿನಲ್ಲಿ 10 ಲಕ್ಷ ಸಸಿ ನೆಡುವ ಗುರಿ

ಬೆಂಗಳೂರು, ಮಾ.25- ಪ್ರಸಕ್ತ ಸಾಲಿನಲ್ಲಿ ಬೆಂಗಳೂರು ನಗರದಲ್ಲಿ 10 ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ. ಗುಣಶೇಖರ್ ಪಾಲಿಕೆ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ರಸ್ತೆ ಬದಿ ಗಿಡಗಳನ್ನು ನೆಡಲು ಮತ್ತು ಅವುಗಳಿಗೆ ಸಂಖ್ಯೆಗಳನ್ನು ನೀಡುವುದಕ್ಕಾಗಿ 6 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದ್ದಾರೆ. ರಸ್ತೆ ಬದಿ ಮರಗಳನ್ನು ರಕ್ಷಿಸಲು ಸ್ವಯಂ ಸೇವಕರನ್ನು ಟ್ರೀ-ವಾರ್ಡ್‍ನ್‍ಗಳಾಗಿ ನೇಮಕ ಮಾಡಲಾಗುವುದು. ಕೆರೆಗಳು ಇರುವ ಪ್ರದೇಶಗಳಲ್ಲಿ 5 ಹೊಸ ನರ್ಸರಿಗಳನ್ನು ಆರಂಭಿಸಲಾಗುವುದು. ಇದಕ್ಕಾಗಿ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.  ಪಾಲಿಕೆ ಶಾಲಾ ಕಾಲೇಜುಗಳ ಆವರಣದಲ್ಲಿ ಕೈತೋಟ ಪ್ರಾರಂಭಕ್ಕಾಗಿ 1 ಕೋಟಿ ರೂ.ಗಳ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಅಪಾಯಕ್ಕೆ ಸಿಲುಕುವ ಪ್ರಾಣಿ-ಪಕ್ಷಿಗಳ ಸಂರಕ್ಷಣಾ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ 25 ಲಕ್ಷ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದ್ದಾರೆ.


+ ಹೊಸ ಪಾರ್ಕಿಂಗ್ ನೀತಿ ಜಾರಿ

ಬೆಂಗಳೂರು,ಮಾ.25-ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು , ವಾಹನಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗುತ್ತಿರುವುದರಿಂದ ವಾಹನ ದಟ್ಟಣೆ ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲಕ್ಕೆ ಪರಿಹಾರ ಕಂಡುಕೊಳ್ಳಲು ಹೊಸ ಪಾರ್ಕಿಂಗ್ ನೀತಿಯನ್ನು ತರಲು ಉದ್ದೇಶಿಸಲಾಗಿದೆ ಎಂದು ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ತಿಳಿಸಿದ್ದಾರೆ.   2017-18ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಈ ವಿಷಯ ತಿಳಿಸಿರುವ ಅವರು, ಬಿಬಿಎಂಪಿಯು ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಸುಧಾರಿತಾ ಹೈಟೆಕ್ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುವುದು. ಖಾಸಗಿ ಮಾಲೀಕರು ವಾಹನ ನಿಲ್ದಾಣವನ್ನು ನಿರ್ಮಿಸಿ ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಮುಂದೆ ಬಂದರೆ ಅ ಅಂತಹ ಪ್ರಸ್ತಾವನೆಗೆ ವಿಶೇಷ ರಿಯಾಯ್ತಿ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.   ಪಾದಚಾರಿ ಮಾರ್ಗಗಳಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗುವುದು ಹಾಗೂ ಸೂಕ್ತ ನಿಲುಗಡೆ ಪ್ರದೇಶ, ರಸ್ತೆಬದಿಯನ್ನು ಗುರುತಿಸಲಾಗುವುದು ಎಂದು ತಿಳಿಸಿದ್ದಾರೆ.


+ 25 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ 58 ಕೆರೆಗಳ ಅಭಿವೃದ್ದಿ

ಬೆಂಗಳೂರು, ಮಾ.25-ಬೆಂಗಳೂರು ಮಹಾನಗರದ ಕೆರೆಗಳ ಅಭಿವೃದ್ಧಿಗಾಗಿ ಪ್ರಸ್ತಕ ಸಾಲಿನಲ್ಲಿ ರಾಜ್ಯ ಸರ್ಕಾರ 50 ಕೋಟಿ ರೂ.ಗಳ ಅನುದಾನ ಮೀಸಲಿರಿಸಿದೆ. ಇದರಲ್ಲಿ ಕೆರೆಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗುವುದು ಎಂದು ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಘೋಷಿಸಿದ್ದಾರೆ.  ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪಾಲಿಕೆಗೆ 58 ಕೆರೆಗಳನ್ನು ಹಸ್ತಾಂತರಿಸುವ ಪ್ರಸ್ತಾವನೆ ಇದೆ. ಈ ಕೆರೆಗಳ ಅಭಿವೃದ್ದಿಗಾಗಿ ಪಾಲಿಕೆ ವತಿಯಿಂದ ಪ್ರಸ್ತಕ ಸಾಲಿನಲ್ಲಿ 25 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಅವರು ಪ್ರಕಟಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಈ ವಿಷಯ ತಿಳಿಸಿರುವ ಅವರು, ಕೆರೆಗಳಿಗೆ ಸೇರುತ್ತಿರುವ ಒಳಚರಂಡಿಗಳ ನೀರು ಮತ್ತು ರಾಸಾಯನಿಕ ತ್ಯಾಜ್ಯಗಳನ್ನು ತಡೆಗಟ್ಟಲು ಎಸ್‍ಟಿಪಿ ಘಟಕಗಳನ್ನು ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ.
ಕೆರೆಗಳ ಅಭಿವೃದ್ದಿಗೆ ಈ ಸಾಲಿನಲ್ಲಿ ಒಟ್ಟು 89.50 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಗುಣಶೇಖರ್ ಹೇಳಿದ್ದಾರೆ.


+ ಬೆಂಗಳೂರಿನ 210 ಪಾರ್ಕ್‍ಗಳ ಅಭಿವೃದ್ಧಿಗೆ 40 ಕೋಟಿ ರೂ. ಮೀಸಲು

ಬೆಂಗಳೂರು, ಮಾ.25-ಬೆಂಗಳೂರು ಮಹಾನಗರದ ಹೊಸ ವಲಯಗಳಲ್ಲಿ 210 ಉದ್ಯಾನವನಗಳ ಅಭಿವೃದ್ಧಿಗಾಗಿ 40 ಕೋಟಿ ರೂ.ಗಳ ಅನುದಾನ ಮೀಸಲಿಡಲಾಗಿದೆ ಎಂದು ಬಿಬಿಎಂಪಿಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಘೋಷಿಸಿದ್ದಾರೆ. ರಸ್ತೆ ಬದಿಯ ಮೀಡಿಯನ್ಸ್, ವೃತ್ತಗಳು, ಬುಲೆವಾರ್ಡ್‍ಗಳ ಅಭಿವೃದ್ದಿ ಮತ್ತು ಸುಂದರೀಕರಣಕ್ಕಾಗಿ 10 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 2017-18ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಈ ವಿಷಯ ತಿಳಿಸಿರುವ ಅವರು, ತೋಟಗಾರಿಕೆ ಇಲಾಖೆಗೆ ಕಳೆದ ವರ್ಷಗಳಲ್ಲಿ ನೀಡಿರುವುದಕ್ಕಿಂತ ಹೆಚ್ಚು ಅನುದಾನವನ್ನು ಈ ಸಾಲಿನಲ್ಲಿ ನೀಡಲಾಗಿದ್ದು, 146.24 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ವಿವರಿಸಿದರು.

ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳಲ್ಲಿ ಮಳೆನೀರು ಕೊಯ್ಲು ಪದ್ದತಿ ಅನುಷ್ಠಾನಗೊಳಿಸಲಾಗುವುದು. ಅಮೃತ್ ಯೋಜನೆ ಅಡಿ ಉದ್ಯಾನವನಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಅಭಿವೃದ್ದಿಯಾಗದೇ ಉಳಿದಿರುವ ಉದ್ಯಾನವನಗಳನ್ನು ಗುರುತಿಸಿ ಟ್ರೀ-ಪಾರ್ಕ್ (ದಟ್ಟ ಅರಣ್ಯ) ಮಾದರಿಯಲ್ಲಿ ಗಿಡ ನೆಡುವ ಕಾರ್ಯಕ್ರಮಗವನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.   ಪರಿಸರ ತಜ್ಞ ಡಾ. ಯಲ್ಲಪ್ಪ ರೆಡ್ಡಿಯವರು ಪರಿಸರ ಮತ್ತು ಸಸಿಗಳ ಸಂರಕ್ಷಣೆಗಾಗಿ ನೀಡಿರುವ ವರದಿಯ ಶಿಫಾರಸುಗಳನ್ನು ಪರಿಶೀಲಿಸಿ ಜಾರಿಗೊಳಿಸಲಾಗುವುದು ಎಂದು ಗುಣಶೇಖರ್ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಚೇರಿಗಳಲ್ಲಿ ಮತ್ತು ನಗರದಲ್ಲಿ ಖಾಲಿ ಇರುವ ಪ್ರದೇಶಗಳಲ್ಲಿ, ಶಾಲೆಗಳ ಆವರಣಗಳಲ್ಲಿ ಸಸಿಗಳನ್ನು ನೆಡಲು ಲಾನ್‍ಗಳನ್ನು ಅಭಿವೃದ್ದಿಗೊಳಿಸಲಾಗುವುದು. ಉದ್ಯಾನವನಗಳಿಗೆ ನೀರು ಪೂರೈಕೆಗೆ ನೀರಿನ ತೊಟ್ಟಿಗಳನ್ನು ನಿರ್ಮಿಸಲಾಗುವುದು. ಉದುರುವ ಎಲೆಗಳನ್ನು ಶೇಖರಿಸಿ ಸಾವಯವ ಕೃಷಿ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಲು ತೊಟ್ಟಿಗಳು ಮತ್ತು ಗೊಬ್ಬರದ ಗುಂಡಿಗಳನ್ನು ನಿರ್ಮಿಸಲಾಗುವುದು ಎಂದು ಅವರು ತಿಳಿಸಿದರು.


+ 50 ಕೋಟಿ ರೂ. ವೆಚ್ಚದಲ್ಲಿ 1000 ಶೌಚಾಲಯ ನಿರ್ಮಾಣ : 

ಬೆಂಗಳೂರು, ಮಾ.25- ನಗರದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 1000 ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುವುದು ಎಂದು ಬಿಬಿಎಂಪಿಯ 2017-18ನೆ ಸಾಲಿನ ಬಜೆಟ್‍ನಲ್ಲಿ ತಿಳಿಸಲಾಗಿದೆ. ಬಜೆಟ್ ಭಾಷಣದಲ್ಲಿ ಈ ವಿಷಯ ಪ್ರಕಟಿಸಿರುವ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್ ಹೆಚ್ಚುತ್ತಿರುವ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಾರ್ವಜನಿಕ ಶೌಚಾಲಯಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.


+ ಬಿಬಿಎಂಪಿ ಬಜೆಟ್‍ : ಕಳೆದ ಸಾಲಿಗಿಂತಲೂ ಈ ಬಾರಿ ದುಪ್ಪಟ್ಟು ಅನುದಾನ

ಬೆಂಗಳೂರು, ಮಾ.25- ಪ್ರಸಕ್ತ ಸಾಲಿನ ಬಿಬಿಎಂಪಿ ಬಜೆಟ್‍ನಲ್ಲಿ ನಾಡಪ್ರಭು ಕೆಂಪೇಗೌಡ ಸಮಾಧಿ, ವರನಟ ಡಾ.ರಾಜ್‍ಕುಮಾರ್ ಪ್ರತಿಮೆ ಪ್ರತಿಷ್ಠಾನ, ಕನ್ನಡ ಭವನ ನಿರ್ಮಾಣ, ಬೆಂಗಳೂರು ವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಪೀಠ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕಳೆದ ಸಾಲಿಗಿಂತಲೂ ಈ ಬಾರಿ ದುಪ್ಪಟ್ಟು ಅನುದಾನ ನೀಡಲಾಗಿದೆ.  ಇಂದು ಬಿಬಿಎಂಪಿಯಲ್ಲಿ ಮಂಡಿಸಲಾದ 2017-18ನೆ ಸಾಲಿನ ಬಜೆಟ್‍ನಲ್ಲಿ ನಾಡಪ್ರಭು ಹಾಗೂ ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಸ್ವಗ್ರಾಮ ಕೆಂಪಾಪುರದಲ್ಲಿರುವ ಸಮಾಧಿಗೆ 60 ಲಕ್ಷ ರೂ, ಕೆಂಪೇಗೌಡ ಸಂಗ್ರಹಾಲಯದ ಸುಧಾರಣೆಗೆ 50 ಲಕ್ಷ, ಬೆಂಗಳೂರು ವಿವಿ ಕೆಂಪೇಗೌಡ ಅಧ್ಯಯನ ಪೀಠಕ್ಕೆ 70ಲಕ್ಷ ರೂ. ಅನುದಾನ ಮೀಸಲಿಡಲಾಗಿದೆ.

ಇದೇ ರೀತಿ ವರನಟ ಡಾ.ರಾಜ್‍ಕುಮಾರ್ ಅವರ ಪ್ರತಿಮೆ ಪ್ರತಿಷ್ಠಾನದ ವತಿಯಿಂದ ಕನ್ನಡ ಉತ್ಸವಕ್ಕೆ ಅನುದಾನ ಒದಗಿಸಲಾಗಿದ್ದು, ಜಯದೇವ ಹೃದ್ರೋಗ ಸಂಸ್ಥೆಗೆ 10 ಲಕ್ಷ, ದಿವ್ಯಾಂಗ ವ್ಯಕ್ತಿಗಳಿಗೆ ನೀಡುವ ಪ್ರೋತ್ಸಾಹಧನಕ್ಕಾಗಿ 50 ಲಕ್ಷ, ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ಭವನ ನಿರ್ಮಾಣಕ್ಕೆ ಅನುದಾನವನ್ನು ಒದಗಿಸಲಾಗಿದೆ.  ಇದೇ ರೀತಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ 10 ಲಕ್ಷ, ಕನ್ನಡ ಚಲನಚಿತ್ರ ಕಲಾವಿದರ ಸಂಘದ ವತಿಯಿಂದ ನಿರ್ಮಾಣ ಮಾಡುತ್ತಿರುವ ಕಟ್ಟಡಕ್ಕೂ ಬಿಬಿಎಂಪಿ ವತಿಯಿಂದ ಅನುದಾನ ನೀಡಲಾಗಿದೆ.

ಸದಸ್ಯರ ಗೌರವ ಧನವನ್ನು 15 ಲಕ್ಷದಿಂದ 20 ಲಕ್ಷ, ಪಾಲಿಕೆ ಸದಸ್ಯರ ಸಭಾಭತ್ಯೆಯನ್ನು 9,60,000 ದಿಂದ 10ಲಕ್ಷ, ದೂರವಾಣಿ ವೆಚ್ಚಕ್ಕೆ 52 ಲಕ್ಷ, ಮಾಜಿ ಸದಸ್ಯರ ವೈದ್ಯಕೀಯ ವೆಚ್ಚಕ್ಕೆ 5 ಲಕ್ಷ, ಹಾಲಿ ಸದಸ್ಯರ ವೈದ್ಯಕೀಯ ವೆಚ್ಚಕ್ಕೆ 10 ಲಕ್ಷ, ಅಧ್ಯಯನ ಪ್ರವಾಸಕ್ಕಾಗಿ 25 ಲಕ್ಷ, ವಾರ್ಡ್ ಸಮಿತಿ ಸಭೆಯ ವೆಚ್ಚಕ್ಕೆ 20 ಲಕ್ಷ ಅನುದಾನ ಒದಗಿಸಲಾಗಿದೆ.  ಮಹಾಪೌರರ ವೈದ್ಯಕೀಯ ಅನುದಾನಕ್ಕೆ 50 ಲಕ್ಷ, ಮಹಿಳಾ ಸದಸ್ಯರ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ 51 ಲಕ್ಷ, ಸಭೆಯ ವೆಚ್ಚಕ್ಕೆ 11,500 ಲಕ್ಷ, ಪಾಲಿಕೆ ಉತ್ಸವ ಮತ್ತು ಸಮಾರಂಭಗಳಿಗೆ 35 ಲಕ್ಷ, ಪೌರಕಾರ್ಮಿಕರ ದಿನಾಚರಣೆಗೆ 75 ಲಕ್ಷ, ಡಾ.ಅಂಬೇಡ್ಕರ್ ಜನ್ಮದಿನಾಚರಣೆಗೆ 1 ಕೋಟಿ, ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸೇರಿದಂತೆ ರಾಷ್ಟ್ರೀಯಹಬ್ಬಗಳಿಗೆ 1 ಕೋಟಿ 5 ಲಕ್ಷ , ದಸರಾ ಮಹೋತ್ಸವಕ್ಕೆ 25ಲಕ್ಷ, ಕೆಂಪೇಗೌಡ ಪ್ರತಿಮೆ ಸ್ಥಾಪನೆ, ಪುನರ್ ನವೀಕರಣ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಮೆ ಸ್ಥಾಪನೆ, ಕಡಲೇಕಾಯಿ ಪರಿಷೆ, ಗುಡಿಹಬ್ಬ ಇನ್ನಿತರ ಸಾಂಸ್ಕøತಿಕ ಕಾರ್ಯಕ್ರಮಗಳಿಗೆ 25 ಲಕ್ಷ, ಕನ್ನಡ ರಾಜ್ಯೋತ್ಸವ ದಿನಾಚರಣೆಗೆ 10 ಲಕ್ಷ, ಕರಗ ಮತ್ತು ಇತರ ಕೆಲಸಗಳಿಗೆ 1ಕೋಟಿ 21 ಲಕ್ಷ, ಕೆಂಪೇಗೌಡ ದಿನಾಚರಣೆಗೆ 75 ಲಕ್ಷ, ಸಭೆ-ಸಮಾರಂಭ ಇತರೆ ಕಾರ್ಯಕ್ರಮಗಳಿಗೆ 10 ಲಕ್ಷ ಹಾಗೂ ಬೆಂಗಳೂರಿಗೆ ಕನ್ನಡ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲು 25 ಲಕ್ಷ ಅನುದಾನವನ್ನು ನೀಡಲಾಗಿದೆ.  ಕಳೆದ ಸಾಲಿಗಿಂತ ಈ ಬಾರಿ ಬಜೆಟ್‍ನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದ್ದು, ಖರ್ಚಾಗದೆ ಉಳಿದಿರುವ ಹಣವನ್ನು ಈ ಬಾರಿಯೇ ಬಳಸಿಕೊಳ್ಳಲು ಪಾಲಿಕೆ ತೀರ್ಮಾನಿಸಿದೆ.


+ ನಗರದ ಸ್ವಚ್ಛತೆಗೆ ಮಾರ್ಷಲ್‍ಗಳ ನೇಮಕ

ಬೆಂಗಳೂರು,ಮಾ.25-ನಗರದ ಸ್ವಚ್ಛತೆಯನ್ನು ಪರಿಣಾಮಕಾರಿಯಾಗಿ ಕಾಪಾಡುವ ದೃಷ್ಟಿಯಿಂದ ಮಾರ್ಷಲ್‍ಗಳ ಸೇವೆಯನ್ನು ಬಳಸಿಕೊಳ್ಳಲು ನಿರ್ಧರಿಸಿದ್ದು ಇದಕ್ಕಾಗಿ 7 ಕೋಟಿ ರೂ.ಗಳನ್ನು ಕಾಯ್ದಿರಿಸಲಾಗಿದೆ.   ಇಂದು ಮಂಡನೆಯಾದ ಬಿಬಿಎಂಪಿ ಬಜೆಟ್‍ನಲ್ಲಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್, ನಗರದಲ್ಲಿ ಕಂಡ ಕಂಡಲ್ಲಿ ಕಸ ಸುರಿದು ನಗರದ ಸೌಂದರ್ಯವನ್ನು ಹಾಳುಗೆಡುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪೌರಕಾರ್ಮಿಕರ ಅನುಕೂಲಕ್ಕಾಗಿ ವಿಶ್ರಾಂತಿ ಕೊಠಡಿ ನಿರ್ಮಿಸಲು ಆಯವ್ಯಯದಲ್ಲಿ 10 ಕೋಟಿ, ನಿರ್ವಹಣೆಗಾಗಿ 3 ಕೋಟಿ ಮೀಸಲಿರಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಯ ಎಲ್ಲ 198 ವಾರ್ಡ್‍ಗಳಲ್ಲಿ ಕಾಂಪೋಸ್ಟ್ ಖರೀದಿ ಕೇಂದ್ರಗಳನ್ನು ತೆರೆಯುವುದು, ಮನೆ ಮನೆಗಳಿಂದ ಒಣ ತ್ಯಾಜ್ಯ ಸಂಗ್ರಹಣೆಗೆ ಚಿಂದಿ ಹಾಯುವವರ ಸೇವೆ ಬಳಸಿಕೊಳ್ಳುವುದು, ಕಾಂಪೋಸ್ಟ್ ಸಂತೆ ಹಮ್ಮಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು ಸೇರಿದಂತೆ ಕಸ ವಿಲೇವಾರಿಗೆ 600 ಕೋಟಿ ರೂ.ಗಳನ್ನು ಒಟ್ಟಾರೆ ಘನತ್ಯಾಜ್ಯ ನಿರ್ವಹಣೆಗೆ 751 ಕೋಟಿ ರೂ. ಮೀಸಲಿರಿಸಲಾಗಿದೆ.   ಕೆಸಿಡಿಸಿಗೆ ಈ ಬಾರಿ 15 ಕೋಟಿ ಅನುದಾನ ನೀಡಲಾಗುವುದು ಎಂದು ಹೇಳಿದರು.  ಒಣ ತ್ಯಾಜ್ಯ, ಹಸಿ ತ್ಯಾಜ್ಯವನ್ನು ಮೂಲದಲ್ಲೇ ಬೇರ್ಪಡಿಸಲು ಪ್ರತಿ ಮನೆಗೆ ಕಸದ ಬುಟ್ಟಿ ಉಚಿತವಾಗಿ ನೀಡಲು 5 ಕೋಟಿ ಅನುದಾನ ಮೀಸಲಿರಿಸಲಾಗಿದೆ ಎಂದರು.


+ ಶಿಕ್ಷಣಕ್ಕೆ ಭಾರೀ ಆದ್ಯತೆ

ಬೆಂಗಳೂರು,ಮಾ.25-ಬಿಬಿಎಂಪಿ ವ್ಯಾಪ್ತಿಯ ಶಿಶಿವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳ ಉನ್ನತೀಕರಣ ಮತ್ತು ಅಭಿವೃದ್ದಿಗೆ, ಶಿಕ್ಷಣದ ಗುಣಮಟ್ಟಕ್ಕೆ ಈ ಬಾರಿಯ ಬಜೆಟ್‍ನಲ್ಲಿ 89.36 ಕೋಟಿ ರೂ.ಗಳ ಭಾರೀ ಅನುದಾನವನ್ನು ನೀಡಲಾಗಿದೆ.  ಶಾಲಾಕಾಲೇಜು ಕಟ್ಟಡಗಳ ಉನ್ನತೀಕರಣಕ್ಕೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ 20 ಕೋಟಿ, ಸಿವಿಲ್ ಕಾಮಗಾರಿಗಳ ನಿರ್ವಹಣೆ ಮತ್ತು ದುರಸ್ತಿಗೆ 15 ಕೋಟಿ, ಶಾಲಾ ಕಾಲೇಜುಗಳಲ್ಲಿ ಸಿಸಿ ಕ್ಯಾಮೆರಾ, ಅಗ್ನಿಶಾಮಕ ಉಪಕರಣ, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಶುದ್ಧ ಕುಡಿಯುವ ನೀರು ಒದಗಿಸುವುದು, ವಿದ್ಯಾರ್ಥಿಗಳಿಗೆ ಸಮವಸ್ತ್ರ, ಆರೋಗ್ಯ ವಿಮೆಗಾಗಿ 1.75 ಕೋಟಿ, ಎಸ್ಸೆಸ್ಸೆಲ್ಸಿ ಮತ್ತು ಪಿಯು ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಸಲು 15 ಲಕ್ಷ , ಸಿಇಟಿ ತರಬೇತಿ ಮತ್ತು ಗಣಕ ಯಂತ್ರ ತರಬೇತಿಗೆ ಎರಡು ಕೋಟಿ, ಎಲ್ಲಾ ಶಾಲಾಕಾಲೇಜು ಆವರಣದಲ್ಲಿ ಮಳೆ ಕೊಯ್ಲು ಪದ್ಧತಿ ಅನುಷ್ಠಾನಕ್ಕಾಗಿ ಒಂದು ಕೋಟಿ, ಕ್ರೀಡಾ ಸಾಮಾಗ್ರಿಗಳ ವಿತರಣೆಗೆ 50 ಲಕ್ಷ ಸೇರಿದಂತೆ ಹಲವು ಯೋಜನೆಗಳನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ. ಎಂ.ಕೆ.ಗುಣಶೇಖರ್ ತಮ್ಮ ಬಜೆಟ್‍ನಲ್ಲಿ ಪ್ರಸ್ತಾಪಿಸಿದರು.


+ ಹೊರೆ ರಹಿತ ಬಜೆಟ್‍

ಬಿಬಿಎಂಪಿ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗಿರುವ ಸ್ವತ್ತುಗಳಿಂದ ಸುಧಾರಣಾ ಶುಲ್ಕ ಸಂಗ್ರಹದ ಮೂಲಕ 140 ಕೋಟಿ ಆದಾಯ ನಿರೀಕ್ಷೆ, ಆಸ್ತಿ ತೆರಿಗೆಯಿಂದ 2,600 ಕೋಟಿ, ಉಪ-ಕರಗಳಿಂದ 624 ಕೋಟಿ, ದಂಡದ ಮೂಲಕ 175 ಕೋಟಿ, ಘನ ತ್ಯಾಜ್ಯ ಕರ 50 ಕೋಟಿ, ಕೇಂದ್ರ ಸರ್ಕಾರದ ಕಟ್ಟಡಗಳ ಮೇಲೆ ಸೇವಾ ಶುಲ್ಕ 65 ಕೋಟಿ ಸೇರಿದಂತೆ 3,726 ಕೋಟಿ ರೂ. ಆದಾಯ ನಿರೀಕ್ಷೆ , ಸರ್ಕಾರದಿಂದ 4249 ಕೋಟಿ ಅನುದಾನದ ಯಾವುದೇ ಭಾರೀ ತೆರಿಗೆಗಳನ್ನು ವಿಧಿಸದೆ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಗಮನಹರಿಸಿರುವ ಗುಣಶೇಖರ್ ಅವರು, ಹೊರೆ ರಹಿತ ಬಜೆಟ್‍ನ್ನು ಇಂದು ಮಂಡಿಸಿದರು.


+ ಖಾತಾದಾರರಲ್ಲಿ ಆಸೆ : 
ಪಾಲಿಕೆ ವ್ಯಾಪ್ತಿಯಲ್ಲಿ ಭೂ ಪರಿವರ್ತನೆಯಾಗಿರುವ ಸ್ವತ್ತುಗಳಿಂದ ಸುಧಾರಣಾ ಶುಲ್ಕವನ್ನು ಸಂಗ್ರಹಿಸಲು ಉಚ್ಛನ್ಯಾಯಾಲಯವು ತೀರ್ಪು ನೀಡಿರುವ ಹಿನ್ನಲೆಯಲ್ಲಿ ಸುಧಾರಣಾ ಶುಲ್ಕಕ್ಕೆ ಕ್ರಮ ಕೈಗೊಳ್ಳಲಾಗುತ್ತಿದ್ದು , ಇದರಿಂದ 140 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಹೇಳುವ ಮೂಲಕ ಬಿ ಖಾತಾದಾರರಲ್ಲಿ ಆಸೆ ಮೂಡಿಸಿದ್ದಾರೆ.


+ ಬಿಬಿಎಂಪಿ ವ್ಯಾಪ್ತಿಯಲ್ಲಿ 19 ಲಕ್ಷ ಆಸ್ತಿಗಳನ್ನು ಗುರುತಿಸಿದ್ದು , ಅವುಗಳಿಗೆ ಪಿಐಡಿ ಸಂಖ್ಯೆಗಳನ್ನು ನೀಡಲಾಗುತ್ತಿದೆ. ಬಿಟ್ಟು ಹೋಗಿರುವ ಆಸ್ತಿಗಳನ್ನು ಜಿಇಪಿಟಿಎಸ್ ವ್ಯಾಪ್ತಿಗೆ ತರಲಾಗುವುದು. ಸಮಗ್ರ ಆಸ್ತಿಗಳಿಗೆ ಡಿಜಿಟಲ್ ಸಂಖ್ಯೆ ನೀಡಲು ಕ್ರಮ ಕೈಗೊಳ್ಳಲಾಗಿದೆ.  ಹಳೆಯ ಕಟ್ಟಡಗಳಿಂದ ಹೆಚ್ಚು ಶುಲ್ಕ ಬರುತ್ತಿಲ್ಲವಾದ್ದರಿಂದ ನಿರುಪಯುಕ್ತವಾಗಿರುವ ಕಟ್ಟಡಗಳನ್ನು ಕೆಡವಿ ಬಹುಅಂತಸ್ತಿನ ವಾಹನ ನಿಲ್ದಾಣಗಳನ್ನು ನಿರ್ಮಿಸಲು ಮತ್ತು ವರಮಾನ ಹೆಚ್ಚಿಸಲು, ಅತಿಕ್ರಮಣಗೊಂಡಿರುವ ಮಾರುಕಟ್ಟೆಗಳನ್ನು ತೆರವುಗೊಳಿಸಿ ಸೂಕ್ತ ಕ್ರಮ ಕೈಗೊಳ್ಳಲು ಕೂಡ ಹೊಸ ಬೈಲಾ ಜಾರಿಗೆ ತರುವುದಾಗಿ ತಮ್ಮ ಬಜೆಟ್‍ನಲ್ಲಿ ಪ್ರಸ್ತಾಪಿಸಿದ್ದಾರೆ.


+ ಹೊಸ ಜಾಹಿರಾತು ನೀತಿ :  

ಜಾಹಿರಾತು ಮತ್ತು ತೆರಿಗೆ ಶುಲ್ಕದಿಂದ 82.5 ಕೋಟಿ ವರಮಾನ ನಿರೀಕ್ಷಿಸಲಾಗಿದೆ. ಬೆಂಗಳೂರು ನಗರದಲ್ಲಿ ಖಾಸಗಿ ಅನಧಿಕೃತ ಜಾಹಿರಾತು, ಇತರೆ ಫಲಕಗಳ ನಿಯಂತ್ರಣಕ್ಕಾಗಿ ಹೊಸ ಜಾಹಿರಾತು ನೀತಿ ಜಾರಿಗೆ ತರಲು ಮತ್ತು ಇದಕ್ಕೆ ಅಗತ್ಯವಾದ ತಿದ್ದುಪಡಿ ಮಾಡಲು ನಿರ್ಧರಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಪಾಲಿಕೆಯ ಜಾಹಿರಾತು ಫಲಕಗಳ ನಿರ್ವಹಣೆ ಮತ್ತು ಜಾಹಿರಾತು ಸಂಗ್ರಹಣೆ ಜವಾಬ್ದಾರಿಯನ್ನು ಟೆಂಡರ್ ಮೂಲಕ ಸರ್ಕಾರಿ/ಖಾಸಗಿ ಏಜೆನ್ಸಿಗೆ ವಹಿಸಲಾಗುವುದು.  ಅಂಗಡಿಮುಂಗಟ್ಟುಗಳಲ್ಲಿನ ಸ್ವಂತ ಜಾಹಿರಾತು ಫಲಕಗಳ ಮೇಲಿನ ತೆರಿಗೆ ವಸೂಲಿಗಾಗಿ ಸ್ವಯಂ ಘೋಷಿತ ತೆರಿಗೆ ಆಸ್ತಿ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲಾಗುವುದು ಎಂದರು.

+ ಡಿಜಿಟಲ್ ಸಮೀಕ್ಷೆ : 
ಟೆಕ್‍ಪಾರ್ಕ್, ಮಾಲ್ ಮುಂತಾದವರು ಕಡಿಮೆ ವಿಸ್ತರಣೆ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಡಿಜಿಟಲ್ ಸಮೀಕ್ಷೆ ಮಾಡಲು ನಿರ್ಧರಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಚಿರ ಮತ್ತು ಚರ ಆಸ್ತಿಗಳ ಸಮಗ್ರ ಸಮೀಕ್ಷೆ ಕಾರ್ಯ ನಡೆಸಲಾಗುವುದು.

+ ಫ್ಲೈಓವರ್, ಗ್ರೇಟ್ ಸೆಪೆರೇಟರ್, ರಸ್ತೆ ಸುರಂಗ ಮುಂತಾದವುಗಳ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೆ 60 ಕೋಟಿ ರೂ.ಗಳ ಅನುದಾನ ಮೀಸಲಿರಿಸಲಾಗಿದೆ.

+ ಹೊಸ ವಲಯಗಳಲ್ಲಿ 210 ಉದ್ಯಾನವನಗಳ ಅಭಿವೃದ್ದಿ 40 ಕೋಟಿ ಅನುದಾನ ನೀಡಲಾಗಿದೆ.

+ 10 ಲಕ್ಷ ಸಸಿ ನೆಡುವುದಕ್ಕಾಗಿ 6 ಕೋಟಿ, ರೋಗಗ್ರಸ್ಥ ಮರಗಳನ್ನು ತೆರವು ಮಾಡಲು 4 ಕೋಟಿ, ರಸ್ತೆಬದಿಯ ಗಿಡಗಳ ರಕ್ಷಣೆಗೆ 4 ಕೋಟಿ ಒಟ್ಟಾರೆ ತೋಟಗಾರಿಕೆ ಇಲಾಖೆಗೆ 37.9 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ.

+  ಕೆರೆಗಳ ಅಭಿವೃದ್ದಿ 89.05 ಕೋಟಿ, ಆರೋಗ್ಯ ಇಲಾಖೆಗೆ 23.45 ಕೋಟಿ, ಶಿವಾಜಿನಗರ, ಸರ್ವಜ್ಞನಗರ, ಬಿಟಿಎಂ ವಿಧಾನಸಭಾ ಕ್ಷೇತ್ರಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಆರೋಗ್ಯ ಮತ್ತು ವೈದ್ಯಕೀಯ ಹಾಗೂ ಆಸ್ಪತ್ರೆಗಳ ನಿರ್ಮಾಣಕ್ಕೆ 196.16 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಗುಣಶೇಖರ್ ತಿಳಿಸಿದ್ದಾರೆ.

+  ಬೃಹತ್ ಮಳೆ ನೀರ್ಗಾಲುವೆ ನಿರ್ವಣೆಗೆ 300 ಕೋಟಿ ರೂ.ಗಳು, 50 ಕೋಟಿ ರೂ. ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯಗಳ ನಿರ್ಮಾಣ, 690 ಕೋಟಿ ವೆಚ್ಚದಲ್ಲಿ 80 ಕಿ.ಮೀ ಉದ್ದದ 43 ಪ್ರಮುಖ ರಸ್ತೆಗಳ ಅಭಿವೃದ್ದಿ

Sri Raghav

Admin