ಬಿಬಿಎಂಪಿ ವ್ಯಾಪ್ತಿಯನ್ನು 10 ವಲಯಗಳಿಗೆ ವಿಸ್ತರಿಸುವ ಸರ್ಕಾರದ ತೀರ್ಮಾನ ಅವೈಜ್ಞಾನಿಕ

Padmanabhareddy--01

ಬೆಂಗಳೂರು, ಏ.4- ಬಿಬಿಎಂಪಿ ವ್ಯಾಪ್ತಿಯನ್ನು 8 ವಲಯಗಳಿಂದ 10 ವಲಯಗಳಿಗೆ ವಿಸ್ತರಿಸಲು ಮುಂದಾಗಿರುವ ಸರ್ಕಾರದ ತೀರ್ಮಾನ ಅವೈಜ್ಞಾನಿಕದಿಂದ ಕೂಡಿದೆ ಎಂದು ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಆರೋಪಿಸಿದ್ದಾರೆ. ಈಗಿರುವ 8 ವಲಯಗಳನ್ನು 6 ವಲಯಗಳಿಗೆ ಬದಲಿಸಬೇಕಿತ್ತು. ಆದರೆ, ಸರ್ಕಾರ ತೆರಿಗೆದಾರರ ಹಣವನ್ನು ಪೋಲು ಮಾಡುವ ಉದ್ದೇಶದಿಂದ 8ರಿಂದ 10 ವಲಯಗಳಿಗೆ ಹೆಚ್ಚಳ ಮಾಡುವ ಮೂರ್ಖ ನಿರ್ಧಾರ ಕೈಗೊಂಡಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಲಯ ಹೆಚ್ಚಳ ಮಾಡಿದರೆ ಒಂದು ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಸರ್ಕಾರ ತಿಳಿಸಿದೆ. ಆದರೆ, ಪಾಲಿಕೆಯಲ್ಲಿ ಈಗಾಗಲೇ ಹೆಚ್ಚುವರಿ ನೌಕರರಿರುವುದರಿಂದ ಸರ್ಕಾರದ ಈ ತೀರ್ಮಾನ ಪಾಲಿಕೆ ಮೇಲೆ ಆರ್ಥಿಕ ಹೊರೆ ಹೆಚ್ಚಿಸಿದಂತಾಗುತ್ತದೆಯೇ ಹೊರತು ಯಾವುದೇ ಉಪಯೋಗವಿಲ್ಲ ಎಂದು ಲೇವಡಿ ಮಾಡಿದ್ದಾರೆ.  ಯಲಹಂಕ ವಲಯಕ್ಕೆ ಕೇವಲ 12 ವಾರ್ಡ್‍ಗಳು ಮಾತ್ರ ಸೇರ್ಪಡೆಗೊಂಡಿವೆ. ಪಶ್ಚಿಮ ಮತ್ತು ಪೂರ್ವ ವಲಯಗಳಲ್ಲಿ 40ಕ್ಕೂ ಹೆಚ್ಚು ವಾರ್ಡ್‍ಗಳಿದ್ದು, ಈ ಅಸಮಾನತೆ ಹೋಗಲಾಡಿಸಲು ಯಲಹಂಕ ಮತ್ತು ದಾಸರಹಳ್ಳಿ ವಲಯಗಳನ್ನು ಇತರೆ ವಲಯಗಳಲ್ಲಿ ವಿಲೀನಗೊಳಿಸಿ ಕೇವಲ 6 ವಲಯಗಳನ್ನಾಗಿ ಮಾರ್ಪಡಿಸಿದ್ದರೆ ಪ್ರಯೋಜನವಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯಲಹಂಕ ಮತ್ತು ದಾಸರಹಳ್ಳಿ ವಲಯಗಳನ್ನು ಇತರೆ ವಲಯಗಳಲ್ಲಿ ಸೇರ್ಪಡೆ ಮಾಡಿ ಒಂದೊಂದು ವಲಯದ ವ್ಯಾಪ್ತಿಗೆ 33 ವಾರ್ಡ್‍ಗಳನ್ನು ಸೇರ್ಪಡೆಗೊಳಿಸಿದ್ದರೆ ಸಮಸ್ಯೆ ಬಗೆಹರಿಯುತ್ತಿತ್ತು.   ಆದರೆ, ಸರ್ಕಾರ ಈ ಕುರಿತಂತೆ ಯಾವುದೇ ಕ್ರಮ ಕೈಗೊಳ್ಳದೆ ಇರುವ 8 ವಲಯಗಳನ್ನು 10 ವಲಯಗಳಿಗೆ ಹೆಚ್ಚಳ ಮಾಡಿ ತೆರಿಗೆದಾರರ ಹಣವನ್ನು ಪೋಲು ಮಾಡಲು ಮುಂದಾಗಿದೆ ಎಂದು ಅವರು ದೂರಿದ್ದಾರೆ. ಸರ್ಕಾರ ಈಗಲಾದರೂ ತನ್ನ ನಿರ್ಧಾರವನ್ನು ಬದಲಿಸಿ 8 ವಲಯಗಳನ್ನು 6 ವಲಯಗಳನ್ನಾಗಿಸಿ ಎಲ್ಲಾ ವಲಯಗಳಿಗೂ ಐಎಎಸ್ ಅಧಿಕಾರಿಗಳನ್ನು ಜಂಟಿ ಆಯುಕ್ತರನ್ನಾಗಿ ನೇಮಿಸಬೇಕೆಂದು ಪದ್ಮನಾಭರೆಡ್ಡಿ ಸಲಹೆ ನೀಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin