ಬಿಬಿಎಂಪಿ ವ್ಯಾಪ್ತಿಯ ಎಲ್ಲ ವಾರ್ಡ್‍ಗಳಲ್ಲಿ ಕಾಂಪೋಸ್ಟ್ ಗೊಬ್ಬರ ಖರೀದಿ ಕೇಂದ್ರ

Campost-CM

ಬೆಂಗಳೂರು,ಮಾ.27- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಎಲ್ಲ ವಾರ್ಡ್‍ಗಳಲ್ಲಿ ಕಾಂಪೋಸ್ಟ್ ಗೊಬ್ಬರ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.   ವಿಧಾನಸೌಧ ಮುಂಭಾಗ ಏರ್ಪಡಿಸಿದ್ದ ಕಸದಿಂದ ರಸ ಎಂಬ ಕಾಂಪೋಸ್ಟ್ ಗೊಬ್ಬರ ಕಾರ್ಯಕ್ರಮ ಉದ್ಘಾಟಿಸಿ ಹಾಗೂ ಕಾಂಪೋಸ್ಟ್ ಗೊಬ್ಬರದ ಲಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಕಾಂಪೋಸ್ಟ್ ಗೊಬ್ಬರ ಅಭಿವೃದ್ದಿ ನಿಗಮ ವತಿಯಿಂದ ಬಿಬಿಎಂಪಿಯ ಎಲ್ಲ ವಾರ್ಡ್‍ಗಳಿಗೂ ಕಾಂಪೋಸ್ಟ್ ಗೊಬ್ಬರ ಖರೀದಿ ಕೇಂದ್ರ ಸ್ಥಾಪಿಸಲಾಗುವುದು. ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದರು.

ಪ್ರತಿ ಟನ್ ಗೊಬ್ಬರಕ್ಕೆ 800 ರೂ. ದರ ವಿಧಿಸಲಾಗುವುದು. ಒಂದು ವೇಳೆ ರೈತರದ್ದೇ ಸಾರಿಗೆ ವೆಚ್ಚ ಭರಿಸಿದರೆ ಪ್ರತಿ ಟನ್‍ಗೆ 200 ರೂ. ವಿಧಿಸಲಾಗುತ್ತದೆ ಎಂದು ತಿಳಿಸಿದರು.   ಸ್ವಚ್ಛನಗರಿ ಮಾಡುವ ನಿಟ್ಟಿನಲ್ಲಿ ಸರ್ಕಾರದ ಜೊತೆಗೆ ನಾಗರಿಕರು, ಅಧಿಕಾರಿಗಳು ಸಹಕರಿಸಬೇಕು. ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರ ಮನೆಯಲ್ಲಿ 5 ವರ್ಷದಿಂದ ಕಾಂಪೋಸ್ಟ್ ಗೊಬ್ಬರ ತಯಾರು ಮಾಡಲಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿ ಜನರು ಹಸಿ ಮತ್ತು ಒಣಕಸವನ್ನು ಬೇರ್ಪಡಿಸಬೇಕು. ಇದರಿಂದ ಕಸದ ಸಮಸ್ಯೆ ಅರ್ಧದಷ್ಟು ನಿವಾರಣೆಯಾಗಲಿದೆ ಎಂದರು.

ಬೆಂಗಳೂರಿನ ಪರಿಸರವನ್ನು ಉತ್ತಮಪಡಿಸಲು ಮತ್ತು ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ಕಸ ವಿಲೇವಾರಿಗೆ ಸಾಕಷ್ಟು ಅನುದಾನ ನೀಡಿದ್ದು , ಇದು ಯಶಸ್ವಿಯಾಗಬೇಕಾದರೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಸ್ಪಂದಿಸಬೇಕು ಎಂದು ಹೇಳಿದರು.  ಕಳೆದ ನಾಲ್ಕು ವರ್ಷಗಳ ಹಿಂದೆ ಉದ್ಯಾನ ನಗರಿ ಬೆಂಗಳೂರನ್ನು ಗಾರ್ಬೇಜ್ ನಗರ ಎಂದು ಕರೆಯಲಾಗುತ್ತಿತ್ತು. ಇದನ್ನು ಹೋಗಲಾಡಿಸಿ ಸ್ವಚ್ಛ ಹಾಗೂ ಉದ್ಯಾನನಗರಿ ಬೆಂಗಳೂರನ್ನು ಸುಂದರಗೊಳಿಸಲಾಗುತ್ತಿದೆ ಎಂದರು.

ರಾಜ್ಯದಾದ್ಯಂತ ಎಲ್ಲರೂ ಸ್ವಚ್ಛ ಹಾಗೂ ಉತ್ತಮ ಪರಿಸರದತ್ತ ಗಮನಹರಿಸಬೇಕು. ಇತರರಿಗೂ ಮಾದರಿಯಾಗಿರುವಂತೆ ಸುತ್ತಲ ವಾತಾವರಣ ಸ್ವಚ್ಚವಾಗಿಟ್ಟುಕೊಂಡು ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕೆಂದು ಸಲಹೆ ಮಾಡಿದರು.   ಸಚಿವರಾದ ರಾಮಲಿಂಗಾರೆಡ್ಡಿ , ಕೆ.ಜೆ.ಜಾರ್ಜ್, ಶಾಸಕ ಅಶೋಕ್ ಪಟ್ಟಣ, ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ , ಮೇಯರ್ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತ ಮಂಜುನಾಥ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin