ಬಿಬಿಎಂಪಿ ಸದಸ್ಯನ ಅಪಹರಣ ಪ್ರಕರಣ : 8 ಮಂದಿ ಬಂಧನ

BBMP-Member

ಬೆಂಗಳೂರು, ನ.24– ಕಾವೇರಿ ಗಲಭೆ ಸಂದರ್ಭದಲ್ಲಿ ಕಾರ್ಪೊರೇಟರ್ ಶಿವ ಪ್ರಕಾಶ್ ಅವರ ಅಪಹರಣ ಹಾಗೂ ಓಕಳಿಪುರದ ವೈದ್ಯರ ಕ್ಲೀನಿಕ್‍ನಲ್ಲಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಶ್ರೀರಾಂಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ನವೀನ್, ಚರಣ್, ಶಿವಶಂಕರ್ , ನಾಗರಾಜ್, ಜಯಂತ್, ಮಣಿ , ಸುರೇಶ್ ಮತ್ತು ಕುಮಾರ್ ಬಂಧಿತ ಆರೋಪಿಗಳು. ಕಾರ್ಪೊರೇಟರ್ ಅಪಹರಣ ಮತ್ತು ವೈದ್ಯರೊಬ್ಬರ ಸುಲಿಗೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಕಾವೇರಿ ವಿವಾದದ ಹಿನ್ನೆಲೆಯಲ್ಲಿ ನಡೆದ ಬಂದ್ ಸಂದರ್ಭದಲ್ಲಿ ಓಕಳಿಪುರಂ ವಾರ್ಡ್‍ನ ಬಿಬಿಎಂಪಿ ಸದಸ್ಯ ವಿ.ಶಿವಪ್ರಕಾಶ್ ಅವರನ್ನು ಅಪಹರಿಸಿದ ದುಷ್ಕರ್ಮಿಗಳು 5 ಲಕ್ಷ ನಗದು ಹಾಗೂ ಚಿನ್ನದ ಸರ ಮತ್ತು ಉಂಗುರ ಕಸಿದು ಪರಾರಿಯಾಗಿದ್ದರು.  ಪೊಲೀಸರು ತಮ್ಮ ಬೆನ್ನತ್ತಿದ್ದಾರೆ ಎಂಬ ಸುಳಿವರಿತ ಆರೋಪಿಗಳು ಶಿವಪ್ರಕಾಶ್ ಅವರನ್ನು ದಾರಿ ಮಧ್ಯೆ ಇಳಿಸಿ ಪರಾರಿಯಾಗಿದ್ದರು. ಅಲ್ಲದೆ ಶ್ರೀರಾಂಪುರ ವ್ಯಾಪ್ತಿಯ ಕ್ಲೀನಿಕ್‍ಗೆ ನುಗ್ಗಿದ ಆರೋಪಿಗಳು ವೈದ್ಯ ಡಾ.ಜೆ.ಸುಬ್ರಮಣಿ ಅವರಿಗೆ ಚಾಕು ತೋರಿಸಿ ಬೆದರಿಸಿ ಕ್ಯಾಶ್ ಬಾಕ್ಸ್‍ನಲ್ಲಿದ್ದ ಹಣ, 6 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದರು.

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೇಟೆಗೆ ಇಳಿದ ಶ್ರೀರಾಂಪುರ ಇನ್ಸ್‍ಪೆಕ್ಟರ್ ಅನಿಲ್ ಮತ್ತವರ ತಂಡ 8 ಮಂದಿ ದುಷ್ಕರ್ಮಿಗಳನ್ನು ಬಂಧಿಸಿ 1.92 ಲಕ್ಷ ರೂ. ಬೆಲೆಯ ಚಿನ್ನದ ಆಭರಣ, 50 ಸಾವಿರ ನಗದು , ಕೃತ್ಯಕ್ಕೆ ಬಳಸಿದ್ದ ಕಾರು, 2 ಏರ್ ಗನ್, 2 ಲಾಂಗ್ ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ಬಂಧನದಿಂದ ಶ್ರೀರಾಂಪುರ ವ್ಯಾಪ್ತಿಯ 1 ಪ್ರಕರಣ ಹಾಗೂ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣ ಪತ್ತೆಯಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin