ಬೆಂಗಳೂರಲ್ಲಿ ಕುಸಿದ ಮತ್ತೊಂದು ಎರಡಂತಸ್ತಿನ ಕಟ್ಟಡ

Building-Yashwantpur-2

ಬೆಂಗಳೂರು, ಅ.17-ನಿನ್ನೆಯಷ್ಟೆ ಮೂರಂತಸ್ತಿನ ಕಟ್ಟಡ ಕುಸಿದು ಗರ್ಭಿಣಿ ಸೇರಿದಂತೆ ಏಳು ಅಮಾಯಕರು ಸಾವನ್ನಪ್ಪಿರುವ ಘಟನೆ ಮಾಸುವ ಮುನ್ನವೇ ಯಶವಂತಪುರದಲ್ಲಿ ಮತ್ತೊಂದು ಎರಡಂತಸ್ತಿನ ಕಟ್ಟಡ ಕುಸಿದುಬಿದ್ದಿದೆ. ಆದರ ಮನೆ ಮಾಲೀಕನ ಸಮಯ ಪ್ರಜ್ಞೆಯಿಂದ ಕಟ್ಟಡದಲ್ಲಿ ವಾಸಿಸುತ್ತಿದ್ದ ಎರಡು ಕುಟುಂಬಗಳು ಪ್ರಾಣಾಪಾಯದಿಂದ ಪಾರಾಗಿವೆ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಕೆ.ನಗರದಲ್ಲಿರುವ ರಾಮಪ್ಪ ಅಲಿಯಾಸ್ ಫ್ಲೋರ್‍ಮಿಲ್ ರಾಮಪ್ಪ ಅವರ ಎರಡಂತಸ್ತಿನ ಕಟ್ಟಡವೇ ಕುಸಿದುಬಿದ್ದಿರುವುದು.

ಯಶವಂತಪುರ ಬಿಬಿಎಂಪಿ ಸದಸ್ಯ ವೆಂಕಟೇಶ್ (ಎನ್‍ಟಿಆರ್) ಅವರ ನಿವಾಸದ ಪಕ್ಕದಲ್ಲಿರುವ ಹಳೆಯದಾದ ಎರಡಂತಸ್ತಿನ ಕಟ್ಟಡ ನಿನ್ನೆ ರಾತ್ರಿ ಕುಸಿದುಬಿದ್ದಿದೆ. ಘಟನೆಯಲ್ಲಿ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೆಲ ಅಂತಸ್ತಿನಲ್ಲಿ ರಾಮಪ್ಪ ಅವರ ಫ್ಲೋರ್‍ಮಿಲ್ ಇದ್ದು, ಮೇಲಂತಸ್ತಿನಲ್ಲಿ ಎರಡು ಕುಟುಂಬಗಳು ವಾಸವಿದ್ದವು. ನಿನ್ನೆ ರಾತ್ರಿ 10.45ರ ಸಮಯದಲ್ಲಿ ರಾಮಪ್ಪ ಊಟ ಮಾಡುತ್ತಿದ್ದಾಗ ಕಟ್ಟಡ ಅಲುಗಾಡಿದ ಅನುಭವವಾಯಿತು. ಕೂಡಲೇ ಆತ ಮನೆಯಲ್ಲಿದ್ದವರನ್ನೆಲ್ಲಾ ಹೊರಗೆ ಕರೆತಂದ ಕೆಲ ಕ್ಷಣಗಳಲ್ಲಿಯೇ ನೋಡುನೋಡುತ್ತಿದ್ದಂತೆ ಇಡೀ ಕಟ್ಟಡ ಕುಸಿದು ಬಿತ್ತು.

ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಹಳೆಯದಾದ ಮನೆ ತೇವಾಂಶದಿಂದ ಶಿಥಿಲಗೊಂಡು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.   ನಿನ್ನೆ ಮುಂಜಾನೆ ಈಜಿಪುರದಲ್ಲಿ ಮೂರಂತಸ್ತಿನ ಕಟ್ಟಡ ಕುಸಿದು ಬಿದ್ದು ಗರ್ಭಿಣಿ ಸೇರಿದಂತೆ ಏಳು ಮಂದಿ ಅಮಾಯಕರು ಪ್ರಾಣ ತೆತ್ತಿದ್ದನ್ನು ಇಲ್ಲಿ ಸ್ಮರಿಸಬಹುದು.  ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಯಾವ ಕಟ್ಟಡ, ಯಾವಾಗ ಕುಸಿದು ಬೀಳುತ್ತದೋ ಎಂಬ ಆತಂಕ ಎಲ್ಲೆಡೆ ಕಾಡುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಭಾರೀ ಸದ್ದು ಮಾಡುವ ಪಟಾಕಿಗಳನ್ನು ಸಿಡಿಸಿದರೆ ಶಿಥಿಲಾವಸ್ಥೆಯಲ್ಲಿರುವ ಮತ್ತಷ್ಟು ಕಟ್ಟಡಗಳಿಗೆ ಹಾನಿಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಾಗರಿಕರು ಭಾರೀ ಸದ್ದು ಮಾಡುವ ಪಟಾಕಿ ಬಳಕೆ ಮಾಡದಿರುವುದು ಕ್ಷೇಮ.

Sri Raghav

Admin