ಬೆಂಗಳೂರಲ್ಲಿ ರಸ್ತೆಯ ಪಕ್ಕ ನಿಮ್ಮ ವಾಹನ ಪಾರ್ಕ್ ಮಾಡುವ ಮುನ್ನ ಎಚ್ಚರ..!

Crime-Bengaluru--01

ಬೆಂಗಳೂರು, ಆ.23-ವಾಹನ ಸವಾರರೇ ಇರಲಿ ಎಚ್ಚರ..! ರಸ್ತೆಯಲ್ಲಿ ನಿಮ್ಮ ವಾಹನ ನಿಲ್ಲಿಸುವಾಗ ಜಾಗ್ರತೆ ವಹಿಸಿ, ಇಲ್ಲದಿದ್ದರೆ ನಿಮ್ಮ ಬೆಲೆಬಾಳುವ ಕಾರು, ಬೈಕ್‍ಗಳು ಮಂಗಮಾಯವಾಗುವುದು ಗ್ಯಾರಂಟಿ. ಯಾಕೆ ಅಂತೀರಾ… ನಗರದಲ್ಲಿ ಮೋಜಿನ ಜೀವನ ನಡೆಸುವುದಕ್ಕಾಗಿ ರಸ್ತೆ ಬದಿ ವಾಹನಗಳನ್ನು ಕಳವು ಮಾಡುವ ಖತರ್ನಾಕ್ ಖದೀಮರಿದ್ದಾರೆ. ನಿಮ್ಮ ವಾಹನಗಳ ಸುರಕ್ಷತೆ ನೋಡಿಕೊಳ್ಳದಿದ್ದರೆ ಕ್ಷಣಮಾತ್ರದಲ್ಲಿ ಕಾರು, ಬೈಕ್ ಕಳುವಾಗಲಿದೆ. ಪಶ್ಚಿಮ ವಲಯವೊಂದರಲ್ಲೇ 80 ಲಕ್ಷಕ್ಕೂ ಹೆಚ್ಚು ಮೌಲ್ಯದ 159 ವಾಹನಗಳನ್ನು ಖದೀಮರು ಕಳವು ಮಾಡಿದ್ದು, ಇಂತಹ 60 ಖತರ್ನಾಕ್ ಚೋರರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

Crime-Bengaluru--07

ಕೇಂದ್ರ, ಉತ್ತರ, ಪಶ್ಚಿಮ ಹಾಗೂ ದಕ್ಷಿಣ ವಿಭಾಗಗಳಲ್ಲಿ ಬಂಧಿಸಲಾದ 60 ಆರೋಪಿಗಳಿಂದ 153 ದ್ವಿಚಕ್ರ, 5 ತ್ರಿಚಕ್ರ ಹಾಗೂ ಒಂದು ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇಂದು ಪೊಲೀಸ್ ಕಮೀಷನರ್ ಟಿ.ಸುನೀಲ್‍ಕುಮಾರ್ ಅವರು ಕೆಲವು ವಾಹನಗಳ ವಾರಸುದಾರರಿಗೆ ವಾಹನಗಳನ್ನು ಹಸ್ತಾಂತರಿಸಿದರು.  ಈ ಖದೀಮರು ಅಶೋಕ್‍ನಗರ, ಕಬ್ಬನ್‍ಪಾರ್ಕ್, ವಿಧಾನಸೌಧ, ವಿವೇಕನಗರ, ಹಲಸೂರು ಗೇಟ್, ವೈಯಾಲಿಕಾವಲ್, ಸದಾಶಿವನಗರ, ಮಲ್ಲೇಶ್ವರಂ, ರಾಜಾಜಿನಗರ, ಬನಶಂಕರಿ, ಸುಬ್ರಹ್ಮಣ್ಯನಗರ, ಬಸವನಗುಡಿ ಸೇರಿದಂತೆ ಪಶ್ಚಿಮ ವಲಯದ 46 ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ವಾಹನ ಕಳವು ಮಾಡುತ್ತಿದ್ದರು.

Crime-Bengaluru--05

ಕಳುವಿಗೆ ಕಾರಣ:

ಆರೋಪಿಗಳು ಮದ್ಯಪಾನ ಮಾಡಲು ಮತ್ತು ಸ್ಟೈಲಿಷ್ ಜೀವನ ನಡೆಸುವ ಉದ್ದೇಶದಿಂದ ವಾಹನ ಕಳವು ದಂಧೆಗೆ ಇಳಿದಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಜೆ.ಪಿ.ನಗರ ಪೊಲೀಸರು ರಂಜಿತ್ ಮತ್ತು ಮಾರಿಮುತ್ತು ಎಂಬುವರನ್ನು ಬಂಧಿಸಿದಾಗ ಅವರು ವ್ಹೀಲಿಂಗ್ ಮಾಡಲು ಹಾಗೂ ಜಾಲಿ ರೈಡ್ ಉದ್ದೇಶದಿಂದ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳನ್ನು ಕಳವು ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.  ಇನ್ನೊಬ್ಬ ಆಸಾಮಿ ತನ್ನ ಗೆಳತಿಯನ್ನು ಬೈಕ್‍ನಲ್ಲಿ ಸುತ್ತಾಡಿಸುವ ಉದ್ದೇಶದಿಂದ 16 ವಾಹನಗಳನ್ನು ಕದ್ದಿದ್ದ. ಈತ ಕೆ.ಜಿ.ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ಆರೋಪಿಗಳು ಮದ್ಯಪಾನ ಮಾಡಲು ಮತ್ತು ಮೋಜಿನ ಜೀವನಕ್ಕಾಗಿ ವಾಹನ ಕಳವು ಮಾಡಿ ಸಿ.ಕೆ.ಅಚ್ಚುಕಟ್ಟು ಪೊಲೀಸರ ಬಲೆಗೆ ಬಿದ್ದಿದ್ದಾರೆ.

Crime-Bengaluru--04

ನಗರದಲ್ಲಿ ಹೆಚ್ಚುತ್ತಿರುವ ವಾಹನ ಕಳವು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಲಯ ಪೊಲೀಸರು ಕೇಂದ್ರ, ಉತ್ತರ, ಪಶ್ಚಿಮ ಹಾಗೂ ದಕ್ಷಿಣ ವಿಭಾಗಗಳಲ್ಲಿ ವಾಹನ ಕಳ್ಳರ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಕಾರ್ಯಾಚರಣೆಗಿಳಿದ ಪೊಲೀಸರು 60 ಕಳ್ಳರನ್ನು ಬಂಧಿಸಿ 80 ಲಕ್ಷ ಮೌಲ್ಯದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Crime-Bengaluru--03

ಬೇಜವಾಬ್ದಾರಿಯೇ ಕಾರಣ:

ವಾಹನ ಸವಾರರ ಬೇಜವಾಬ್ದಾರಿತನವೂ ವಾಹನ ಕಳುವಿಗೆ ಪ್ರಮುಖ ಕಾರಣ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಬಹಳಷ್ಟು ಪ್ರಕರಣಗಳಲ್ಲಿ ವಾಹನ ಸವಾರರು ಕೀಗಳನ್ನು ವಾಹನದಲ್ಲೇ ಬಿಟ್ಟು ಹೋಗಿದ್ದರು. ಇನ್ನು ಕೆಲವರು ಸುರಕ್ಷಿತವಾಗಿ ವಾಹನ ನಿಲ್ಲಿಸದಿರುವುದು ಮತ್ತು ಕಳವು ನಿರೋಧಕ ಅಲಾರಂ ಅಳವಡಿಸದಿರುವುದು ಪತ್ತೆಯಾಗಿದೆ.

Crime-Bengaluru--02

ಇರಲಿ ಎಚ್ಚರ:

ನಗರದಲ್ಲಿ ವಾಹನ ಕಳವು ಮಾಡುವವರು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇನ್ನು ಮುಂದೆ ವಾಹನಗಳಿಗೆ ಬೀಗ ಹಾಕದೆ ನಿಲ್ಲಿಸಬೇಡಿ. ನಿಮ್ಮ ವಾಹನದಲ್ಲೇ ಎಕ್ಸ್‍ಟ್ರಾ ಕೀ ಇಡಬೇಡಿ. ನಾಲ್ಕು ಚಕ್ರದ ವಾಹನಗಳ ಕಿಟಕಿ ಗ್ಲಾಸ್ ತೆರೆದಿಡಬೇಡಿ. ಕಂಡ ಕಂಡಲ್ಲಿ ವಾಹನ ನಿಲ್ಲಿಸದೆ ಪಾರ್ಕಿಂಗ್ ಸ್ಥಳದಲ್ಲೇ ವಾಹನ ನಿಲ್ಲಿಸಿ. ಆಗಂತುಕರು ನಿಮ್ಮ ವಾಹನ ಮುಟ್ಟಿದಾಗ ಸದ್ದು ಮಾಡುವ ಆಡಿಬಲ್ ಅಲಾರಂ ಸಿಸ್ಟಮ್ ಅಳವಡಿಸಿ. ಬಹಳಷ್ಟು ಸಮಯ ವಾಹನ ನಿಲ್ಲಿಸುವ ಅವಶ್ಯಕತೆ ಇದ್ದರೆ, ಪವರ್ ಸಪ್ಲೈ ಬಂದ್ ಮಾಡುವುದು ಸೇರಿದಂತೆ ಹಲವಾರು ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಪೊಲೀಸರು ವಾಹನ ಸವಾರರಿಗೆ ಸಲಹೆ ನೀಡಿದ್ದಾರೆ.

ಹಸ್ತಾಂತರ:

60 ಖದೀಮರಿಂದ ವಶಪಡಿಸಿಕೊಳ್ಳ ಲಾದ 80ಲಕ್ಷ ಮೌಲ್ಯದ 159 ವಾಹನಗಳನ್ನು ಪೊಲೀಸರು ಇಂದು ಹಲವು ವಾರಸುದಾರರಿಗೆ ಹಸ್ತಾಂತರಿಸಿದರು.

Sri Raghav

Admin