ಬೆಂಗಳೂರಲ್ಲೊಂದು ಭಾರಿ ದರೋಡೆ : ಕ್ಯಾಂಟರ್ನಲ್ಲಿ ಸಾಗಿಸುತ್ತಿದ್ದ ಕೋಟಿ ಹಣ ಲೂಟಿ

ಬೆಂಗಳೂರು, ನ.25– ಬೈಕ್ ಮತ್ತು ಕಾರ್ನಲ್ಲಿ ಹಿಂಬಾಲಿಸಿದ ದರೊಡೆಕೋರರ ತಂಡ ನೈಸ್ ರಸ್ತೆಯಲ್ಲಿ ಕ್ಯಾಂಟರ್ನಲ್ಲಿ ಸಾಗಿಸುತ್ತಿದ್ದ ಒಂದು ಕೋಟಿ ರೂ.ಗಳನ್ನು ಲೂಟಿ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಕಳೆದ 22ರಂದು ದೇವನಹಳ್ಳಿಯ ಐಟಿಸಿ ಪ್ಯಾಕ್ಟರಿಯಿಂದ ವಿತರಕ ಆರೋಗ್ಯರಾಜು ಎಂಬುವರು ಕ್ಯಾಂಟರ್ನಲ್ಲಿ ಒಂದು ಕೋಟಿ ಹಣ ತರುತ್ತಿದ್ದಾಗ ಈ ಘಟನೆ ಜರುಗಿದೆ. ಹಣವಿದ್ದ ಕ್ಯಾಂಟರ್ ತಲಘಟ್ಟಪುರ ಸಮೀಪ ನೈಸ್ರೋಡ್ಗೆ ಪ್ರವೇಶ ಪಡೆಯುತ್ತಿದ್ದಂತೆ ಕಾರು ಮತ್ತು ಬೈಕ್ನಲ್ಲಿ ಬಂದ 15ಕ್ಕೂ ಹೆಚ್ಚು ಮಂದಿ ಇದ್ದ ದರೋಡೆಕೋರರ ತಂಡ ಏಕಾಏಕಿ ಕ್ಯಾಂಟರನ್ನು ಅಡ್ಡಹಾಕಿ ಮಚ್ಚು ಲಾಂಗುಗಳಿಂದ ಚಾಲಕನನ್ನು ಬೆದರಿಸಿ ಕೋಟಿ ಹಣ ದೋಚಿ ಪರಾರಿಯಾಗಿದೆ. ಈ ಕುರಿತಂತೆ ಆರೋಗ್ಯರಾಜು ತಲಘಟ್ಟಪುರ ಪೊಲೀಸರಿಗೆ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ಆರೋಗ್ಯ ರಾಜ್ ಮೇಲೆ ಅನುಮಾನ:
ಕೋಟಿ ಹಣ ಲೂಟಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ತಲಘಟ್ಟಪುರ ಪೊಲೀಸರು ತನಿಖೆ ತೀವ್ರಗೊಳಿಸುತ್ತಿದ್ದಂತೆ ದೂರುದಾರನ ಮೇಲೆ ಅನುಮಾನ ಮೂಡತೊಡಗಿದೆ.
ಕ್ಯಾಂಟರ್ನಲ್ಲಿ ಒಂದು ಕೋಟಿ ರೂ. ಹಣ ಸಾಗಿಸುತ್ತಿದ್ದ ವಿಚಾರ ಚಾಲಕ ಮತ್ತು ವಿತರಕ ಆರೋಗ್ಯ ರಾಜ್ಗೆ ಮಾತ್ರ ತಿಳಿದಿತ್ತು. ಆದರೂ ದರೋಡೆಕೋರರ ತಂಡ ಅದೇ ಕ್ಯಾಂಟರನ್ನು ಬೆನ್ನತ್ತಿ ನೈಸ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ವಾಹನ ಅಡ್ಡಗಟ್ಟಿ ಕ್ಯಾಂಟರ್ನಲ್ಲಿದ್ದ ಕೋಟಿ ಹಣ ನೀಡುವಂತೆ ಒತ್ತಾಯ ಮಾಡಿದರೂ ಎಂಬ ಹೇಳಿಕೆಯೇ ಇದೀಗ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಹಿನ್ನೆಲೆಯಲ್ಲಿ ಆರೋಗ್ಯರಾಜ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಐಟಿಸಿ ಕಂಪೆನಿಗೆ ತಾನು ಪಾವತಿಸಬೇಕಾಗಿದ್ದ ಕೋಟಿ ಹಣವನ್ನು ಲೂಟಿ ಮಾಡಲು ಚಾಲಕನೊಂದಿಗೆ ಶಾಮೀಲಾಗಿ ಆರೋಗ್ಯರಾಜನೇ ದರೋಡೆ ಪ್ರಕರಣದ ಸೂತ್ರಧಾರನಾದನೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… : Eesanje News 24/7 ನ್ಯೂಸ್ ಆ್ಯಪ್ – Click Here to Download