ಬೆಂಗಳೂರಿನಲ್ಲಿ ನಾಪತ್ತೆಯಾದ ಪೂಜಿತ ಹುಬ್ಬಳ್ಳಿಯಲ್ಲಿ ಪತ್ತೆ

Poojitha

ಹುಬ್ಬಳ್ಳಿ,ಆ.28- ಮೂರು ದಿನಗಳ ಹಿಂದೆ ಮನೆಯಿಂದ ಶಾಲೆಗೆ ಹೋಗುವುದಾಗಿ ಹೇಳಿ ಬೆಂಗಳೂರಿನಿಂದ ನಾಪತ್ತೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿನಿ ಪೂಜಿತ ಇದೀಗ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದು, ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಗಣಿತ ವಿಷಯದಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಶಾಲೆಯ ಶಿಕ್ಷಕರು ಉತ್ತರ ಪತ್ರಿಕೆಗೆ ಪೋಷಕರ ಸಹಿ ಹಾಕಿಸಿಕೊಂಡು ಬರುವಂತೆ ಹೇಳಿದ್ದರಿಂದ ಗಾಬರಿಯಾದ ಯುವತಿ ಮನೆಯವರಿಗೆ ತಿಳಿಸದೆ ಆಗಸ್ಟ್ 24 ರಂದು ಶಾಲೆಗೆ ಹೋಗುವುದಾಗಿ ಹೇಳಿ ಹೊರಟಿದ್ದಳು. ಆದರೆ ಅಂದು ಶಾಲೆಯಿಂದ ಮನೆಗೆ ಬಾರದಿರುವುದರಿಂದ ಗಾಬರಿಯಾದ ಪೋಷಕರು ಶ್ರೀರಾಮಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೂಜಿತ ವ್ಯಾಸಂಗ ಮಾಡುತ್ತಿದ್ದ ಶಾಲೆಯ ಸುತ್ತಮುತ್ತಲಿನ ಸಿಸಿಟಿವಿಯನ್ನು ಪರಿಶೀಲಿಸಿದಾಗ ಆಕೆ ಹೋಗುತ್ತಿದ್ದುದು ಸ್ಪಷ್ಟವಾಗಿ ಗೋಚರಿಸಿದೆ. ಈ ಮಾಹಿತಿ ಮೇಲೆ ತನಿಖೆ ಆರಂಭಿಸಿದ ಶ್ರೀರಾಮಪುರ ಠಾಣೆ ಪೊಲೀಸರಿಗೆ ರೈಲಿನಲ್ಲಿ ಹೋಗಿರುವ ಬಗ್ಗೆ ತಿಳಿದು ಬಂದಿದೆ.  ಆಗಸ್ಟ್ 25 ರಂದು ಮಧ್ಯಾಹ್ನ 3 ಗಂಟೆಯಲ್ಲಿ ಅಲಹಾಬಾದ್ ರೈಲ್ವೆ ನಿಲ್ದಾಣದಲ್ಲಿ ಈ ಯುವತಿ ಇದ್ದ ಬಗ್ಗೆ ಅಲ್ಲಿನ ಸಿಸಿ ಟಿವಿ ಮಾಹಿತಿ ಮೇರೆಗೆ ಪೊಲೀಸರು ಬೆಂಗಳೂರಿನ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಅಲ್ಲಿಂದ ಯಾವ ರೈಲಿನಲ್ಲಿ ಈ ಯುವತಿ ಎಲ್ಲಿಗೆ ಹೋದಳೆಂಬ ಬಗ್ಗೆ ತನಿಖೆ ಆರಂಭಿಸಿದಾಗ ಇಂದು ಬೆಳಗ್ಗೆ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಪೂಜಿತ ಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸೋದರ ಸಂಬಂಧಿಕರಾದ ವಿನೋದ್ ಅವರು ಆಕೆಯನ್ನು ಯಲ್ಲಾಪುರ ಓಣಿಯ ತಮ್ಮ ಮನೆಗೆ ಕರೆದೊದ್ದು ಪೂಜಿತಾ ಸಿಕ್ಕಿರುವ ಬಗ್ಗೆ ಅವರ ಪೊಲೀಸರಿಗೆ ಹಾಗೂ ಪೋಷಕರಿಗೆ ಮಾಹಿತಿ ರವಾನಿಸಿದ್ದರಿಂದ ನಾಪತ್ತೆ ಪ್ರಕರಣ ಸುಖ್ಯಾಂತ ಕಂಡಿದೆ.

► Follow us on –  Facebook / Twitter  / Google+

Sri Raghav

Admin