ಬೆಂಗಳೂರಿನ ಪ್ರಮುಖ ರಸ್ತೆಯೊಂದಕ್ಕೆ ಹುತಾತ್ಮ ಲೆ. ಕರ್ನಲ್ ನಿರಂಜನ್ ಹೆಸರು

Niranjan

ಬೆಂಗಳೂರು, ಮೇ 22- ಪಠಾಣ್ ಕೋಟ್ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಅವರ ಹೆಸರನ್ನು ವಿವಾದಿತ ಸ್ಥಳ ಹೊರತುಪಡಿಸಿ ನಗರದ ಬೇರೊಂದು ಪ್ರಮುಖ ರಸ್ತೆಗೆ ಹೆಸರನ್ನು ನಾಮಕರಣ ಮಾಡ ಲಾಗುವುದೆಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.  ವಿಧಾನಸೌಧದ ಮುಂಭಾಗ ಯಾಂತ್ರೀಕೃತ ರಸ್ತೆ ಕಸ ಗುಡಿಸುವ ಯಂತ್ರಗಳಿಗೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ದೊಡ್ಡಬೊಮ್ಮಸಂದ್ರ ಮುಖ್ಯರಸ್ತೆಗೆ ನಿರಂಜನ್ ಅವರ ಹೆಸರನ್ನು ನಾಮಕರಣ ಮಾಡುವಂತೆ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, ಮೇಯರ್ ಅವರು ನಿರಂಜನ್ ಬದಲಿಗೆ ಸ್ವತಂತ್ರ ಯೋಧ ರಾಮಯ್ಯ ಅವರ ಹೆಸರನ್ನು ನಾಮಕರಣ ಮಾಡು ವಂತೆ ಸೂಚಿಸಿದ್ದರು.

ಹಾಗಾಗಿ ದೊಡ್ಡಬೊಮ್ಮಸಂದ್ರ ರಸ್ತೆಗೆ ರಾಮಯ್ಯ ಹೆಸರೋ ಅಥವಾ ನಿರಂಜನ್ ಹೆಸರೋ ಎಂಬ ವಾದ-ವಿವಾದ ಉಂಟಾಗಿತ್ತು. ರಸ್ತೆ ನಾಮಕರಣ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ದೃಷ್ಟಿಯಿಂದ ಸರ್ಕಾರ ದೊಡ್ಡಬೊಮ್ಮಸಂದ್ರ ರಸ್ತೆಯನ್ನು ಹೊರತುಪಡಿಸಿ ನಗರದ ಬೇರೊಂದು ರಸ್ತೆಗೆ ನಿರಂಜನ್ ಅವರ ಹೆಸರನ್ನು ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲಾಗಿದೆ.


 

ಏನಿದು ವಿವಾದ? : 

ಪಠಾಣ್ ಕೋಟ್ ದಾಳಿಯಲ್ಲಿ ವೀರಮರಣವನ್ನಪ್ಪಿದ ನಿರಂಜನ್ ಕುಟುಂಬದವರು ದೊಡ್ಡಬೊಮ್ಮಸಂದ್ರದಲ್ಲಿ ವಾಸವಾಗಿರುವ ಹಿನ್ನೆಲೆಯಲ್ಲಿ ಹಾಗೂ ನಿರಂಜನ್ ಸ್ನೇಹಿತ ಶಶಾಂಕ್ ಶ್ರೀನಿವಾಸ್ ಎಂಬುವವರು ಈ ರಸ್ತೆಗೆ ನಿರಂಜನ್ ಹೆಸರು ನಾಮಕರಣ ಮಾಡುವಂತೆ ಪಾಲಿಕೆಗೆ ಮನವಿ ಮಾಡಿದ್ದರು.  ಇದಕ್ಕೆ ಕೌನ್ಸಿಲ್ ಸಭೆಯಲ್ಲೂ ಸಹ ಅಂಗೀಕಾರವಾಗಿತ್ತು. ಆದರೆ, ಅಲ್ಲಿನ ಸ್ಥಳೀಯರು ದೊಡ್ಡಬೊಮ್ಮಸಂದ್ರ ಮುಖ್ಯ ರಸ್ತೆಗೆ ಹಾಲಿ ಸೀತಪ್ಪ ಸರ್ಕಲ್ ಎಂಬ ಹೆಸರಿದೆ. ಹಾಗಾಗಿ ನಿರಂಜನ್ ಹೆಸರು ಬೇಡ. ಬದಲಿಗೆ ಈ ಭಾಗದ ಸ್ವತಂತ್ರ್ಯ ಯೋಧ ರಾಮಯ್ಯ ಅವರ ಹೆಸರಿಡಬೇಕೆಂದು ಸಚಿವ ಕೃಷ್ಣಭೈರೇಗೌಡ ಅವರಿಗೆ ಮನವಿ ಮಾಡಿದ್ದರು.

ಸ್ಥಳೀಯರ ಮನವಿ ಮೇರೆಗೆ ಪಾಲಿಕೆಗೆ ಪತ್ರ ಬರೆದು ಪರಿಶೀಲಿಸುವಂತೆ ಸೂಚಿಸಿದ್ದರು. ನಂತರ ಈ ವಿವಾದ ಅಲ್ಲಿಗೇ ಅಂತ್ಯವಾಗಿತ್ತು. ಆದರೆ, ನಿರಂಜನ್ ಅವರ ಸ್ನೇಹಿತ ದೊಡ್ಡಬೊಮ್ಮಸಂದ್ರ ರಸ್ತೆಗೆ ನಿರಂಜನ್ ಹೆಸರಿಡಬೇಕೆಂದು, ಸ್ಥಳೀಯರು ರಾಮಯ್ಯ ಹೆಸರಿಡಬೇಕೆಂದು ಪಟ್ಟು ಹಿಡಿದಿದ್ದಾರೆ. ಈ ಎರಡೂ ಹೆಸರಿನ ನಾಮಕರಣಗಳನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ವಿವಾದಕ್ಕೆ ಅಂತ್ಯ ಹಾಡಲು ನಗರದ ಬೇರೊಂದು ಪ್ರಮುಖ ರಸ್ತೆಗೆ ನಿರಂಜನ್ ಅವರ ಹೆಸರಿಡಲು ತೀರ್ಮಾನ ಕೈಗೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin