ಬೆಂಗಳೂರಿನ ವಾಯುಮಾಲಿನ್ಯ ಅಧ್ಯಯನ ನಡೆಸಲಿದೆ ಲಂಡನ್ ಮೂಲದ ಸಿ40 ಸಂಸ್ಥೆ

ಬೆಂಗಳೂರು, ಡಿ.5- ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಹತೋಟಿಗೆ ತರುವ ಕಾರ್ಯಕ್ಕೆ ಕೈ ಹಾಕಿರುವ ಮೇಯರ್ ಜಿ.ಸಂಪತ್‍ರಾಜ್ ಅವರು ಸಿಲಿಕಾನ್ ಸಿಟಿಯ ವಾಯು ಮಾಲಿನ್ಯ ತಪಾಸಣೆ ನಡೆಸುವ ಹೊಣೆಯನ್ನು ಲಂಡನ್ ಮೂಲದ ಸಿ40 ಸಂಸ್ಥೆಗೆ ವಹಿಸಲು ತೀರ್ಮಾನಿಸಿದ್ದಾರೆ. ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರೊಂದಿಗೆ ನವದೆಹಲಿಗೆ ತೆರಳಿರುವ ಸಂಪತ್‍ರಾಜ್ ಅವರು ಲಂಡನ್ ಮೇಯರ್ ಸಾದಿಕ್ ಖಾನ್ ಅವರೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ವಾಯುಮಾಲಿನ್ಯ ತಡೆಗಟ್ಟುವ ಕುರಿತಂತೆ ಲಂಡನ್ ಮೂಲದ ಸಿ40 ಸಂಸ್ಥೆಯೊಂದಿಗೆ ಒಡಂಬಂಡಿಕೆ ಮಾಡಿಕೊಳ್ಳುವ ಕುರಿತಂತೆ ತೀರ್ಮಾನ ಕೈಗೊಳ್ಳಲಾಯಿತು. ಸಿಲಿಕಾನ್ ಸಿಟಿಯ ವಾಯುಮಾಲಿನ್ಯ ಪರೀಕ್ಷೆ ಕುರಿತಂತೆ ಗುರುವಾರ ಲಂಡನ್ ಹಾಗೂ ಬೆಂಗಳೂರು ಪಾಲಿಕೆಗಳು ಒಡಂಬಡಿಕೆಗೆ ಸಹಿ ಹಾಕಲಿವೆ.

ಪ್ರಪಂಚದ 20 ಮಹಾನಗರಗಳ ವಾಯುಮಾಲಿನ್ಯ ತಪಾಸಣೆ ನಡೆಸಿ ಪರಿಹಾರ ಸೂಚಿಸುವ ಹೊಣೆ ಹೊತ್ತಿರುವ ಸಿ40 ಸಂಸ್ಥೆ ಬೆಂಗಳೂರಿನ ವಾಯುಮಾಲಿನ್ಯ ಕುರಿತು ಅಧ್ಯಯನ ನಡೆಸಿ ಪರಿಹಾರ ಸೂಚಿಸಲಿದ್ದಾರೆ.  ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಸಂಪತ್‍ರಾಜ್ ಅವರು, ಬೆಂಗಳೂರಿನಲ್ಲಿ ಪ್ರಸ್ತುತ 19 ಕಡೆ ಮಾಲಿನ್ಯ ಮಾಪಕಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಿತರ ಹಲವು ಪ್ರದೇಶಗಳಲ್ಲೂ ವಾಯುಮಾಲಿನ್ಯ ಮಾಪಕಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರಸ್ತುತ ಬೆಂಗಳೂರಿನ ವಾಯುಮಾಲಿನ್ಯ ಪ್ರಾಥಮಿಕ ಹಂತದಲ್ಲಿದೆ. ಈ ಸಂದರ್ಭದಲ್ಲೇ ವಾಯುಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.  ಅಧ್ಯಯನ ನಡೆಸಿ ಸಿ40 ತಜ್ಞರು ನೀಡುವ ವರದಿಯನ್ನಾಧರಿಸಿ ಮಾಲಿನ್ಯ ತಡೆಗಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹತೋಟಿಯಲ್ಲಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿರುವುದರಿಂದ ಅಪಾಯದ ಅಂಚಿಗೆ ತಲುಪಿದೆ.  ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಲು ಮನಸ್ಸು ಮಾಡದಿದ್ದರೆ ಭವಿಷ್ಯದಲ್ಲಿ ಬೆಂಗಳೂರಿಗೂ ಅಪಾಯ ಕಟ್ಟಿಟ್ಟ ಬುತ್ತಿ ಎಂಬುದರಲ್ಲಿ ಎರಡು ಮಾತಿಲ್ಲ.

Sri Raghav

Admin