ಬೆಂಗಳೂರು ಕರಗಕ್ಕೆ ಕ್ಷಣಗಣನೆ : ಧಾರ್ಮಿಕ ಆಚರಣೆಯಲ್ಲಿ ಜ್ಞಾನೇಶ್ವರ್ ಭಾಗಿ

Karaga--01

ಬೆಂಗಳೂರು, ಏ.9- ವಿಶ್ವವಿಖ್ಯಾತ ಬೆಂಗಳೂರು ಕರಗಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಇಂದು ರಾತ್ರಿ ಹಸಿ ಕರಗ ನೆರವೇರಲಿದೆ. ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ಕಾರ್ಯಗಳನ್ನು ಕೈಗೊಂಡಿರುವ ಅರ್ಚಕ ಜ್ಞಾನೇಶ್ವರ್ ಈ ಬಾರಿಯೂ ಕರಗ ಹೊರಲಿದ್ದಾರೆ. ನಿನ್ನೆ ರಾತ್ರಿ ವಹ್ನಿ ಕುಲ ಕ್ಷತ್ರಿಯ ಬಾಂಧವರು ದ್ರೌಪದಿ ದೇವಿಗೆ ಆರತಿ ಪೂಜೆ ಸಲ್ಲಿಸಿದರು.  ಕರಗ ಹೊರುವ ಅರ್ಚಕ ಕೆಂಪೇಗೌಡ ವೃತ್ತದಲ್ಲಿರುವ ಅಣ್ಣಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇಂದು ರಾತ್ರಿ ಕಬ್ಬನ್‍ಪಾರ್ಕ್ ನಲ್ಲಿರುವ ಕರಗದ ಕುಂಟೆಯಲ್ಲಿ ಪೂಜೆ ಸಲ್ಲಿಸಿದ ನಂತರ ಹಸಿ ಕರಗ ನೆರವೇರಲಿದ್ದು, ಮಂಗಳವಾರ ಮಧ್ಯರಾತ್ರಿ ಕರಗ ಶಕ್ರೋತ್ಸವ ನೆರವೇರಲಿದೆ.

ಕರಗದ ಹಿನ್ನೆಲೆಯಲ್ಲಿ ತಿಗಳರಪೇಟೆ, ಅಕ್ಕಿಪೇಟೆ, ಬಳೆಪೇಟೆ, ಚಿಕ್ಕಪೇಟೆ, ಸುಲ್ತಾನ್‍ಪೇಟೆ ಮತ್ತಿತರ ಪ್ರದೇಶಗಳಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ.
ಈ ಭಾಗದಲ್ಲಿರುವ ಎಲ್ಲಾ ದೇವಾಲಯಗಳು ಮತ್ತು ದರ್ಗಾಗಳಲ್ಲೂ ವಿಶೇಷ ಪೂಜೆ ನೆರವೇರಿಸಲಾಗುತ್ತಿದೆ.

ಕಳೆಗುಂದದ ಕರಗ:

ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಕರಗ ಈಗಲೂ ಕಳೆಗುಂದದಿರುವುದು ಈ ಉತ್ಸವ ವೈಶಿಷ್ಟ್ಯ.  ಬಸವನಗುಡಿಯ ಕಡಲೇಕಾಯಿ ಪರಿಷೆ, ಕರಗ ಬೆಂಗಳೂರಿನ ವಿಶಿಷ್ಟ ಆಚರಣೆಗಳಲ್ಲಿ ಒಂದಾಗಿದ್ದು, ಈಗಲೂ ಎರಡೂ ಆಚರಣೆಗಳಿಗೆ ರಾಜ್ಯದ ವಿವಿಧ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದಲೂ ಭಕ್ತ ಸಾಗರವೇ ಹರಿದುಬರುತ್ತಿದೆ. ಮಂಗಳವಾರ ಮಧ್ಯರಾತ್ರಿ ಜ್ಞಾನೇಶ್ವರ್ ಅವರು ಪೂಜಾ ವಿಧಾನಗಳನ್ನು ಪೂರೈಸಿದ ನಂತರ ವೀರಕುಮಾರರ ಕಣ್ಗಾವಲಿನಲ್ಲಿ ಕರಗ ಹೊತ್ತು ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಮಸ್ತಾನ್ ದರ್ಗಾ ಸೇರಿದಂತೆ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಬುಧವಾರ ಮುಂಜಾನೆ ಮತ್ತೆ ಧರ್ಮರಾಯಸ್ವಾಮಿ ದೇವಾಲಯಕ್ಕೆ ಆಗಮಿಸುವ ಮೂಲಕ ಕರಗ ಉತ್ಸವಕ್ಕೆ ತೆರೆ ಬೀಳಲಿದೆ.

ಜಾತ್ರೆ ವಾತಾವರಣ:

ಮಂಗಳವಾರ ಮುಂಜಾನೆಯಿಂದಲೇ ಸಹಸ್ರಾರು ಭಕ್ತ ಸಾಗರ ಧರ್ಮರಾಯಸ್ವಾಮಿ ದೇವಾಲಯ ಆವರಣ ಪ್ರವೇಶಿಸಲಿದೆ. ಈ ಸಂದರ್ಭದಲ್ಲಿ ಆವರಣದಲ್ಲಿ ಜಾತ್ರೆ ನೆರವೇರಲಿದ್ದು, ಮಕ್ಕಳು ಆಟಿಕೆ ಸಾಮಾನು, ಮಹಿಳೆಯರು ಕಡಲೇಪುರಿ, ಬೆಂಡು ಬತಾಸ್ ವ್ಯಾಪಾರದಲ್ಲಿ ತೊಡಗಲಿದ್ದಾರೆ. ಹೀಗಾಗಿ ಇಡೀ ಪ್ರದೇಶದಲ್ಲಿ ಜಾತ್ರೆಯ ವಾತಾವರಣವಿರುತ್ತದೆ.

ಅರವಟಿಗೆ:

ಕರಗ ಉತ್ಸವದ ಹಿನ್ನೆಲೆಯಲ್ಲಿ ಭಕ್ತ ಸಮುದಾಯ ಅಲ್ಲಲ್ಲಿ ಅರವಂಟಿಗೆಗಳನ್ನು ಸ್ಥಾಪಿಸಿ ದಾರಿಹೋಕರಿಗೆ ಮಜ್ಜಿಗೆ-ಪಾನಕ-ಕೋಸಂಬರಿ ವಿತರಿಸುವುದು ವಾಡಿಕೆ.
ಶತಮಾನಗಳೇ ಕಳೆದರೂ ಕರಗ ಉತ್ಸವ ಇಂದಿಗೂ ತನ್ನ ಮೌಲ್ಯ ಉಳಿಸಿಕೊಳ್ಳುವ ಮೂಲಕ ಜನಮಾನಸದಲ್ಲಿ ನೆಲೆನಿಂತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin