ಬೆಂಗಳೂರು, ಹೈದರಾಬಾದ್ ಮತ್ತು ಮುಂಬೈ-ಕರ್ನಾಟಕದಲ್ಲಿ ಬಿಜೆಪಿ ಮಿಷನ್-60 ಟಾರ್ಗೆಟ್
ಬೆಂಗಳೂರು,ಮೇ8- ಮಿಷನ್ 150ರ ಗುರಿಯೊಂದಿಗೆ ಕಣಕ್ಕಿಳಿದಿರುವ ಬಿಜೆಪಿ ಸೈಲೆಂಟಾಗಿ ಮೂರು ಪ್ರಾಂತ್ಯಗಳ ಮೇಲೆ ವಿಶೇಷ ಗಮನ ಹರಿಸಿದೆ. ಮುಂಬೈ-ಕರ್ನಾಟಕ, ಹೈದರಾಬಾದ್-ಕರ್ನಾಟಕ ಮತ್ತು ಬೆಂಗಳೂರನ್ನು ಪ್ರಮುಖ ಟಾರ್ಗೆಟ್ ಮಾಡಿಕೊಂಡಿದ್ದು, ಮಿಷನ್ 60ರ ಗುರಿಯನ್ನು ನಿಗದಿಗೊಳಿಸಿದೆ.
ಈ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ವಿಶೇಷ ಕಾರ್ಯತಂತ್ರ ರೂಪಿಸಿದ್ದು, ಈ ಮೂರು ಪ್ರಾಂತ್ಯಗಳಲ್ಲಿ ಕನಿಷ್ಠ 60 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹಾಕಿಕೊಂಡಿದೆ. ಇದಕ್ಕಾಗಿ ಬಿಜೆಪಿ ತನ್ನ ಬತ್ತಳಿಕೆಯಲ್ಲಿನ ಟಾಪ್ ಅಭ್ಯರ್ಥಿಗಳನ್ನೇ ಕಣಕ್ಕಿಳಿಸಿದೆ. ಈ ಮೂರೂ ಪ್ರಾಂತ್ಯಗಳಲ್ಲಿ ಮಿಷನ್ -60 ಗುರಿಯೊಂದಿಗೆ ಬಿಜೆಪಿ ರಣತಂತ್ರವನ್ನು ರೂಪಿಸಿದ್ದು, ಈಗಾಗಲೇ ಕಾರ್ಯರೂಪಕ್ಕೂ ತಂದಿದೆ. ಈ ಮೂರು ಭಾಗಗಳಲ್ಲಿ ಕನಿಷ್ಠ 60 ಸ್ಥಾನ ಗೆದ್ದರೆ, ಉಳಿದಿರುವ ಭಾಗಗಳಲ್ಲಿ ಕನಿಷ್ಠ 60 ಕ್ಷೇತ್ರಗಳನ್ನು ಗೆಲ್ಲಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಆ ಮೂಲಕ ಮ್ಯಾಜಿಕ್ ಫಿಗರ್ ದಾಟುವಿಕೆ ಖಚಿತಪಡಿಸುವುದು ಬಿಜೆಪಿ ತಂತ್ರಗಾರಿಕೆಯಾಗಿದೆ.
ಬಿಜೆಪಿಯ ಪ್ರಮುಖ ಅಸ್ತ್ರ ರಾಮ್ ಮಾದವ್ಗೆ ಹೈದರಾಬಾದ್ ಕರ್ನಾಟಕದ ಹೊಣೆಯನ್ನು ನೀಡಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ಪಕ್ಷದ ವಿಜಯಪತಾಕೆ ಹಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾದವ್ ಹೈದ್ರಾಬಾದ್-ಕರ್ನಾಟಕ ಭಾಗದಲ್ಲಿ ಪಕ್ಷ ಸುಮಾರು 25 ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ. ಹೈ-ಕ ಭಾಗದಲ್ಲಿರುವ 40 ಸ್ಥಾನಗಳಲ್ಲಿ ಕನಿಷ್ಠ 25 ಸ್ಥಾನ ಗೆಲ್ಲಬೇಕೆಂಬುದು ಅಮಿತ್ ಶಾ ಸೂಚನೆಯಾಗಿದೆ. ಈ ಭಾಗದಲ್ಲಿ ಅತಿಹೆಚ್ಚು ಮೀಸಲು ಕ್ಷೇತ್ರಗಳಿದ್ದು, ಹಿಂದುಳಿದ ಸಮುದಾಯ ಗಣನೀಯ ಪ್ರಮಾಣದಲ್ಲಿದೆ. ಅದಕ್ಕಾಗಿಯೇ ಪ್ರಬಲ ಹಿಂದುಳಿದ ನಾಯಕ ಶ್ರೀರಾಮುಲುರನ್ನು ಕಣಕ್ಕಿಳಿಸಿದೆ.
ಬೆಂಗಳೂರಲ್ಲಿ 21 ಸ್ಥಾನ ಗೆಲ್ಲುವ ಗುರಿ:
ಇನ್ನು ರಾಜ್ಯ ರಾಜಧಾನಿಯನ್ನು ಬಿಜೆಪಿ ವರಿಷ್ಠರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಆಡಳಿತ ನಡೆಸಲು ರಾಜಧಾನಿಯಲ್ಲಿ ಪಾರುಪತ್ಯ ಸಾಧಿಸುವುದು ಅತಿಮುಖ್ಯ ಎಂಬುದನ್ನು ಮನಗಂಡಿರುವ ಬಿಜೆಪಿ ವರಿಷ್ಠರು ಇಲ್ಲಿರುವ 28 ಕ್ಷೇತ್ರಗಳ ಪೈಕಿ 21 ಸ್ಥಾನಗಳಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ಹೆಣೆದಿದೆ. ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಮತ್ತೋರ್ವ ಸಂಘಟನಾ ಪರಿಣತಿ ಹೊಂದಿರುವ ಆಷೀಶ್ ಶೆಲ್ಲಾರ್ರಿಗೆ ಬೆಂಗಳೂರಿನ ಹೊಣೆಯನ್ನು ನೀಡಲಾಗಿದೆ. ಬೆಂಗಳೂರಿನಲ್ಲಿ ಮಿಷನ್ 21 ಗುರಿ ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ಹೊರ ರಾಜ್ಯಗಳ ಮತದಾರರ ಮೇಲೆ ವಿಶೇಷ ಕಣ್ಣಿಟ್ಟಿದೆ. ಅದಕ್ಕಾಗಿ ಬೆಂಗಳೂರಿನಲ್ಲಿ ನೆಲೆಸಿರುವ ಗುಜರಾತಿ, ಮರಾಠಿ, ರಾಜಸ್ಥಾನಿ, ಬಂಗಾಳಿ ಸಮುದಾಯಗಳ ಪ್ರತ್ಯೇಕ ಮಿಲನ್ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದ್ದು, ಅವರ ಮತಗಳನ್ನು ತಮ್ಮತ್ತ ಸೆಳೆಯಲು ಮುಂದಾಗಿದೆ. ಬೆಂಗಳೂರಿನಲ್ಲೂ ಪ್ರಧಾನಿ ಎರಡು ಬಾರಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.
ಮುಂಬೈ-ಕರ್ನಾಟಕದಲ್ಲಿ ಮಿಷನ್-14ರ ಗುರಿ:
ಇತ್ತ ಮುಂಬೈ ಕರ್ನಾಟಕದತ್ತಲೂ ಬಿಜೆಪಿ ಗಮನ ಕೇಂದ್ರೀಕರಿಸಿದ್ದು, ಅದರಲ್ಲೂ ಬೆಳಗಾವಿಗೆ ಹೆಚ್ಚಿನ ಗಮನವನ್ನು ನೀಡಿದೆ. ಈ ಭಾಗದಲ್ಲಿನ 18 ಸ್ಥಾನಗಳ ಪೈಕಿ ಕನಿಷ್ಠ 14 ಕ್ಷೇತ್ರಗಳನ್ನು ಗೆಲ್ಲುವುದು ಬಿಜೆಪಿ ಕಾರ್ಯತಂತ್ರವಾಗಿದೆ. ಭೂಪೇಂದ್ರ ಯಾದವ್ ಬೆಳಗಾವಿ ಉಸ್ತುವಾರಿ ವಹಿಸಿಕೊಂಡಿದ್ದು, ಈಗಾಗಲೇ ಮಿಷನ್ 18ರ ಗುರಿ ಸಾಧಿಸಲು ಬೇಕಾದ ಎಲ್ಲ ತಂತ್ರಗಾರಿಕೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಈ ಭಾಗದಲ್ಲಿ ಪ್ರಧಾನಿ ಎರಡು ಬಾರಿ ಪ್ರಚಾರ ನಡೆಸಲಿದ್ದು, ಹೆಚ್ಚಿನ ಮತ ಕ್ರೋಢೀಕರಣಕ್ಕೆ ಮುಂದಾಗಿದೆ. ಈಗಾಗಲೇ ಮಹದಾಯಿ ವಿವಾದವನ್ನು ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಇತ್ಯರ್ಥಪಡಿಸುವುದಾಗಿ ಮೋದಿ ಭಾಷಣದಲ್ಲಿ ಹೇಳಿದ್ದರೆ, ಅಮಿತ್ ಶಾ ಕೂಡ ಆರು ತಿಂಗಳಲ್ಲಿ ಮಹದಾಯಿ ವಿವಾದ ಪರಿಹರಿಸುವುದಾಗಿ ಆಶ್ವಾಸನೆ ನೀಡುವ ಮೂಲಕ ಮತ ಬೇಟೆ ನಡೆಸಿದ್ದಾರೆ.