ಬೆಂಬಲಿಗರ ಸಭೆ ಕರೆದ ಅಂಬಿ, ರಾಜಕೀಯ ನಡೆ ಬಗ್ಗೆ ಮಹತ್ವದ ತೀರ್ಮಾನ ಸಾಧ್ಯತೆ
ಮಂಡ್ಯ,ನ.18-ದಿಢೀರ್ ಬೆಳವಣಿಗೆಯಲ್ಲಿ ಮಾಜಿ ಸಚಿವ, ಶಾಸಕ ಅಂಬರೀಶ್ ಅವರು ಇಂದು ತಮ್ಮ ಬೆಂಬಲಿಗರ ಸಭೆ ಕರೆದಿದ್ದು, ಮುಂದಿನ ರಾಜಕೀಯ ನಡೆ ಬಗ್ಗೆ ಹಲವು ತೀರ್ಮಾನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಚಿವ ಸ್ಥಾನ ಕಳೆದುಕೊಂಡ ನಂತರ ಅಂಬರೀಶ್ ಅವರು ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಶಾಸಕ ಚಲುವರಾಯ ಸ್ವಾಮಿ ಅವರ ಪುತ್ರ ನಟಿಸುತ್ತಿರುವ ಚಲನಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಹಾಗೂ ಆಪ್ತ ಶಿಷ್ಯ ಅಮರಾವತಿ ಚಂದ್ರಶೇಖರ್ ಮಗಳ ಮದುವೆಯಲ್ಲಿ ಪಾಲ್ಗೊಂಡಿದ್ದು ಬಿಟ್ಟರೆ ಯಾವ ಸಮಾರಂಭಗಳಲ್ಲೂ ಭಾಗವಹಿಸಿರಲಿಲ್ಲ.
ಇದೀಗ ದಿಢೀರ್ ಬೆಳವಣಿಗೆಯಲ್ಲಿ ಇಂದು ಮಧ್ಯಾಹ್ನ ನಗರದ ಹೊರವಲಯದ ಅಮರಾವತಿ ಹೋಟೆಲ್ ಆವರಣದಲ್ಲಿ ಬೆಂಬಲಿಗರ ಸಭೆ ಕರೆದಿದ್ದು, ಮುಂದಿನ ರಾಜಕೀಯ ನಡೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ. ಸಭೆಯಲ್ಲಿ ಅಮರಾವತಿ ಚಂದ್ರಶೇಖರ್, ಅಖಿಲ ಕರ್ನಾಟಕ ಅಭಿಮಾನಿ ಸಂಘದ ಅಧ್ಯಕ್ಷ ಬೇಲೂರು ಸೋಮಶೇಖರ್ ಸೇರಿದಂತೆ ಆಪ್ತರು, ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.