ಬೆಳಗಾವಿಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ : ಜಿಲ್ಲಾಧಿಕಾರಿ

Spread the love

9
ಬೆಳಗಾವಿ,ಸೆ.28- ಜಿಲ್ಲೆಯು ಯಾವುದೇ ವಿಶ್ವ ಪಾರಂಪರಿಕ ತಾಣಗಳನ್ನು ಹೊಂದಿಲ್ಲ; ಆದರೆ ಧಾರ್ಮಿಕ-ಶೈಕ್ಷಣಿಕ-ಆರೋಗ್ಯ-ಅರಣ್ಯ ಮತ್ತಿತರ ಬಗೆಯ ಪ್ರವಾಸೋದ್ಯಮ ಬೆಳವಣಿಗೆಗೆ ವಿಫುಲ ಅವಕಾಶಗಳನ್ನು ಹೊಂದಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಮ್ ಅಭಿಪ್ರಾಯಪಟ್ಟರು.  ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ನಿನ್ನೆ ಏರ್ಪಡಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸವದತ್ತಿ ಎಲ್ಲಮ್ಮ ದೇವಸ್ಥಾನ, ಗೋಕಾಕ ಜಲಪಾತ ಮತ್ತು ಇಲ್ಲಿನ ಆಹ್ಲಾದಕರ ಹಾಗೂ ರಮಣೀಯ ವಾತಾವರಣವು ಬೆಳಗಾವಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿವೆ ಎಂದರು.ನಗರದಲ್ಲಿ ಲಭ್ಯವಿರುವ ಶೈಕ್ಷಣಿಕ ಸೌಲಭ್ಯಗಳು, ಉತ್ಕಷ್ಟ  ದರ್ಜೆಯ ಆರೋಗ್ಯ ಸೇವೆಗಳು, ನೆರೆಯ ಕೊಲ್ಲಾಪುರ ಲಕ್ಷ್ಮೀ ದೇವಸ್ಥಾನ ಮತ್ತು ಗೋವಾದ ಕಡಲ ತೀರಗಳು ಕೂಡ ಬೆಳಗಾವಿಯ ಪ್ರವಾಸೋದ್ಯಮಕ್ಕೆ ಪೂರಕವಾಗಿವೆ ಎಂದು ಜಿಲ್ಲಾಧಿಕಾರಿ ಹೇಳಿದರು.ಉದ್ದಿಮೆ ಹಾಗೂ ಉದ್ಯೋಗಾವಕಾಶ ಸೃಷ್ಟಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಬೆಳೆಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ಪ್ರವಾಸೋದ್ಯಮ ನೆಪದಲ್ಲಿ ಯಾವುದೇ ಕಾರಣಕ್ಕೂ ಮದ್ಯದ ಅಂಗಡಿಗಳಿಗೆ ಪರವಾನಿಗೆ ನೀಡುವ ಮೂಲಕ ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯಕ್ಕೆ ಧಕ್ಕೆ ತರುವುದಿಲ್ಲ ಎಂದು ಜಿಲ್ಲಾಧಿಕಾರಿ ಜಯರಾಮ್ ಭರವಸೆ ನೀಡಿದರು.

ಕಳೆದ ಮೂರು ವರ್ಷಗಳಲ್ಲಿ 24 ಕೋಟಿ ರೂಪಾಯಿ ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಿಸುವ ಮೂಲಕ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ವಿವರಿಸಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಅವರು, ಐತಿಹಾಸಿಕ ಹಿನ್ನೆಲೆ ಹೊಂದಿರುವ ದೇಶ ಪ್ರೇಮಿಗಳ ನಾಡು ಜಿಲ್ಲೆಗೆ ಪ್ರಾಕೃತಿಕ ಕೊಡುಗೆ ಸಾಕಷ್ಟು ಲಭಿಸಿದ್ದು, ಇದನ್ನು ರಕ್ಷಿಸುವ ಹೊಣೆಗಾರಿಕೆ ಪ್ರತಿಯೊಬ್ಬರದು ಎಂದರು.ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣವನ್ನು ಬೆಳಗಾವಿ ಹೊಂದಿದ್ದು, ಇದಕ್ಕೆ ತಕ್ಕಂತೆ ಪ್ರವಾಸೋದ್ಯಮ ಇಲಾಖೆ ಕೂಡ ಇನ್ನಷ್ಟು ಚುರುಕಿನಿಂದ ಕೆಲಸ ಮಾಡಬೇಕು ಎಂದು ಶಾಸಕ ಪಾಟೀಲ ಸಲಹೆ ನೀಡಿದರು.

ಪ್ರವಾಸೋದ್ಯಮವು ದೇಶದ ಐತಿಹಾಸಿಕ ಹಿನ್ನೆಲೆ ಮತ್ತು ಸಂಸ್ಕೃತಿ ಯ ಅನಾವರಣಗೊಳಿಸುವಂತಿರಬೇಕು ಈ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ಹೇಳಿದರು.ವಿಶೇಷ ಘಟಕ ಯೋಜನೆ/ಗಿರಿಜನ ಉಪ ಯೋಜನೆಯಡಿ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಕಲಾವಿದರಿಗೆ ಪ್ರವಾಸೋದ್ಯಮ ಇಲಾಖೆ ಯಿಂದ ಕೊಡಮಾಡಿದ ಸಂಗೀತೋಪಕರಣಗಳನ್ನು ಶಾಸಕ ಸಂಜಯ ಪಾಟೀಲ ಹಾಗೂ ಜಿಲ್ಲಾಧಿಕಾರಿ ಎನ್. ಜಯರಾಮ್ ಇದೇ ಸಂದರ್ಭದಲ್ಲಿ ವಿತರಿಸಿದರು.ಬಿ.ಕೆ. ಕಾಲೇಜಿನ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ ಮರಾಠೆ ಅವರು ಪ್ರವಾಸೋದ್ಯಮ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಗಾದಿ ಗೌತಮ್, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಸದಸ್ಯ ಅಜಿತ್ ಚೌಗಲಾ, ನೆಹರೂ ಯುವ ಕೇಂದ್ರದ ಸಂಚಾಲಕ ಜಮಾದಾರ, ಉದ್ಯಮಿ ವಿಠ್ಠಲ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪ ನಿರ್ದೇಶಕ ಎನ್.ಬಿ.ಎಮ್ಮಿ ಸ್ವಾಗತಿಸಿದರು. ಪ್ರವಾಸಿ ಅಧಿಕಾರಿ ಸೋಮಶೇಖರ್ ಬನವಾಸಿ ನಿರೂಪಿಸಿದರು. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಚೇತನ್ ಕ್ಯಾಸನೂರ ವಂದಿಸಿದರು.ಇದಕ್ಕೂ ಮುನ್ನ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಚನ್ನಮ್ಮ ವೃತ್ತದವರೆಗೆ ಪ್ರವಾಸಿ ಜಥಾ ನಡೆಯಿತು. ಅಪರ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಜಾಥಾಗೆ ಚಾಲನೆ ನೀಡಿದರು. ಸ್ಕೇಟಿಂಗ್, ಸೈಕ್ಲಿಂಗ್ ಅಸೋಸಿಯೇಷನ್ ಸದಸ್ಯರು, ಪ್ರವಾಸಿಮಿತ್ರರು ಹಾಗೂ ಕಲಾತಂಡದ ಸದಸ್ಯರು ಸೇರಿದಂತೆ ನೂರಾರು ಜನರು ಜಥಾದಲ್ಲಿ ಭಾಗವಹಿಸಿದ್ದರು.

► Follow us on –  Facebook / Twitter  / Google+

 

Facebook Comments

Sri Raghav

Admin