ಬೆಳಗ್ಗೆ ಹಾಲಿನ ಡೈರಿ… ಮಧ್ಯಾಹ್ನ ಪಾಠ..! ಇದು ಪರವನಹಳ್ಳಿ ಸರ್ಕಾರಿ ಶಾಲೆಯ ವೈಖರಿ

Spread the love

bangarpet2

ಬಂಗಾರಪೇಟೆ, ಫೆ.1- ಕೆಲೆವೆಡೆ ಶಾಲೆ ಇರುತ್ತೆ ಮಕ್ಕಳಿರಲ್ಲ, ಶಾಲೆ ತುಂಬುವಷ್ಟು ಮಕ್ಕಳಿರುತ್ತಾರೆ. ಅಲ್ಲಿ ಸರಿಯಾದ ಶಾಲೆ ಇರಲ್ಲ. ಎರಡೂ ಸರಿಯಾಗಿದ್ದರೆ ಸಿಬ್ಬಂದಿ ಕೊರತೆ ಇರುತ್ತದೆ. ಇದು ನಮ್ಮ ರಾಜ್ಯದ ಶಿಕ್ಷಣದ ಸ್ಪೆಷಾಲಿಟಿ. ಆದ್ರೆ ಇಲ್ಲೊಂದು ಶಾಲೆಯಲ್ಲಿ ಪಾಪ ಮಕ್ಕಳು ಹಾಲಿನ ಡೈರಿಯ ಶೆಡ್‍ನಲ್ಲಿ ಕುಳಿತು ಪಾಠ ಕಲಿಯುವ ದುಃಸ್ಥಿತಿ ಬಂದೊದಗಿದೆ.  ಹೈಟೆಕ್ ಯುಗದಲ್ಲಿ ಅಂತಹ ಶಾಲೆ ಯಾವುದಪ್ಪ ಎಂದು ತಿಳಿಯಬೇಕಾದರೆ, ಪಟ್ಟಣದಿಂದ ಕಾಮ ಸಮುದ್ರ ರಸ್ತೆಯಲ್ಲಿ ಬರುವ ಪರವನಹಳ್ಳಿ ಗ್ರಾಮಕ್ಕೆ ಒಂದು ಸಲ ಭೇಟಿ ನೀಡಿದರೆ ಗೊತ್ತಾಗುತ್ತಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಎಂದು ಹೇಳಿ ಬೊಬ್ಬೆ ಹೊಡೆಯುವ ಜನಪ್ರತಿನಿಧಿಗಳಿಗೆ ಎಷ್ಟರ ಮಟ್ಟಿಗೆ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಒತ್ತು ನೀಡುತ್ತಿದ್ದಾರೆ ಎಂಬ ಸಂಶಯವೂ ಕಾಡುವಂತಿದೆ.  ಸರ್ಕಾರಿ ಶಾಲೆಗಳ ಕಟ್ಟಡಕ್ಕೆ ಸರ್ಕಾರ ಹಣವನ್ನು ಬಿಡುಗಡೆ ಮಾಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟ ಪಾಠವನ್ನು ನೀಡಲು ಕೋಟ್ಯಾಂತರ ರೂಪಾಯಿಗಳನ್ನು ಸುರಿಯಲಾಗುತ್ತಿದೆ. ಆದರೂ ಸರ್ಕಾರಿ ಶಾಲೆಗಳ ಬಗ್ಗೆ ಯಾಕೆ ಅಷ್ಟೊಂದು ಉದಾಸೀನ ಎಂಬುದೇ ಇಲ್ಲಿ ಯಕ್ಷ ಪ್ರಶ್ನೆ!

bangarpet

ಒಂದು ತಗಡಿನ ಶೆಡ್‍ಗೆ ಹಾಕಲಾಗಿರುವ ಸರ್ಕಾರಿ ಫ್ರೌಢ ಶಾಲೆಯ ಬೋರ್ಡ್, ಅಲ್ಲೇ ಕಿರಿದಾದ ಕತ್ತಲೆ ಕೊಠಡಿಯಲ್ಲಿ ಒಬ್ಬರ ಮೇಲೊಬ್ಬರು ಕುಳಿತು ಪಾಠ ಕೇಳುತ್ತಿರುವ ವಿದ್ಯಾರ್ಥಿಗಳು, ಮಕ್ಕಳ ಅಕ್ಕ-ಪಕ್ಕದಲ್ಲೇ ತುಂಬಲಾಗಿರುವ ಹಾಲಿನ ಡೈರಿಯ ಸಲಕರಣೆಗಳು. ಈ ಎಲ್ಲಾ ದೃಶ್ಯ ನಮಗೆ ಕಂಡು ಬರೋದು ಬಂಗಾರಪೇಟೆ ತಾಲ್ಲೂಕು ಪರವನಹಳ್ಳಿ ಗ್ರಾಮದಲ್ಲಿ.  ಕಳೆದ ಮೂರು ವರ್ಷಗಳ ಹಿಂದೆ ಅಂದ್ರೆ 2013ರಲ್ಲಿ ಈ ಗ್ರಾಮದಲ್ಲಿ ಹೈಸೂಲನ್ನು ಪ್ರಾರಂಭ ಮಾಡಲಾಗಿದೆ. ತರಾತುರಿಯಲ್ಲಿ ಶಾಲೆಗೆ ಅನುಮತಿ ನೀಡಿದ ಶಿಕ್ಷಣ ಇಲಾಖೆ ಕನಿಷ್ಠ ಮೂಲ ಸೌಲಭ್ಯಗಳನ್ನು ನೀಡದೆ ಹೈಸ್ಕೂಲ್ ಸ್ಥಾಪನೆ ಮಾಡಿದೆ. ತರಾತುರಿಯಾದ್ರು ಹೈಸ್ಕೂಲ್‍ನಲ್ಲಿ ಬರೋಬ್ಬರಿ 180 ಜನ ಮಕ್ಕಳಿದ್ದಾರೆ. ಆದ್ರೆ ಸರ್ಕಾರಿ ಶಾಲೆಗೆ ಬರುವ ಮಕ್ಕಳಿಗೆ ಕೂರಲು, ನಿಲ್ಲಲು, ಆಟವಾಡಲು ಸಹ ಸ್ಥಳವಿಲ್ಲದಂತಾಗಿದೆ. ಬೆಳಿಗ್ಗೆ ಹೊತ್ತು ಹಾಲಿನ ಡೈರಿ ನಡೆದ್ರೆ, ಹತ್ತು ಗಂಟೆ ನಂತರ ಅದೇ ಹಾಲಿನ ಡೈರಿ ಶಾಲೆಯಾಗಿ ಪರಿವರ್ತನೆಯಾಗುತ್ತದೆ.  ಇನ್ನು ಶಾಲೆಯ ದುಃಸ್ಥಿತಿ ನೋಡಿದ ಗ್ರಾಮಸ್ಥರು ತಾತ್ಕಾಲಿಕವಾಗಿ ಹಾಲಿನ ಡೈರಿ ಶೆಡ್‍ನ್ನು ಶಾಲೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ. ದುರಂತ ಅಂದ್ರೆ ತಾತ್ಕಾಲಿಕ ವ್ಯವಸ್ಥೆ ಹೋಗಿ ಪರ್ಮನೆಂಟ್ ಆಗಿಬಿಟ್ಟಿದೆ. ಬೇಸಿಗೆಯಲ್ಲಿ ಕೊಠಡಿಯಲ್ಲಿ ಇರಲಾಗದಂತಹ ಸೆಖೆ, ಚಳಿಗಾಲದಲ್ಲಿ ಅತಿಯಾದ ಚಳಿ, ಮಳೆಗಾಲದಲ್ಲಂತೂ ಶಾಲೆಯಲ್ಲೇ ಇರಲಾಗದ ಪರಿಸ್ಥಿತಿ. ಅಕ್ಕ ಪಕ್ಕದಲ್ಲಿ ವಾಹನಗಳ ಶಬ್ದ, ಧೂಳು, ಹಾಲಿನ ಡೈರಿಯ ವಾಸನೆ.

 

bangarpet3
ಅಲ್ಲೇ ರಸ್ತೆಯಲ್ಲೂ, ಮರದ ಕೆಳಗೂ ಕುಳಿತು ಮದ್ಯಾಹ್ನದ ಬಿಸಿಯೂಟ ಮಾಡುವ ಈ ಮಕ್ಕಳಿಗೆ ಇರುವ ಸಂಕಷ್ಟಗಳು ಒಂದಲ್ಲ ಎರಡಲ್ಲ ಹತ್ತಾರು. ಇದನ್ನು ಕಂಡ ಗ್ರಾಮಸ್ಥರೇ ಶಾಲೆ ನಿರ್ಮಾಣಕ್ಕೆ ಎರಡು ಎಕರೆ ಜಾಗ ಕೊಟ್ಟಿದ್ದಾರೆ. ಆದ್ರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾತ್ರ ಶಾಲೆ ನಿರ್ಮಾಣ ಮಾಡಕ್ಕೆ ಬೇಕಂತ ಅನಗತ್ಯ ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ.  ಒಟ್ಟಿನಲ್ಲಿ ವಿದ್ಯಾರ್ಥಿಗಳೇ ದೇಶದ ಆಸ್ತಿ ಎಂದು ಉದ್ದುದ್ದ ಬಾಷಣ ಬಿಗಿಯುವ ನಮ್ಮ ಜನಪ್ರತಿನಿಧಿಗಳು, ವಿದ್ಯಾರ್ಥಿಗಳನ್ನು ಇಷ್ಟೊಂದು ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಏನನ್ನು ಹೇಳಿಕೊಡಲು ಸಾಧ್ಯ, ದೇಶಕ್ಕೆ ಒಬ್ಬ ಸಮರ್ಥ ಪ್ರಜೆಯನ್ನು ಅದೆಷ್ಟರ ಮಟ್ಟಿಗೆ ಸಾಧ್ಯ ಅನ್ನೋದೆ ಪ್ರಶ್ನೆ.ಇದಕ್ಕೆ ಉತ್ತರಿಸುವವರು ಯಾರು? ಪರವನಹಳ್ಳಿ ಸರ್ಕಾರಿ ಪ್ರೌಢ ಶಾಲೆ ಕಟ್ಟಡ ನಿರ್ಮಾಣಕ್ಕೆ ಈಗಾಗಲೆ ಶಿಕ್ಷಣ ಇಲಾಖೆಯಿಂದ ಅನುಮತಿ ದೊರಕಿದೆ. ಆದರೆ ತಾಂತ್ರಿಕ ಕಾರಣಗಳಿಂದ ಕಟ್ಟಡದ ಕೆಲಸ ತಡವಾಗುತ್ತಿದೆ.  ಟೆಂಡರ್‍ದಾರರು ಉದ್ದೇಶ ಪೂರ್ವಕವಾಗಿ ಕಾಂಗಾರಿಯನ್ನು ತಡ ಮಾಡಿಕೊಂಡು ಬರುತ್ತಿದ್ದಾರೆ. ಮುಂದಿನ ಶೈಕ್ಷಣಿಕ ಆರಂಭವಾಗುವ ವೇಳೆಗೆ ಕಟ್ಟಡ ನಿರ್ಮಾಣ ಮಾಡಲಾಗುವುದು. ಶಾಲಾ ಕಟ್ಟಡ ನಿರ್ಮಾಣಕ್ಕೆ ಬೇಕಾದ ಜಮೀನನ್ನು ದಾನವಾಗಿ ಗ್ರಾಮದ ದಾನಿಗಳು ನೀಡಿದ್ದಾರೆ.ಹಾಗಾಗಿ ಸ್ಥಳದ ಅಭಾವ ಕೂಡ ಇಲ್ಲ ಎಂದು ಬಿಇಒ ಕೆ.ಜಯರಾಜ್ ಪತ್ರಿಕೆಗೆ ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin