ಬೆಳೆನಷ್ಟ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಮನವಿ
ಬೆಂಗಳೂರು, ಅ.12- ರಾಜ್ಯದಲ್ಲಿ ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಕುಡಿಯುವ ನೀರು ಮತ್ತು ಜಾನುವಾರುಗಳ ಮೇವಿನ ಸಮಸ್ಯೆ ಇಲ್ಲದಿದ್ದರೂ ಬೆಳೆನಷ್ಟ ಉಂಟಾಗಿ ರೈತರ ಸಂಕಷ್ಟ ತಪ್ಪಿಲ್ಲ. ಬೆಳೆಹಾನಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆ ಕೊರತೆಯಿಂದ ರಾಜ್ಯದ 61 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದೆ. ಕೇಂದ್ರದ ಮಾರ್ಗಸೂಚಿ ಪ್ರಕಾರ ಆ ತಾಲೂಕುಗಳಿಗೆ ಬರ ಪರಿಹಾರ ದೊರೆಯುವುದಿಲ್ಲ. ಆಗಸ್ಟ್ ನಂತರ ಉತ್ತಮ ಮಳೆಯಾಗಿದ್ದರೂ ಹುಳುಗಳ ಹಾವಳಿ ಹಾಗೂ ಮತ್ತಿತರ ಕಾರಣಗಳಿಂದ ಬೆಳೆನಷ್ಟ ಉಂಟಾಗಿದೆ ಎಂದು ಹೇಳಿದರು.
ಇನ್ನು ಹತ್ತು ದಿನಗಳಲ್ಲಿ ಬೆಳೆಹಾನಿ ವರದಿ ಪಡೆದು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಪರಿಹಾರ ನೀಡಲು ಕೋರಲಾಗುವುದು. ಸೈನಿಕ ಹುಳುಗಳ ಹಾವಳಿ ಇರುವ ಕಡೆ ಶೇ.50ರಷ್ಟು ರಿಯಾಯಿತಿ ದರದಲ್ಲಿ ಕೀಟನಾಶಕವನ್ನು ರೈತರಿಗೆ ಒದಗಿಸಲಾಗುವುದು. ಕೇಂದ್ರ ಸರ್ಕಾರದಿಂದ ರಾಜ್ಯದ ಬರ ಪರಿಹಾರ ನಿಧಿಗೆ ಕೇವಲ 367 ಕೋಟಿ ರೂ. ಅನುದಾನ ಬರುತ್ತದೆ. ಬರ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡದಿರುವುದರಿಂದ ಅನುದಾನ ನೀಡಲು ಕಷ್ಟವಾಗಿದೆ ಎಂದು ತಿಳಿಸಿದರು.
ಬಿಎಂಐಸಿ (ನೈಸ್) ಯೋಜನೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಸದನ ಸಮಿತಿ ವರದಿ ಅನುಸಾರ ಕ್ರಮ ಜರುಗಿಸಲು ವಿಳಂಬವಾಗುತ್ತಿದೆ. 40 ವಿವಿಧ ಕೇಸುಗಳು ನ್ಯಾಯಾಲಯಗಳಲ್ಲಿ ಬಾಕಿಯಿದ್ದು, ಅಡ್ವೊಕೇಟ್ ಜನರಲ್ ಅವರೊಂದಿಗೆ ಸಮಾಲೋಚನೆ ನಡೆಸಿ ಕೇಸುಗಳನ್ನು ಮುಂದುವರಿಸಲಾಗುವುದು ಎಂದರು. ಸದನ ಸಮಿತಿ ವರದಿಯಲ್ಲಿ ನೈಸ್ ಹಗರಣವನ್ನು ಸಿಬಿಐಗೆ ವಹಿಸಲು ಶಿಫಾರಸು ಮಾಡಲಾಗಿತ್ತು. ಅದರ ಸಾಧಕ-ಬಾಧಕ ಕುರಿತು ಕಾನೂನು ಇಲಾಖೆ ಪರಾಮರ್ಶೆ ನಡೆಸಿದ್ದು, ಲೋಕೋಪಯೋಗಿ ಇಲಾಖೆಯ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದು ಹೇಳಿದರು.
ನೈಸ್ ಸಂಸ್ಥೆಗೆ ಸಂಬಂಧಿಸಿದ ಕೇಸ್ಗಳನ್ನು ನಡೆಸಲು ವಕೀಲರಾದ ಸುನಿಲ್ ಯಾದವ್ ಎಂಬುವರನ್ನು ಸರ್ಕಾರ ನೇಮಿಸಿದೆ. ನೈಸ್ ಸಂಸ್ಥೆ ಮತ್ತು ಸರ್ಕಾರದ ನಡುವೆ ರಾಜ್ಯ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ನಲ್ಲಿ 40 ಕೇಸುಗಳಿವೆ. ಟೋಲ್ ದರ ಹೆಚ್ಚಳ ಮಾಡಿದ ಕೂಡಲೇ ನೈಸ್ ಸಂಸ್ಥೆಗೆ ನೋಟಿಸ್ ನೀಡಲಾಗಿತ್ತು. ಆದರೆ, ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ ಎಂದು ಜಯಚಂದ್ರ ವಿವರಿಸಿದರು.