ಬೆಳೆ ನಿರ್ವಹಣೆ ಇಲ್ಲದೆ ಇಳುವರಿ ಕುಸಿತ

farmars

ಮಂಡ್ಯ, ಆ.25- ಕಬ್ಬಿನ ಬೆಳೆಗೆ ಹೆಚ್ಚು ಇಳುವರಿ ಕೊಡುವ ಸಾಮಥ್ರ್ಯವಿದ್ದರೂ ಸಹ ನಿರೀಕ್ಷಿತ ಇಳುವರಿ ಪಡೆಯಲು ಕಾವೇರಿ ಅಚ್ಚು ಕಟ್ಟು ಪ್ರದೇಶದಲ್ಲಿ ಸಾಧ್ಯವಾಗಿಲ್ಲ. ಕಾಲ ಕಾಲಕ್ಕೆ ಸರಿಯಾಗಿ ಬೆಳೆ ನಿರ್ವಹಣೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶಕ ಡಾ.ಎನ್.ಆರ್. ಗಂಗಾಧರಪ್ಪತಿಳಿಸಿದರು.ಮದ್ದೂರು ತಾಲೂಕಿನ ಕೌಡ್ಲೆ ಗ್ರಾಮದ ಮುದ್ದುರಾಮುರವರ ಜಮೀನಿನಲ್ಲಿ ವಿವಿಧ ಯೋಜನೆಯಡಿ ನಡೆದ ಕಬ್ಬಿನ ಬೆಳೆಯಲ್ಲಿ ನಿಖರ ಕೃಷಿಯ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.
ಈ ಪ್ರಾತ್ಯಕ್ಷಿಕೆಯಲ್ಲಿ ಕಬ್ಬಿನಲ್ಲಿ ನೀರು ಮತ್ತು ಪೋಷ್ಟಿಕಾಂಶಗಳ  ನಿಖರ ನಿರ್ವಹಣೆ ಬಗ್ಗೆ ರೈತರಿಗೆ ತೋರಿಸಿಕೊಡಲಾಗುತ್ತಿದೆ. ಕಬ್ಬಿನಲ್ಲಿ ಹನಿ ನೀರಾವರಿ ಅಳವಡಿಸಿ ನೀರು ಮತ್ತು ಪೋಷ್ಟಿಕಾಂಶಗಳ  ನಿಖರ ನಿರ್ವಹಣೆ ಮಾಡಿ ನೀರಿನ ಉಳಿತಾಯ ಮಾಡುವ ಜತೆಗೆ ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಗಳಿಸಲು ನೆರವಾಗುತ್ತದೆ. ಆದ್ದರಿಂದ ಹೆಚ್ಚು ಹೆಚ್ಚು ರೈತರು ಅಧುನಿಕ ಪದ್ಧತಿಗಳನ್ನು ಅಳವಡಿಸಿಕೊಲ್ಳುವಂತೆ ಕರೆ ನೀಡಿದರು. ಕಬ್ಬು ಬೇಸಾಯ ಶಾಸ್ತ್ರಜ್ಞ ಡಾ.ಕೆ.ವಿ.ಕೇಶವಯ್ಯ ಮಾತನಾಡಿ, ಕಬ್ಬು ಬೆಳೆಗೆ 140-150 ಲಕ್ಷ ಲೀಟರ್ ನೀರು ಉಪಯೋಗಿಸುತ್ತಿದ್ದು, ಹನಿ ನೀರಾವರಿಯಲ್ಲಿ ಕಬ್ಬಿಗೆ ಇದರ ಅರ್ಧದಷ್ಟು ನೀರಿನಲ್ಲಿ (75 ಲಕ್ಷ ಲೀಟರ್ ನೀರು) ಹೆಚ್ಚಿನ ಇಳುವರಿ ಪಡೆಯಲು

 

ಸಾಧ್ಯವಾಗುತ್ತದೆ ಎಂದರು.ವಲಯ ಕೃಷಿ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಸಿ.ಆರ್.ರವಿಶಂಕರ್, ವಿ.ಸಿ.ಫಾರಂನ ಕಬ್ಬು ತಳಿ ತಜ್ಞ ಡಾ.ಎಸ್.ಎನ್.ಸ್ವಾಮಿಗೌಡ, ಕ್ಷೇತ್ರಾಧೀಕ್ಷಕ ಡಾ.ಎಸ್.ಬಿ.ಯೋಗಾನಂದ, ಜೈನ್ ಇರಿಗೇಷನ್ ಸಂಸ್ಥೆಯ ಪ್ರತಿನಿಧಿ ದಾಶರಥಿ, ಕೌಡ್ಲೆ ಗ್ರಾಪಂ ಅಧ್ಯಕ್ಷ ಗಿರಿ, ಪ್ರಾಧ್ಯಾಪಕ ಡಾ.ಎಸ್.ಎಸ್.ಪ್ರಕಾಶ್, ಕಬ್ಬು ತಳಿ ವಿಜ್ಞಾನಿ ಡಾ.ಎಸ್.ಎಸ್.ಸ್ವಾಮಿಗೌಡ ಇದ್ದರು.

 

► Follow us on –  Facebook / Twitter  / Google+

 

 

 

 

 

 

Sri Raghav

Admin