ಬೆಳ್ಳಂಬೆಳಗ್ಗೆ ಭ್ರಷ್ಟರ ಮನೆ ಬಾಗಿಲು ಬಡಿದ ಎಸಿಬಿ ಅಧಿಕಾರಿಗಳು, ರಾಜ್ಯದ ಹಲವೆಡೆ ದಾಳಿ
ಬೆಂಗಳೂರು, ಮಾ.9- ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮೈ ಕೊಡವಿ ಎದ್ದು ನಿಂತಿದೆ. ಇಂದು ಬೆಳ್ಳಂಬೆಳಗ್ಗೆ ಬೆಂಗಳೂರು, ಚಿಕ್ಕಮಗಳೂರು, ಕೋಲಾರ, ಬಿಜಾಪುರ, ಬೆಳಗಾವಿ, ಹುಬ್ಬಳ್ಳಿ, ಕೊಪ್ಪಳ, ಮಂಗಳೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಕಚೇರಿ, ನಿವಾಸಗಳ ಮೇಲೆ ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ-ಅಂತಸ್ತನ್ನು ಪತ್ತೆ ಹಚ್ಚಿ ಕಡತಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಭ್ರಷ್ಟರ ಚಳಿ ಬಿಡಿಸಿರುವ ಎಸಿಬಿ ಅಧಿಕಾರಿಗಳು ಇಲ್ಲಿನ ಕುವೆಂಪು ನಗರದಲ್ಲಿರುವ ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನ ಅಧಿಕಾರಿ ರಾಜಶ್ರೀ ಜೈನಾಪುರೆ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಡಿವೈಎಸ್ಪಿ ರಘು, ಮಲ್ಲೇಶ್ ದೊಡ್ಡಮನಿ ಅವರ ನೇತೃತ್ವದ ತಂಡ ರಾಜಶ್ರೀಗೆ ಸಂಬಂಧಿಸಿದ ಕಚೇರಿ, ನಿವಾಸ ಸೇರಿದಂತೆ ಹಲವೆಡೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿದ್ದಾರೆ. ಆಲಮಟ್ಟಿ ಯೋಜನೆ ಭೂ ಸ್ವಾಧೀನ ಅಧಿಕಾರಿಯಾಗಿರುವ ರಾಜೇಶ್ವರಿ ಅವರ ಹುಬ್ಬಳ್ಳಿಯ ಕೇಶ್ವಾಪುರದ ನಿವಾಸ, ಬಿಜಾಪುರ ನಗರದಲ್ಲಿರುವ ನಿವಾಸ, ಧಾರವಾಡ ನಗರದಲ್ಲಿರುವ ನಿವಾಸ, ಕಚೇರಿ, ಅವರ ಪತಿಗೆ ಸೇರಿದ ನಿವಾಸ, ವಿಜಯಪುರದಲ್ಲಿನ ಅವರ ಮನೆ ಹಾಗೂ ಅವರ ಸಂಬಂಧಿಕರ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದ್ದಾರೆ.
ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಅಪ್ಪಾರೆಡ್ಡಿ ಅವರ ಮನೆ, ಕಚೇರಿ ಸೇರಿದಂತೆ ಐದು ಕಡೆ ಏಕಕಾಲದಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ದಾಖಲೆಗಳ ಶೋಧ ನಡೆಸಿದ್ದಾರೆ. ಗಂಗಾವತಿ ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ಉಪವಿಭಾಗದ ಎಇಇ ವಿಜಯ್ಕುಮಾರ್ ಅವರ ಮನೆ, ಕಚೇರಿ, ಗಂಗಾವತಿ ಜಯನಗರದಲ್ಲಿರುವ ಅವರ ನಿವಾಸ, ಕಚೇರಿ, ಅವರಿಗೆ ಸೇರಿದ ಬೇರೆ ಬೇರೆ ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ರಾಯಚೂರಿನ 20 ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಹಲವು ಅಧಿಕಾರಿಗಳ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಬಿಬಿಎಂಪಿ ಅಧಿಕಾರಿ ಎಇಇ ಗಂಗಾಧರ್ ಅವರ ನಿವಾಸ, ಕಚೇರಿ, ತುಮಕೂರಿನಲ್ಲಿರುವ ಅವರ ನಿವಾಸ, ಕಚೇರಿಗಳ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಕರ್ನಾಟಕ ಗ್ರೂಪ್ ಇನ್ಸುರೆನ್ಸ್ ಕಂಪೆನಿ ಅಧಿಕಾರಿ ರುದ್ರಪ್ರಸಾದ್ ಅವರ ಮನೆ, ಕಚೇರಿ ಮೇಲೂ ದಾಳಿ ನಡೆಸಿ ದಾಖಲೆಗಳ ಶೋಧ ನಡೆಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕಡೂರು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಅವರ ತಿಪಟೂರಿನ ವಿದ್ಯಾನಗರದ ನಿವಾಸ ಸೇರಿದಂತೆ ಹಲವೆಡೆ ಎಸಿಬಿ ಡಿವೈಎಸ್ಪಿ ಮೋಹನ್ ನೇತೃತ್ವದ ತಂಡ ದಾಳಿ ನಡೆಸಿ ಶೋಧ ಕಾರ್ಯ ಮುಂದುವರಿದಿದೆ. ಮೂಲತಃ ಚಿಕ್ಕನಾಯಕನಹಳ್ಳಿ ತಾಲೂಕು, ಹಲಗನಹಳ್ಳಿ ನಿವಾಸಿಯಾದ ಶಿವಕುಮಾರ್ ಅವರಿಗೆ ಸೇರಿದ ಹಲವೆಡೆ ಇರುವ ಮನೆ, ಕಚೇರಿಗಳ ಮೇಲೂ ಕೂಡ ದಾಳಿ ನಡೆಸಲಾಗಿದೆ. ಚಿಕ್ಕಮಗಳೂರು ಆರ್ಟಿಒ ವಿರೂಪಾಕ್ಷ , ಜಯನಗರದಲ್ಲಿರುವ ಅವರ ಮನೆ, ಕೆಎಂ ರಸ್ತೆಯಲ್ಲಿರುವ ಕಚೇರಿ, ಇನ್ನಿತರ ನಿವಾಸಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆ, ಗಂಗಾವತಿ ತಾಲೂಕಿನ ಎಇಇ ವಿಜಯ್ಕುಮಾರ್ ನಿವಾಸದ ಮೇಲೆ ದಾಳಿ ನಡೆದು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಮಂಗಳೂರಿನ ಅಬಕಾರಿ ಉಪ ಅಧೀಕ್ಷಕ ವಿನೋದ್ಕುಮಾರ್ ಅವರ ನಿವಾಸದ ಮೇಲೂ ಎಸಿಬಿ ದಾಳಿ ನಡೆದಿದೆ. ಬಳ್ಳಾರಿ, ರಾಯಚೂರು ಸೇರಿದಂತೆ ವಿವಿಧೆಡೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.