ಬೆಳ್ಳಂಬೆಳಗ್ಗೆ ರಾಜ್ಯದ ವಿವಿಧೆಡೆ ಎಸಿಬಿ ದಾಳಿ, ಬಲೆಗೆ ಬಿದ್ದ ಭಾರೀ ಕುಳಗಳು

ACB-Attack---01

ಬೆಂಗಳೂರು/ಬೆಳಗಾವಿ, ಡಿ.13- ವರ್ಷಾಂತ್ಯದ ವೇಳೆಯಲ್ಲಿ ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಾಜ್ಯದ ವಿವಿಧೆಡೆ ಇಂದು ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಹಲವು ಭಾರೀ ಕುಳಗಳನ್ನು ಬಲೆಗೆ ಕೆಡವಿದ್ದಾರೆ. ಪ್ರಮುಖವಾಗಿ ಬೆಳಗಾವಿಯ ಅಂಕೋಲಾ ವಲಯದ ಎಸಿಎಫ್ ಪುರುಷೋತ್ತಮ ಪೈ ಅವರ ಹುಬ್ಬಳ್ಳಿಯ ಗಂಗಾಧರ ನಗರ, ಧಾರವಾಡದ ಕಲಗೇರಿಯಲ್ಲಿರುವ ನಿವಾಸ ಹಾಗೂ ಬೆಳಗಾವಿ ಸಮೀಪವಿರುವ ಫಾರ್ಮ್ ಹೌಸ್ ಮೇಲೆ ಏಕ ಕಾಲಕ್ಕೆ ಐವರು ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಈ ವೇಳೆ ಹಲವು ನಿವೇಶನಗಳ ದಾಖಲೆಗಳು, ಬ್ಯಾಂಕ್‍ನಲ್ಲಿಟ್ಟಿರುವ ಠೇವಣಿ ಸೇರಿದಂತೆ ಲೇವಾದೇವಿ ವ್ಯವಹಾರದ ಕೆಲ ದಾಖಲೆಗಳು ಕೂಡ ಪತ್ತೆಯಾಗಿದೆ. ಒಟ್ಟಾರೆ ಇವರ ಅಕ್ರಮ ಆದಾಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಭೀಮಾ ನಾಯಕ್ ಅವರಿಗೂ ಎಸಿಬಿ ಶಾಕ್ ನೀಡಿದೆ.

ಡಿವೈಎಸ್ಪಿ ರಘು ಅವರ ನೇತೃತ್ವದಲ್ಲಿ ಹುಬ್ಬಳ್ಳಿ, ಧಾರವಾಡ, ದಾವಣಗೆರೆ ಸೇರಿದಂತೆ ಇವರು ವ್ಯವಹಾರ ಹೊಂದಿರುವ 6 ಸ್ಥಳಗಳ ಮೇಲೆ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ. ಅಪಾರ ಪ್ರಮಾಣದ ಆಸ್ತಿ ಒಡೆಯರಾಗಿರುವ ದಾಖಲೆಗಳು ಪತ್ನಿ, ಪುತ್ರರು ಹಾಗೂ ಅವರ ಸಂಬಂಧಿಕರ ಹೆಸರಿನಲ್ಲಿರುವ ಜಮೀನು ಚರ-ಚಿರ ಆಸ್ತಿಗಳು ಕೂಡ ವಶಪಡಿಸಿಕೊಳ್ಳಲಾಗಿದೆ. ಎಸಿಬಿ ದಾಳಿಯಿಂದ ಅಧಿಕಾರಿ ವಲಯಗಳಲ್ಲಿ ಸಂಚಲನ ಮೂಡಿಸಿದೆ.

Sri Raghav

Admin