ಬೆಳ್ಳಂಬೆಳಿಗ್ಗೆ ಏಕಕಾಲದಲ್ಲಿ ರಾಜ್ಯದ ವಿವಿಧೆಡೆ ಎಸಿಬಿ ದಾಳಿ

ACB

ಬೆಂಗಳೂರು, ಮಾ.9– ಇಂದು ಮುಂಜಾನೆ ಏಕಕಾಲದಲ್ಲಿ ಎಸಿಬಿ ಅಧಿಕಾರಿಗಳು ರಾಜ್ಯದ ವಿವಿಧೆಡೆ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿ ಅಕ್ರಮ ಸಂಪತ್ತನ್ನು ಪತ್ತೆಹಚ್ಚಿದ್ದಾರೆ. ಕೋಲಾರ, ಉಡುಪಿ, ಚಾಮರಾಜನಗರ, ದಾವಣಗೆರೆ ಸೇರಿದಂತೆ ವಿವಿಧೆಡೆ ದಾಳಿ ನಡೆದಿದೆ ಎಂದು ಎಸಿಬಿಯ ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ.

ಕೋಲಾರ ವರದಿ:

ಇಲ್ಲಿನ ಗಾಂಧಿನಗರದಲ್ಲಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಎಂ.ಮಂಜುನಾಥ್ ಎಂಬುವರ ಮನೆ ಹಾಗೂ ಇವರು ಕಾರ್ಯನಿರ್ವಹಿಸುತ್ತಿರುವ ಮುಳಬಾಗಿಲು ತಾಲೂಕು ಕಚೇರಿ ಮೇಲೆ ಎಸಿಬಿ ಡಿವೈಎಸ್‍ಪಿ ಮೋಹನ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.  ಇವರ ಮೇಲೆ ಅಕ್ರಮ ಆಸ್ತಿ ಸಂಪಾದನೆ ಹಾಗೂ ಲಂಚದ ದೂರುಗಳು ದಾಖಲಾಗಿದ್ದವು. ಇಂದು ಪರಿಶೀಲನೆ ವೇಳೆ ಬೆಂಗಳೂರು ಸೇರಿದಂತೆ ಇತರೆಡೆ ಮಂಜುನಾಥ್ ಅವರು ಹೊಂದಿರುವ ನಿವೇಶನಗಳು, ಕೃಷಿ ಜಮೀನಿನ ಕಾಗದ ಪತ್ರಗಳು ಸೇರಿದಂತೆ ಮನೆಯಲ್ಲಿದ್ದಂತಹ ಚಿನ್ನಾಭರಣ, ನಗದನ್ನು ಜಫ್ತಿ ಮಾಡಲಾಗಿದೆ.  ಇವರ ಅಕ್ರಮ ಸಂಪಾದನೆ ಮೊತ್ತ ಎಷ್ಟೆಂಬುದರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಾಮರಾಜನಗರ ವರದಿ:

ಗುಂಡ್ಲುಪೇಟೆ ಪಟ್ಟಣದಲ್ಲಿರುವ ವಾಣಿಜ್ಯ ಇಲಾಖೆ ಕಚೇರಿ ಮೇಲೆ ಡಿವೈಎಸ್‍ಪಿ ಪ್ರಭಾಕರ್ ಅವರ ನೇತೃತ್ವದಲ್ಲಿ ಇಂದು ಬೆಳಗ್ಗೆ ದಿಢೀರ್ ದಾಳಿ ನಡೆಸಲಾಗಿದೆ.  ಬಾಗಿಲು ತೆರೆಯುವ ಮುನ್ನವೇ ಎಸಿಬಿ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ಕೆಲ ಸಿಬ್ಬಂದಿಗಳು ಬರುತ್ತಿದ್ದಂತೆಯೇ ದಿಢೀರನೆ ಒಳಗೆ ಪ್ರವೇಶಿಸಿದಾಗ ಕೆಲವರು ಗಾಬರಿಗೊಂಡಿದ್ದಾರೆ. ನಾವು ಎಸಿಬಿ ಅಧಿಕಾರಿಗಳು ಎಂದು ತಿಳಿದ ತಕ್ಷಣ ಕೆಲವರು ಕಚೇರಿಯಿಂದ ಹೊರನಡೆದಿದ್ದಾರೆ.  ಕೆಲ ಕಡತಗಳನ್ನು ಪರಿಶೀಲಿಸಲಾಗುತ್ತಿದ್ದು ಮತ್ತು ಈ ಭಾಗದಿಂದ ನೆರೆಯ ರಾಜ್ಯಕ್ಕೆ ಹೋಗುವ ಸರಕು-ಸಾಗಣೆ ವಾಹನಗಳ ಪರವಾನಗಿ ರಶೀದಿಗಳು ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.  ದಾಳಿ ಕುರಿತು ಹೆಚ್ಚಿನ ಮಾಹಿತಿಯನ್ನು ರಾತ್ರಿ ವೇಳೆಗೆ ನೀಡುವುದಾಗಿ ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ ವರದಿ:

ಕೊಲ್ಲೂರು ವನ್ಯಜೀವಿ ವಿಭಾಗದ ರೇಂಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಶಿವರಾಮ ಆಚಾರ್ಯ ಅವರ ಉಡುಪಿ ತಾಲೂಕಿನ ಕುಂದಾಪುರದ ಕುಂಬದಕೋಣೆಯಲ್ಲಿರುವ ಮನೆ ಹಾಗೂ ಕಚೇರಿ ಸೇರಿದಂತೆ ನಾಲ್ಕು ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಮಂಗಳೂರಿನಲ್ಲೂ ಶಿವರಾಮ ಅವರ ನಿಕಟವರ್ತಿಗಳು ಹಾಗೂ ಸಂಬಂಧಿಗಳ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.  ಡಿವೈಎಸ್‍ಪಿ ಸುಧೀರ್ ಹೆಗಡೆ, ಇನ್ಸ್‍ಪೆಕ್ಟರ್‍ಗಳಾದ ಯೋಗೇಶ್‍ಕುಮಾರ್, ಸತೀಶ್, ದಿನಕರ್‍ಶೆಟ್ಟಿ ಸೇರಿದಂತೆ ಅಧಿಕಾರಿಗಳ ತಂಡ ಈ ದಾಳಿ ನಡೆಸಿದ್ದು, ಹಲವು ಅಕ್ರಮ ಸಂಪಾದನೆಯನ್ನು ಪತ್ತೆಹಚ್ಚಿದ್ದಾರೆ.

ಕರಾವಳಿಯ ವಿವಿಧೆಡೆ ಇರುವಂತಹ ಅವರ ವಾಣಿಜ್ಯ ಕಟ್ಟಡಗಳು, ಮನೆ ಮತ್ತು ವಿವಿಧ ಬ್ಯಾಂಕ್‍ಗಳಲ್ಲಿ ಇಟ್ಟಿರುವ ಠೇವಣಿ ಹಾಗೂ ಶೇರು ಸೇರಿದಂತೆ ಹಲವು ದಾಖಲೆ, ವಸ್ತುಗಳನ್ನು ಪತ್ತೆಹಚ್ಚಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.   ಕೊಡಗು-ಕೇರಳ ಚೆಕ್‍ಪೋಸ್ಟ್‍ನ ಪೆರಂಬಾಡಿಯಲ್ಲೂ ಎಸಿಬಿ ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ವಾಣಿಜ್ಯ ತೆರಿಗೆ ಹಾಗೂ ಅಬಕಾರಿ ಸುಂಕ ವಂಚಿಸುತ್ತಿದ್ದ ಅಕ್ರಮ ದಂಧೆ ಪತ್ತೆಯಾಗಿದೆ.

ರಾಮನಗರ ವರದಿ:

ತಾಲೂಕಿನ ಮಾಯ್ಗಾನಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಸ್ವಾಮಿ ಅವರ ನಾಗದೇವನಹಳ್ಳಿಯಲ್ಲಿರುವ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin