ಬೆಳ್ಳಂಬೆಳಿಗ್ಗೆ ಬೆಂಗಳೂರಲ್ಲಿ ಚಿಮ್ಮಿತು ರಕ್ತ , ಬಿಜೆಪಿ ಮುಖಂಡನ ಕಗ್ಗೊಲೆ

Spread the love

Vasu-Murder-Srinivas

ಬೆಂಗಳೂರು, ಮಾ.14-ಬೆಂಗಳೂರಿನ ಹೊರವಲಯದ ಹೊಸೂರು ಮುಖ್ಯರಸ್ತೆಯ ಬಿಟಿಎಲ್ ಕಾಲೇಜು ಬಳಿ ಪುರಸಭೆ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆನೇಕಲ್ ತಾಲೂಕಿನ ಬೊಮ್ಮಸಂದ್ರ ಪುರಸಭೆಯ ಬಿಜೆಪಿ ಸದಸ್ಯ ಕಿತ್ತಗಾನಹಳ್ಳಿ ವಾಸು (30) ದಾರುಣವಾಗಿ ಹತ್ಯೆಯಾದ ದುರ್ದೈವಿ.  ಇವರು ಮಾಜಿ ಸಚಿವ ಎ.ನಾರಾಯಣಸ್ವಾಮಿ ಅವರ ಆಪ್ತರಾಗಿದ್ದರು. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಕಾರಿನಲ್ಲಿ ವಾಯುವಿಹಾರಕ್ಕೆ ತೆರಳುತ್ತಿದ್ದಾಗ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಲಾಂಗ್, ಮಚ್ಚುಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಇವರ ಪತ್ನಿ ಶೈಲಜಾ ವಾಸು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದಾರೆ. ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಾಜಕೀಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕಿತ್ತಗಾನಹಳ್ಳಿ ವಾಸು ಎಂದೇ ಜನಪ್ರಿಯರಾಗಿದ್ದ ದಲಿತ ಮುಖಂಡ ಶ್ರೀನಿವಾಸ್‍ಪ್ರಸಾದ್ ಆರ್‍ಎಸ್‍ಎಸ್, ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದರು. ಹತ್ಯೆ ವಿಷಯ ತಿಳಿಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.  ಬಿಜೆಪಿ ಕಾರ್ಯಕರ್ತರು, ವಾಸು ಬೆಂಬಲಿಗರು ಬಿಟಿಎಲ್ ಕಾಲೇಜು ಬಳಿ ಜಮಾಯಿಸಿ ಪ್ರತಿಭಟನೆ ನಡೆಸಲು ಮುಂದಾದರು. ಕಾಲೇಜು ಬಳಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಭಾರೀ ಜನ ಜಮಾಯಿಸಿದ್ದರಿಂದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.  ವಾಸು ಅವರನ್ನು ಇಂದು ಬೆಳಗ್ಗೆ 5 ಗಂಟೆ ಸುಮಾರಿನಲ್ಲಿ ಅಡ್ಡಗಟ್ಟಿದ ದುಷ್ಕರ್ಮಿಗಳು ಕಣ್ಣಿಗೆ ಖಾರದ ಪುಡಿ ಎರಚಿ ಹರಿತವಾದ ಆಯುಧಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನೀತ್‍ಸಿಂಗ್ ತಿಳಿಸಿದ್ದಾರೆ. ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಾಗಿ ಕೊಲೆಗೆ ಕಾರಣವೇನು ಎಂಬ ಬಗ್ಗೆ ಈಗಲೇ ಏನನ್ನು ಹೇಳಲು ಸಾಧ್ಯವಿಲ್ಲ ಎಂದು ಸಿಂಗ್ ತಿಳಿಸಿದ್ದಾರೆ.

ರಸ್ತೆ ತಡೆ:

ಹತ್ಯೆ ಘಟನೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿದ್ದಾರೆ. ಮಾಜಿ ಸಚಿವ ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಾಸುವಿಗೆ ಯಾರೊಂದಿಗೂ ಶತ್ರುತ್ವವಿರಲಿಲ್ಲ. ಆದರೂ ಆತನನ್ನು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಾಡಹಗಲೇ ಕೊಲೆ, ಸುಲಿಗೆ ಘಟನೆಗಳು ನಡೆಯುತ್ತಿವೆ. ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇನ್ನು ಜನಸಾಮಾನ್ಯರ ಪಾಡೇನು ಎಂದು ಆರೋಪಿಸಿದರು.

ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆರ್‍ಎಸ್‍ಎಸ್ ಮಾಧ್ಯಮ ಸಂಚಾಲಕ ರಾಜೇಶ್ ಪದ್ಮಾರ್, ರಾಜ್ಯದಲ್ಲಿ ರಾಜಕೀಯ ಪ್ರೇರಿತ ಕಗ್ಗೊಲೆಗಳು ಹೆಚ್ಚಾಗುತ್ತಿದ್ದು, ಇದನ್ನು ತಡೆಗಟ್ಟಲು ಸೂಕ್ತ ಕ್ರಮಕೈಗೊಳ್ಳಬೇಕೆಂದು ತಿಳಿಸಿದ್ದಾರೆ.  ದಲಿತ ಮುಖಂಡ ಮತ್ತು ಸಮಾಜ ಸೇವಕ ಪಟಾಪಟ್ ಶ್ರೀನಿವಾಸ್ ಅವರ ಸೋದರಸಂಬಂಧಿಯಾಗಿದ್ದ ವಾಸು ಕಳೆದ 25ವರ್ಷದಿಂದಲೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಪಕ್ಷ ಮತ್ತು ಜಾತಿಯನ್ನು ಮೀರಿ ಉತ್ತಮ ಕೆಲಸಗಳನ್ನು ನಿರ್ವಹಿಸಿ ಜನಪ್ರಿಯರಾಗಿದ್ದ ಇವರು ಯಾರೊಂದಿಗೂ ದ್ವೇಷ ಹೊಂದಿರಲಿಲ್ಲ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin