ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ನಿಮ್ಮ ‘ಈ ಸಂಜೆ’ ಪತ್ರಿಕೆ

Eesanje-01

“A Journey of a thousand miles begins with a single step” ಹೌದು… 25 ವರ್ಷಗಳ ಹಿಂದೆ ಒಂದು ಹೆಜ್ಜೆಯಿಂದ ಆರಂಭವಾದ `ಈ ಸಂಜೆ’ ಇಂದಿಗೆ ವಿಶ್ವ ಪರ್ಯಟನೆ ಮಾಡಿ ದಿಗ್ವಿಜಯ ಸಾಧಿಸಿ ನಾಡಿನುದ್ದಗಲಕ್ಕೂ ಹೆಮ್ಮರವಾಗಿ ಬೆಳೆದು ಸಾವಿರಾರು ಜನರಿಗೆ ನೆರಳಾಗಿ, ಲಕ್ಷಾಂತರ ಮಂದಿಗೆ ಮಧುರ ಫಲ ನೀಡುತ್ತಿದೆ.  ನಿಮ್ಮ ಈ ಸಂಜೆಗೀಗ 25ರ ಹರೆಯ… ಅಬ್ಬಬ್ಬಾ… ಈ ಸುದೀರ್ಘ ಪಯಣದಲ್ಲಿ ಸವೆಸಿದ್ದು ಹೂಚೆಲ್ಲಿದ ಹಾದಿಯೇನಲ್ಲ.   ಅದೆಷ್ಟು ಕಲ್ಲು-ಮುಳ್ಳುಗಳು, ಏಳು-ಬೀಳುಗಳು, ಎದುರಾದ ಸವಾಲುಗಳೆಷ್ಟೊ… ಅಡ್ಡಿ-ಆತಂಕಗಳೆಷ್ಟೋ… ನುಂಗಿದ ನೋವುಗಳೆಷ್ಟೋ… ದಿಟ್ಟತನದಿಂದ ಅವನ್ನೆಲ್ಲ ಮೆಟ್ಟಿ ನಿಂತು, ಎಂಥದ್ದೇ ಸಂದರ್ಭದಲ್ಲೂ ಅಂಜದೆ, ಅಳುಕದೆ, ಧೃತಿಗೆಡದೆ, ತಲೆಬಾಗದೆ, ಬೆದರಿಕೆಗಳಿಗೆ ಜಗ್ಗದೆ-ಬಗ್ಗದೆ, ಆಸೆ-ಆಮಿಷ- ಪ್ರಲೋಭನೆಗಳಿಗೆ ಒಳಗಾಗದೆ, ಎಲ್ಲೂ ರಾಜಿಯಾಗದೆ, ಸಿಹಿ-ಕಹಿಗಳನ್ನೆಲ್ಲ ನಗುನಗುತ್ತಲೇ ಸ್ವೀಕರಿಸಿ ಮುನ್ನಡೆದದ್ದೇ ಈ ಸಂಜೆಯ ಯಶೋಗಾಥೆ.

Eesanje-1

Eesanje-5

ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಪತ್ರಿಕೋದ್ಯಮವೆಂಬುದು ಒಂದು ತಪಸ್ಸು, ಯಜ್ಞ. ಇದರಲ್ಲಿ ಸರ್ವರೂ ಭಾಗಿಗಳಾಗಬೇಕು. ಜನ ಏನು ಕೇಳುತ್ತಾರೋ ಅದನ್ನು ಕೊಟ್ಟುಬಿಟ್ಟರಾಯಿತು ಅಂದರೆ ಅದು ನೈಜ ಪತ್ರಿಕೋದ್ಯಮವೇ..? ಈ ಸಮಾಜದ ಸ್ವಾಸ್ಥ್ಯ, ಆರೋಗ್ಯ, ಸುಸ್ಥಿರ ಬದುಕಿಗೆ ಯಾವುದು ಇಂದಿನ ಅಗತ್ಯ ಎಂಬುದನ್ನು ಗ್ರಹಿಸಿ, ಅದನ್ನೇ ಕೊಡುವುದು ಪ್ರಾಮಾಣಿಕ ಪತ್ರಿಕೋದ್ಯಮ. ಇದರ ಮರ್ಮವರಿತು ಕಳೆದ 25 ವರ್ಷಗಳಿಂದ ಹೊಣೆಗಾರಿಕೆಯಿಂದ ನಿಭಾಯಿಸಿಕೊಂಡು ಬಂದಿದೆ ಈ ಸಂಜೆ.

ಬೋಧಕ-ಪ್ರಚೋದಕ:

ಪತ್ರಿಕೆ ಸಮಾಜಕ್ಕೆ ನೀತಿ ಬೋಧಕನಾಗಬೇಕು. ಪ್ರಚೋದಕನಾಗಬೇಕು. ಹಾಗೆಯೇ ರಂಜಕನಾಗಬೇಕು. ನಾಡಿನ ಒಳಿತಿಗೆ ಅಗತ್ಯವಾಗಿರುವುದನ್ನು ಬೋಧಿಸಬೇಕು. ಸಮಾಜವನ್ನು ಪ್ರಚೋದಿಸುವ ಕೆಲಸ ಪತ್ರಿಕೆಯಿಂದ ಆಗಬೇಕು. ರಾಷ್ಟ್ರಪ್ರೇಮ, ಐಕ್ಯತೆ, ಸ್ವಾಭಿಮಾನ, ಪರೋಪಕಾರದಂತಹ ಭಾವನೆಗಳನ್ನು ಪ್ರಚೋದಿಸಿ ಸತ್ಪ್ರಜೆಗಳನ್ನು ಸೃಷ್ಟಿಸಬೇಕು.
ದುಡಿದು-ದಣಿದ ಮನಗಳಿಗೆ ರಿಲ್ಯಾಕ್ಸ್ ಆಗಲು ಒಂದಷ್ಟು ಮನರಂಜನೆ ಬೇಡವೇ. ಅಂತಹ ಸುಸಂಸ್ಕøತ ರಂಜನೆಯನ್ನು ನೈತಿಕ ನೆಲೆಗಟ್ಟಿನಲ್ಲಿ ಸಮಾಜಕ್ಕೆ ನೀಡುವ ಕೆಲಸವನ್ನೂ ಪತ್ರಿಕೆ ಮಾಡಬೇಕು. ಪತ್ರಿಕೆ ಈ ಸಮಾಜದ ಸಾಂಸ್ಕøತಿಕ ಪರಿಚಾರಕ ಕೂಡ. ಈ ಎಲ್ಲಾ ಜವಾಬ್ದಾರಿಗಳನ್ನೂ ಏಕಕಾಲಕ್ಕೆ ನಿರ್ವಹಿಸುತ್ತಾ ಬೆಳೆದು ಬಂದದ್ದು ಈ ಸಂಜೆ.

Eesanje-2

ಓದುಗರೇ ದೇವರು-ಅಭಿಮಾನಿಗಳೇ ರಕ್ಷೆ:

ಇಂದು ವಿಶ್ವವೇ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಸ್ಥಿತಿಯ ಪರ್ವಕಾಲದಲ್ಲಿದೆ. ವರ್ಗ-ವರ್ಣ ಸಂಘರ್ಷಗಳಂತಹ ಸಂದಿಗ್ಧ ಪರಿಸ್ಥಿತಿಯನ್ನೆದುರಿಸುತ್ತಿದೆ. ಇಂತಹ ನವಿರಾದ ಸಂದರ್ಭದಲ್ಲಿ ಮಾಧ್ಯಮಗಳು ಬಹಳ ಎಚ್ಚರಿಕೆಯಿಂದ, ಹೊಣೆಗಾರಿಕೆಯಿಂದ ಸಾಮಾಜಿಕ ಕಳಕಳಿಯೊಂದಿಗೆ ಕಾರ್ಯನಿರ್ವಹಿಸಬೇಕಾ ಗುತ್ತದೆ. ಈ ಎಲ್ಲಾ ಸೂಕ್ಷ್ಮತೆಗಳನ್ನೂ ಗಮನದಲ್ಲಿಟ್ಟುಕೊಂಡು ವೃತ್ತಿ ಬಾಧ್ಯತೆಗಳಿಗೆ ಬದ್ಧವಾಗಿ ತನ್ನದೇ ಆದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತ, ವದಂತಿಗಳನ್ನು ವೈಭವೀಕರಿಸಿ ಜನರ ಭಾವನೆಗಳನ್ನು ಕೆಣಕುವ, ಜನತೆಯನ್ನು ದಾರಿ ತಪ್ಪಿಸಿ ಸಾಮಾಜಿಕ ಸ್ವಾಸ್ಥ್ಯ ಕದಡುವಂತಹ ಕೆಲಸ ಮಾಡದೆ ಅತ್ಯಂತ ಸಂಯಮದಿಂದ ಸುದ್ದಿಗಳನ್ನು ಶೋಧಿಸಿ ನೈಜ ವರದಿಗಳನ್ನಷ್ಟೇ ಓದುಗರ ಮುಂದಿಡುವ ಹೊಣೆಗಾರಿಕೆ ವಿಚಾರದಲ್ಲಿ ಸದಾ ಮುಂಚೂಣಿಯಲ್ಲಿರುವುದು ಈ ಸಂಜೆ.

ಒಂದು ವೇಳೆ ಸಿಬ್ಬಂದಿಯ ಕೈ ತಪ್ಪಿನಿಂದಾಗಿಯೋ, ಕಣ್ತಪ್ಪಿನಿಂದಾಗಿಯೋ ಉಂಟಾಗಬಹುದಾದ ಸಣ್ಣ ಪುಟ್ಟ ತಪ್ಪುಗಳ ಬಗ್ಗೆ ಎಚ್ಚರಿಸಿ. ಏಕೆಂದರೆ, ನಮಗೆ ಓದುಗರೇ ದೇವರುಗಳು. ಅಭಿಮಾನಿಗಳೇ ರಕ್ಷಕರು. ಈ ಎರಡೂ ಶಕ್ತಿಗಳೂ ನಮ್ಮ ಬೆನ್ನಿಗಿರುವವರೆಗೂ ಈ ಸಂಜೆ ಹೀಗೆ ಮುನ್ನುಗ್ಗುತ್ತಲೇ ಇರುತ್ತದೆ.

ನಿಖರತೆ-ನೇರ-ನಿಚ್ಚಳ:

ಇನ್ನೊಂದು ಆತಂಕಕಾರಿ ವಿಷಯವೆಂದರೆ, ಈ ರೀತಿ ಸಾಮಾಜಿಕ ಹೊಣೆಯರಿತು ಕಾರ್ಯ ನಿರ್ವಹಿಸಬೇಕಾದ ಮಾಧ್ಯಮಗಳು, ಅಗ್ಗದ ಪ್ರಚಾರಕ್ಕಾಗಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿವೆಯೇನೋ ಎಂಬ ಸಂದೇಹಗಳೂ ಒಮ್ಮೊಮ್ಮೆ ತಲೆಹಾಕುವುದುಂಟು. ಆದರೆ ಯಾವುದೇ ಕಾರಣಕ್ಕೂ, ಎಂಥದ್ದೇ ಸಂದರ್ಭದಲ್ಲೂ ತನ್ನ ಧ್ಯೇಯೋದ್ದೇಶಗಳು, ನೀತಿ-ನಿಯಮಗಳನ್ನು ಸ್ವಾರ್ಥಕ್ಕಾಗಿ ಬಲಿ ಕೊಡದೆ, ಕಷ್ಟವೋ-ನಷ್ಟವೋ ಸಮಚಿತ್ತ, ದೃಢ ಮನಸ್ಸಿನಿಂದ ಸತ್ಯಮಾರ್ಗದಲ್ಲಿ ನಡೆದು ಬಂದದ್ದು ಈ ಸಂಜೆ.  ನಿಖರತೆ-ಪ್ರಾಮಾಣಿಕತೆ-ಪಾರದರ್ಶಕತೆ ಈ ಮೂರು ಅಂಶಗಳಿಗೆ ಎಂದೂ ನಿಮ್ಮ ಈ ಸಂಜೆ ಎರವಾಗಿಲ್ಲ. ಈ ಸಂಜೆಯ ಘೋಷಿತ ಧೋರಣೆಗಳನ್ನು ಪರಿಶೀಲಿಸಿದರೆ ಅಲ್ಲಿ ಯಾವುದೇ ಅಸ್ಪಷ್ಟತೆ, ಗೊಂದಲಗಳಿಗೆ ಅವಕಾಶವೇ ಇಲ್ಲ. ಎಲ್ಲವೂ ನೇರ-ನಿಚ್ಚಳ.

Eesanje-6

ಭಾಷೆ-ನೆಲ-ಜಲ:

ಭಾಷೆ, ಸಾಹಿತ್ಯ ಕ್ಷೇತ್ರದ ಉಳಿವು-ಗೆಲುವುಗಳ ವಿಷಯದಲ್ಲಿ ದಿನಪತ್ರಿಕೆಗಳ ಕೊಡುಗೆ ಅನನ್ಯ. ಇಂದು ಕರ್ನಾಟಕದಲ್ಲಿ ಕನ್ನಡ ಬೆಳೆದಿದ್ದರೆ, ಕನ್ನಡ ಭಾಷೆ ನಾಡಿನ ಮೂಲೆ ಮೂಲೆಗೆ ತಲುಪಿದ್ದರೆ ಅದಕ್ಕೆ ಕಾರಣ ದಿನಪತ್ರಿಕೆಗಳು ಎನ್ನುವುದು ನಿರ್ವಿವಾದ. ಇಲ್ಲಿ ಇನ್ನೂ ಒಂದು ವಿಚಾರ ಹೇಳಲೇಬೇಕು. ಭಾಷೆಯ ವಿಷಯಕ್ಕೆ ಬಂದರೆ, ಈ ಸಂಜೆ ಹುಟ್ಟಿಕೊಂಡದ್ದೇ ಕರ್ನಾಟಕ, ಕನ್ನಡ, ನೆಲ-ಜಲಗಳ ರಕ್ಷಣೆಗಾಗಿ ಎಂಬುದು ಸತ್ಯವಾದ ಮಾತು. ಕರ್ನಾಟಕದಲ್ಲಿ ಕನ್ನಡದ ದನಿಯೇ ಉಡುಗಿ ಬಿಡುವುದೇನೋ ಎಂಬ ಆತಂಕ ತಲೆದೋರಿದ ಕಾಲವದು. ಕನ್ನಡಿಗರ ಔದಾರ್ಯವೇ ಕನ್ನಡಕ್ಕೆ ಮುಳುವಾಗುವ ಪರಿಸ್ಥಿತಿ. ಇಂತಹ ಆತಂಕ ಸ್ಥಿತಿ ನಿರ್ಮಾಣವಾದಾಗ ಕನ್ನಡದ ರಕ್ಷಣೆಗೆ ಎದ್ದು ನಿಲ್ಲುವವರು ಯಾರು ಎಂಬ ಪ್ರಶ್ನೆಗೆ ಉತ್ತರವಾಗಿ ಇಗೋ ನಾನಿದ್ದೇನೆ ಎಂದು ಎದ್ದು ನಿಂತದ್ದೇ ಈ ಸಂಜೆ.
ಕನ್ನಡಿಗರಿಗಾಗಿ:

ಕನ್ನಡಕ್ಕೆ, ಕನ್ನಡಿಗರಿಗೆ, ಕರ್ನಾಟಕದ ನೆಲ-ಜಲ-ಗಡಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸುವ ದಿಟ್ಟ ನಿಲುವಿನಿಂದ ಹುಟ್ಟಿದ ಪತ್ರಿಕೆ ಇದು. ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ಪರಭಾಷೆಗಳ ಹಾವಳಿಯಲ್ಲಿ ಕಳೆದುಹೋಗಲಿದ್ದ ಕನ್ನಡಕ್ಕೆ ದನಿಯಾಗುವ, ಕನ್ನಡವನ್ನೇ ಧ್ಯಾನಿಸಿ, ನಾಡು-ನುಡಿಯ ಏಳ್ಗೆ, ಉನ್ನತಿಗಾಗಿ ಮಹಾಯಜ್ಞವನ್ನೇ ನಡೆಸುವ ಮಹಾಶಕ್ತಿಯೊಂದರ ಅಗತ್ಯವಿದ್ದಾಗ, ಆ ತಪಸ್ಸಿಗೆ ಕಂಕಣತೊಟ್ಟದ್ದೇ ಈ ಸಂಜೆ. ಹೌದು, ಅಂದಿನಿಂದ ಇಂದಿನವರೆಗೂ ನಾಡು-ನುಡಿ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಕನ್ನಡಕ್ಕೆ ಏನಾದರೂ, ಯಾರಿಂದಾದರೂ ಧಕ್ಕೆ ಉಂಟಾದರೆ ಆ ಕ್ಷಣವೇ ಅಲ್ಲಿ ನಿಂತು, ಕನ್ನಡದ ಮನಸುಗಳಿಗೆ ಪೆಟ್ಟು ಬಿದ್ದರೆ ಕನ್ನಡಿಗರ ಕನ್ನಡತನವನ್ನು ಎತ್ತಿ ಹಿಡಿದು, ತಾನೇ ಮುಂಚೂಣಿಯಲ್ಲಿ ನಿಂತು, ಹೋರಾಟಗಳನ್ನು ಸಂಘಟಿಸಿದ ಸ್ವಾತಂತ್ರ್ಯಾನಂತರದ ಏಕೈಕ ಪತ್ರಿಕೆ ಈ ಸಂಜೆ.

ಸ್ವಾಭಿಮಾನವೇ ಭೂಷಣ:

ಕನ್ನಡಿಗರಿಗೆ ಕನ್ನಡಾಭಿಮಾನ, ಸ್ವಾಭಿಮಾನಗಳೇ ಭೂಷಣ ಎಂಬ ಮಹೋನ್ನತವಾದ ಧ್ಯೇಯವನ್ನು ಪತ್ರಿಕೆ ಎಂದೂ ಮರೆತಿಲ್ಲ. ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನತೆ ಹೀಗೆ ಪ್ರತಿ ಹಂತದಲ್ಲೂ ಗಟ್ಟಿ ನಿಲುವನ್ನು ಪ್ರತಿಪಾದಿಸುತ್ತಾ ಕನ್ನಡ ಪತ್ರಿಕಾ ರಂಗದಲ್ಲಿ ತನ್ನದೇ ಛಾಪು ಮೂಡಿಸಿದೆ. ಕಳೆದ 25 ವರ್ಷಗಳಿಂದ ತನ್ನ ಧೋರಣೆಯಲ್ಲಿ ಕೊಂಚವೂ ಬದಲಾವಣೆಯಾಗದಂತೆ, ಮಾತಿಗೆ ತಪ್ಪದಂತೆ ನಡೆದುಕೊಂಡು ಬಂದಿದೆ. ಸಂಜೆ ಪತ್ರಿಕೆಗಳೆಂದರೆ ಒಂದು ವರ್ಗದ ಜನ ಮೂಗು ಮುರಿಯುವ ಪರಿಸ್ಥಿತಿಯನ್ನು ಎದುರಿಸಿ `¾ಅಬ್ಬಾ… ಸಂಜೆ ಪತ್ರಿಕೆ ಹೀಗೂ ಇರಬಹುದೇ..” ಎಂಬ ಬೆರಗು ಮೂಡಿಸಿ ಸಂಜೆ ಪತ್ರಿಕೆಗಳಿಗೆ ಹೊಸದೊಂದು ಆಯಾಮ ತಂದುಕೊಟ್ಟ ಹೆಗ್ಗಳಿಕೆ ಈ ಸಂಜೆಯದು. ಎಲ್ಲದರಲ್ಲೂ ತನ್ನದೇ ಆದ ವೈಶಿಷ್ಟ್ಯತೆಯನ್ನು ಮೈಗೂಡಿಸಿಕೊಂಡು ಕನ್ನಡಿಗರ ಹೃದಯದ ಬಾಗಿಲು ತಟ್ಟಿದೆ. ಸಮೃದ್ಧ ಮಾಹಿತಿ, ಸಮರ್ಥ ನಿರೂಪಣೆ, ಸುಂದರ ವಿನ್ಯಾಸಗಳಿಂದ ಜನಮನ ಸೂರೆಗೊಂಡಿದೆ.

Eesanje-4

ಹಿಂದಿರುಗಿ ನೋಡಿದಾಗ:

ಪತ್ರಿಕೆಯೊಂದು ಬರೋಬ್ಬರಿ 25 ವರ್ಷ, ಅಂದರೆ ಕಾಲು ಶತಮಾನವನ್ನು ದಾಟಿದೆ ಎಂದರೆ ಈ ಅಗಾಧ ಕಾಲಗರ್ಭದಲ್ಲಿ ಎದುರಾದ ಸಂಕಷ್ಟಗಳು-ಸವಾಲುಗಳು ಒಮ್ಮೆ ತಿರುಗಿ ನೋಡಿದರೆ… ಆ ಕಾಲ ಪ್ರವಾಹದ ಸೆಳವಿನ ಎದುರು ಈಜಿದ ವ್ಯಕ್ತಿಗೆ… ಅಬ್ಬಬ್ಬಾ ಎನ್ನಿಸದಿರದು. ಆದರೆ ಅದನ್ನು ಅರಗಿಸಿಕೊಳ್ಳಲು ಗಂಡೆದೆ ಬೇಕು. ಭಂಡ ಧೈರ್ಯ ಬೇಕು. (ಇದೇ ರೆಕ್‍ಲೆಸ್ ಕರೇಜ್).
ಹೆಮ್ಮರವಾಗಿ ಬೆಳೆದು…:   ಪತ್ರಿಕೆ ಇಂದು ಹೆಮ್ಮರವಾಗಿ ಬೆಳೆದಿದೆ. ಕೊಂಬೆ-ರೆಂಬೆಗಳಿಂದ ಸಮೃದ್ಧವಾಗಿದೆ. ಮನೆಗೆದ್ದು ಮಾರನ್ನೂ ಗೆದ್ದಿದೆ. ರಾಜಧಾನಿಯ ಎರಡು ಆವೃತ್ತಿಗಳು. ಹುಬ್ಬಳ್ಳಿ, ಬೆಳಗಾವಿ ಆವೃತ್ತಿಗಳೂ ತಲೆ ಎತ್ತಿವೆ. ಹಳೆಯ ಮೈಸೂರು ಪ್ರಾಂತ್ಯವಲ್ಲದೆ ಉತ್ತರ ಕರ್ನಾಟಕ, ಹೈದ್ರಾಬಾದ್, ಮುಂಬೈ ಕರ್ನಾಟಕಗಳಲ್ಲಿ ಭಾರೀ ಜನ ಮನ್ನಣೆಗೆ ಪಾತ್ರವಾಗಿದೆ.

ಅತಿ ಶೀಘ್ರದಲ್ಲೇ ಮಧ್ಯ ಕರ್ನಾಟಕದ ಕೇಂದ್ರ ದಾವಣಗೆರೆಯಲ್ಲೂ ಆವೃತ್ತಿಯನ್ನು ಆರಂಭಿಸಲಾಗುವುದು. ಒಟ್ಟಾರೆ ಇಡೀ ನಾಡನ್ನೇ ವ್ಯಾಪಿಸಿದೆ. ಎತ್ತರೆತ್ತರಕ್ಕೆ ಬೆಳೆದು ತನ್ನ ಹರವನ್ನು ವಿಸ್ತರಿಸಿಕೊಂಡ `ಅಭಿಮಾನಿ’ ಸಂಸ್ಥೆ ಇಂದು ಒಂದು ಸಾವಿರಕ್ಕೂ ಹೆಚ್ಚು ಜನರಿಗೆ ಆಸರೆ ನೀಡಿದೆ. ಅಂದರೆ ಅಷ್ಟು ಕುಟುಂಬಗಳಿಗೆ ಅನ್ನ ನೀಡುತ್ತಿದೆ. ಮಾಧ್ಯಮ ಕ್ಷೇತ್ರದಲ್ಲಿ (ಮುದ್ರಣ-ವಿದ್ಯುನ್ಮಾನ) ಗಣ್ಯಾತಿಗಣ್ಯರೆನಿಸಿಕೊಂಡಿರುವ ಅದೆಷ್ಟೋ ಪತ್ರಕರ್ತ ಮಿತ್ರರು ರಂಗ ತಾಲೀಮು ಪಡೆದದ್ದು ಈ ಸಂಜೆಯ ಗರಡಿಯಲ್ಲೇ. ಅವರೆಲ್ಲಾ ಈಗ ನಾಡಿನಾದ್ಯಂತ ವಿವಿಧ ಮಾಧ್ಯಮಗಳಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದಾರೆ.

Eesanje-3

ದಾಖಲೆಗೆ ಬೆಲೆ:

ವಿದ್ಯುನ್ಮಾನ ಮಾಧ್ಯಮ ಮಿಂಚಿನ ವೇಗದಲ್ಲಿ ಜನರನ್ನು ತಲುಪುತ್ತಿದೆ. ನಿಜ. ಆದರೆ, ಮುದ್ರಣ ಮಾಧ್ಯಮದ ಮೇಲಿನ ಜನರ ಪ್ರೀತ್ಯಾದರಗಳು ಎಂದೂ ಕುಂದಿಲ್ಲ. ಪತ್ರಿಕೆ ಓದುಗರಿಗೆ ನೀಡುವ ಆಪ್ಯಾಯತೆಯೇ ಅಂಥದು. ಇಂದಿನ ಪರ್ವಕಾಲದಲ್ಲಿ ಒಂದು ಪತ್ರಿಕೆ ತನ್ನ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವುದು ಬಹಳ ಕಷ್ಟ. ಆದರೆ ಈ ಸಂಜೆಗೆ ಅದು ಸಾಧ್ಯ. ಇಷ್ಟಾದರೂ ನಿಮ್ಮ ಈ ಸಂಜೆ ಎಂದೂ ಭಟ್ಟಂಗಿ ಕೆಲಸ ಮಾಡಿಲ್ಲ. ಮಾಡುವುದೂ ಇಲ್ಲ. ಸರ್ಕಾರಗಳ ಮರ್ಜಿ ಹಿಡಿದಿಲ್ಲ. ಜನನಾಯಕರ ಒಳ್ಳೆಯ ಕೆಲಸಗಳನ್ನು ಪ್ರಶಂಸಿಸುವ ಪತ್ರಿಕೆ, ಜನಸಾಮಾನ್ಯರಿಗೆ ತೊಂದರೆಯಾದಂಥ ಸಂದರ್ಭದಲ್ಲಿ ಜನರ ಪರವಾಗಿ ನಿಂತು ಸರ್ಕಾರಗಳಿಗೆ ಬೆವರಿಳಿಸಿದೆ. ಈ ನೇರ-ನಿಷ್ಠುರತೆಗಳೇ ನಮ್ಮ ಜೀವಾಳ. ಇತ್ತೀಚಿನ ನೋಟು ನಿಷೇಧ ಪ್ರಸಂಗ ಇದಕ್ಕೊಂದು ಜ್ವಲಂತ ನಿದರ್ಶನ.

ಇಡೀ ಮಾಧ್ಯಮ ಕ್ಷೇತ್ರ ನೋಟು ನಿಷೇಧದ ಪರ ಭಜನೆ ಮಾಡುತ್ತಿದ್ದಾಗ, ಈ ಸಂಜೆ ನಿಷ್ಪಾಪಿ ಜನರ ಸಂಕಷ್ಟಗಳನ್ನು ಮನೋಜ್ಞವಾಗಿ ತೆರೆದಿಟ್ಟಿತು. ಈ ಕೆಚ್ಚೆದೆ ಇದೆಯಲ್ಲ, ಇದೇ ಈ ಸಂಜೆಯ ಬೆನ್ನೆಲುಬು. ಈ ಸಂಜೆ ಯಾವತ್ತೂ ತನ್ನದೇ ಇತಿಮಿತಿಯಲ್ಲಿ ತನ್ನ ಮನಸ್ಸಾಕ್ಷಿಗೆ ಬದ್ಧವಾಗಿ, ಪ್ರಾಮಾಣಿಕ ಕೆಲಸ ಮಾಡುತ್ತಾ ಬಂದಿದೆ. ಓದುಗರೂ ಕೂಡ ಅಷ್ಟೇ ಪ್ರಾಂಜಲ ಮನಸ್ಸಿನಿಂದ ಪತ್ರಿಕೆಯನ್ನು ತೆರೆದ ತೋಳುಗಳಿಂದ ಸ್ವಾಗತಿಸಿ ಪ್ರೋತ್ಸಾಹಿಸಿ, ಬೆಳೆಸುತ್ತ ಬಂದಿದ್ದಾರೆ. ನಿಮ್ಮ ಈ ನಿರಂತರ ಬೆಂಬಲವನ್ನು ನೋಡಿದರೆ ನಮ್ಮ ಶ್ರಮ ಸಾರ್ಥಕವಾಯಿತು ಎಂಬ ಧನ್ಯತಾ ಭಾವ ಮೂಡುತ್ತದೆ. ಇದಕ್ಕಿಂತ ಇನ್ನೇನು ಬೇಕು ಒಂದು ಜನಪರ ಪತ್ರಿಕೆಗೆ..? ಜಾಹೀರಾತು, ಪ್ರಸಾರ, ಸುದ್ದಿಗಳ ಸಂಗ್ರಹ-ಪೂರೈಕೆಗಳು ಪತ್ರಿಕೆಯ ಬೆನ್ನೆಲುಬುಗಳು. ಇಂತಹ ಮಹತ್ವದ ಎಲ್ಲಾ ವಿಭಾಗಗಳಲ್ಲೂ ಪತ್ರಿಕೆಯ ಜೊತೆ ನಿಂತು ಸಹಕರಿಸಿದ ಸಮಸ್ತರನ್ನೂ ಪತ್ರಿಕೆ ಕೃತಜ್ಞತೆಯಿಂದ ಸ್ಮರಿಸುತ್ತದೆ.

ಅಂತರ್ಜಾಲದಲ್ಲೂ ಕ್ರಾಂತಿ : 

Eesanje-25-Years

ಅಂತರ್ಜಾಲದಲ್ಲೊಂದು ಕ್ರಾಂತಿಯನ್ನೇ ಮಾಡಿ ದೇಶ-ವಿದೇಶಗಳಲ್ಲಿ ಲಕ್ಷಾಂತರ ಓದುಗ ಅಭಿಮಾನಿಗಳನ್ನು ಸೃಷ್ಟಿಸಿಕೊಂಡ ಈ ಸಂಜೆ ತನ್ನ ಜೈತ್ರಯಾತ್ರೆಯನ್ನು ಮತ್ತೂ ಮುಂದುವರಿಸಿದೆ. ಯಾವುದಕ್ಕೂ ಸೀಮಿತವಾಗದೆ ತನ್ನ ಪರಿಧಿಯನ್ನು ವಿಸ್ತೃತಗೊಳಿಸಿಕೊಳ್ಳುತ್ತಲೇ ಸಾಗಿದೆ. ಪ್ರಸ್ತುತ ಹೊಸ ಮೊಬೈಲ್ ಆ್ಯಪ್ ಸೃಷ್ಟಿಸುವ ಮೂಲಕ ಪ್ರಪಂಚದ ಮೂಲೆ ಮೂಲೆಗೂ ತಲುಪಿದೆ. ಈಗ ನಿಮ್ಮ ಬೆರಳ ತುದಿಯಲ್ಲಿಯೇ ಈ ಸಂಜೆಯ ತಾಜಾ ಸುದ್ದಿಗಳು, ಮಾಹಿತಿಗಳನ್ನು 2್ಡ47 ಕಾಲವೂ ಓದುಗರಿಗೆ ಒದಗಿಸುತ್ತಿದೆ.  ಅದಕ್ಕೇ ಈ ಸಂಜೆ ಒಂದು ಹೆಜ್ಜೆಯಿಂದ ಆರಂಭಿಸಿದ ಪಯಣ ವಿಶ್ವ ಪರ್ಯಟನೆ ಮಾಡಿ ದಿಗ್ವಿಜಯ ಸಾಧಿಸಿದೆ ಎಂದು ಆರಂಭದಲ್ಲಿ ಹೇಳಿದ್ದು. ಓದುಗ ಪ್ರಭುಗಳಿಗೆ, ಅಭಿಮಾನಿ ಬಂಧುಗಳಿಗೆ ಪತ್ರಿಕೆ ಪರವಾಗಿ ಇಗೋ ಮತ್ತೊಮ್ಮೆ ಕೃತಜ್ಞತೆಗಳ ಅರ್ಪಣೆ.

 

  • ಚಿಕ್ಕರಸು

Sri Raghav

Admin