ಬೆಸ್ಕಾಂ ಅಧಿಕಾರಿಗಳ ವರ್ತನೆ ಖಂಡಿಸಿ ಕಚೇರಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

hannapata-0

ಚನ್ನಪಟ್ಟಣ, ಸೆ.20– ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನ ಮತ್ತು ಅಸಮರ್ಪಕ ವಿದ್ಯುತ್ ನೀಡುತ್ತಿರುವುದನ್ನು ಖಂಡಿಸಿ, ತಾಲೂಕಿನ ಸಿಂಗರಾಜಿಪುರ ಗ್ರಾಮದ ರೈತರು ಸೋಮವಾರ ಪಟ್ಟಣದ ಗ್ರಾಮಾಂತರ ವಿಭಾಗದ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.  ಗ್ರಾಮದಲ್ಲಿ ರೈತರ ಕೃಷಿ ಭೂಮಿಗೆ ಅಳವಡಿಸಿರುವ 2 ಟ್ರಾನ್ಸ್‍ಫಾರ್ಮರ್‍ಗಳು ಸುಟ್ಟು ನಾಲ್ಕೈದು ತಿಂಗಳುಗಳೇ ಕಳೆದಿವೆ. ಈ ಬಗ್ಗೆ ದೂರು ನೀಡಿದರೆ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡದೆ ಬೇಜವಾಬ್ದಾರಿಯುತವಾಗಿ ಮಾತನಾಡುತ್ತಾರೆ.

ಜೊತೆಗೆ ರೈತರಿಗೆ ಪ್ರತಿನಿತ್ಯ 8 ಗಂಟೆ ವಿದ್ಯುತ್ ನೀಡಬೇಕೆಂದು ಸರ್ಕಾರವೇ ಆದೇಶ ಮಾಡಿದ್ದರೂ ಬೆಸ್ಕಾಂ ಅಧಿಕಾರಿಗಳು 2-3 ಗಂಟೆ ಮಾತ್ರ ವಿದ್ಯುತ್ ನೀಡುತ್ತಿದ್ದಾರೆ. ಈ ಎಲ್ಲಾ ಸಮಸ್ಯೆಗೂ ನಮಗೆ ಪರಿಹಾರ ಬೇಕು ಎಂದು ಗ್ರಾಮಸ್ಥರು ಗ್ರಾಮಾಂತರ ಬೆಸ್ಕಾಂನ ಎಇಇ ಪುಟ್ಟಯ್ಯ ಅವರನ್ನು ತರಾಟೆಗೆ ಪಡೆದರು.ಕಳೆದ ನಾಲ್ಕೈದು ತಿಂಗಳಿಂದ ಗ್ರಾಮದ ಲಕ್ಕಣ್ಣನಕಟ್ಟೆ ಮತ್ತು ಶಿವಲಿಂಗಯ್ಯ ಜಮೀನಿನ ಬಳಿ ಇರುವ 2 ಟ್ರಾನ್ಸ್ ಫಾರ್ಮರ್‍ಗಳು ಮೂರು ಬಾರಿ ಕೆಟ್ಟು ಹೋಗಿವೆ. ಅವುಗಳನ್ನು ಸರಿಪಡಿಸಿ ಎಂದು ಮನವಿ ಮಾಡಿದ್ದೇವೆ. ಆದರೆ ನಮ್ಮ ಮನವಿಗೆ ಅಧಿಕಾರಿಗಳಾದ ತಾವು ಸ್ಪಂದಿಸುತ್ತಿಲ್ಲ. ಜೊತೆಗೆ ಈ ಭಾಗದ ಲೈನ್‍ಮೆನ್ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜೆಇ ಚಂದ್ರಶೇಖರ್ ಮಾತನಾಡಿ. ಬಿ.ವಿ. ಹಳ್ಳಿ. ಗ್ರಾಮದಲ್ಲಿ ಸಬ್ ಸ್ಟೇಷನ್ ನಿರ್ಮಿಸುವರೆಗೆ ಈ ಸಮಸ್ಯೆಯಿದ್ದು, ನಂತರ ಒತ್ತಡ ಕಡಿಮೆಯಾಗಲಿದ್ದು, ಮೋಳೆ ಸಬ್ ಸ್ಟೇಷನ್‍ನಿಂದ ಗ್ರಾಮದ ಕೆಲ ಕಡೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಇದರಿಂದ ಸಮಸ್ಯೆ ಪರಿಹಾರವಾಗಲಿದೆ. ರೈತರು ಅಲ್ಲಿಯವರೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು. ಪ್ರತಿಭಟನೆಯಲ್ಲಿ ಶಿವಲಿಂಗಯ್ಯ, ನಾಗೇಶ್, ಸುರೇಶ್, ಜಯರಾಮೇಗೌಡ, ರಂಗಪ್ಪ, ಚಿಕ್ಕಣ್ಣ, ಕುಮಾರ್, ಸಿದ್ದಲಿಂಗೇಗೌಡ, ಗಿರೀಶ್, ರಾಜು ಬೊಮ್ಮಗೌಡ ಇನ್ನೂ ಮುಂತಾದವರು ಹಾಜರಿದ್ದರು.

 

► Follow us on –  Facebook / Twitter  / Google+

Sri Raghav

Admin