ಬೇಜವಾಬ್ದಾರಿ ಬಿಬಿಎಂಪಿ ಅಧಿಕಾರಿಗಳೇ ಇನ್ನೆಷ್ಟು ಬಲಿ ಬೇಕು..?

BBMP--Building

ಬೆಂಗಳೂರು,ಫೆ.16-ನಗರದಲ್ಲಿ ಕುಸಿದು ಬಿದ್ದ ಹತ್ತಾರು ಕಟ್ಟಡಗಳಲ್ಲಿ ಸಾವನ್ನಪ್ಪಿರುವ ಅಮಾಯಕರ ಸಾವಿಗೆ ಬಿಬಿಎಂಪಿ ಅಧಿಕಾರಿಗಳೇ ನೇರಹೊಣೆ. ಆಗಬಾರದು ಆದಮೇಲೆ ಎಚ್ಚೆತ್ತುಕೊಂಡು ಈಗ ನಕ್ಷೆ ಮಂಜೂರಾತಿ ಉಲ್ಲಂಘಿಸಿರುವ ಕಟ್ಟಡಗಳಿಗೆ ನೋಟಿಸ್ ಜಾರಿ ಮಾಡಿದ್ದೀರಾ..?! ಇದು ಯಾವ ಪುರುಷಾರ್ಥಕ್ಕೆ.  ಇದುವರೆಗೂ ಕಟ್ಟಡ ಕುಸಿತ ಪ್ರಕರಣದಲ್ಲಿ 20ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವೊಂದು ಪ್ರಕರಣದಲ್ಲಿ ಕೂದಲೆಳೆ ಅಂತರದಿಂದ ಕೆಲವರು ಪಾರಾಗಿದ್ದಾರೆ. ಆದರೂ ನಿಮಗೆ ಬುದ್ದಿ ಬರಲಿಲ್ಲವೆಂದರೆ ನಿಮ್ಮ ಮೊಂಡುತನಕ್ಕೆ ಅದ್ಯಾವ ಶಿಕ್ಷೆ ನೀಡಬೇಕೊ ಆ ದೇವರೇ ಬಲ್ಲ.
ಈಜಿಪುರ, ಬೆಳ್ಳಂದೂರು, ಆಡುಗೋಡಿ ಮತ್ತಿತರ ಪ್ರದೇಶಗಳಲ್ಲಿ ಕಟ್ಟಡ ಕುಸಿದು ಬಿದ್ದು 16 ಮಂದಿ ಅಮಾಯಕ ಜೀವಗಳು ಬಲಿಯಾದಾಗಲೇ ಎಚ್ಚೆತ್ತುಕೊಂಡಿದ್ದರೆ ನಿನ್ನೆ ಸರ್ಜಾಪುರ ರಸ್ತೆಯ ಕಸವನಹಳ್ಳಿ ಜಯರಾಮ ರೆಡ್ಡಿ ಬಡಾವಣೆಯಲ್ಲಿ ಸಂಭವಿಸಿದ ಘೋರ ದುರಂತವನ್ನು ತಪ್ಪಿಸಬಹುದಿತ್ತು.

ಆದರೆ ಬಿಬಿಎಂಪಿ ಅಧಿಕಾರಿಗಳ ಬೇಜಾಬ್ದಾರಿತನದಿಂದ ಕಸವನಹಳ್ಳಿ ದುರಂತದಲ್ಲಿ ಮೂವರು ಅಮಾಯಕರು ಸಾವನ್ನಪ್ಪಿರುವುದಲ್ಲದೆ 20ಕ್ಕೂ ಹೆಚ್ಚು ಮಂದಿ ಕೂಲಿಕಾರ್ಮಿಕರು ಕೈಕಾಲು ಕಳೆದುಕೊಳ್ಳುವಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ.  ಯಾವ ಪುರುಷಾರ್ಥಕ್ಕೆ: ಊರೆಲ್ಲ ಕೊಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು ಎಂಬಂತೆ 20ಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾದ ನಂತರ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ.   ಕಸವನಹಳ್ಳಿ ದುರಂತದ ನಂತರ ಉತ್ತರಹಳ್ಳಿಯಲ್ಲಿ ನಕ್ಷೆ ಮಂಜೂರಾತಿ ಉಲ್ಲಂಘಿಸಿ ನಿರ್ಮಿಸಲಾಗುತ್ತಿರುವ ಐದಂತಸ್ತಿನ ಕಟ್ಟಡದ ಮಾಲೀಕರಿಗೆ ಬಿಬಿಎಂಪಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಅಕ್ರಮ ಕಟ್ಟಡ ನಿರ್ಮಿಸುವ ಮಾಲೀಕರಿಗೆ ಈ ಮೊದಲೇ ನೋಟಿಸ್ ಜಾರಿ ಮಾಡಿ ಕಾಮಗಾರಿ ನಡೆಸಲು ಅವಕಾಶ ನೀಡದಿದ್ದರೆ ನಿನ್ನೆಯ ಘೋರ ದುರಂತ ಸಂಭವಿಸುತ್ತಿರಲೇ ಇಲ್ಲ. ಈಗ ನೋಟಿಸ್ ಜಾರಿ ಮಾಡಲು ಮುಂದಾಗಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ಮಾತ್ರ ಅರ್ಥವಾಗುತ್ತಿಲ್ಲ.

ಎಲ್ಲೆಲ್ಲಿ ಅನಾಹುತ:
2013ರಲ್ಲಿ ಆಡುಗೋಡಿಯಲ್ಲಿ ಕಟ್ಟಡ ಕುಸಿದು ಐದು ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದರು. 2016ರ ಅಕ್ಟೋಬರ್ ತಿಂಗಳಿನಲ್ಲಿ ಬೆಳ್ಳಂದೂರಿನಲ್ಲಿ ಸಂಭವಿಸಿದ ಅವಘಡದಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದರು.  ಇತ್ತೀಚೆಗೆ ಈಜಿಪುರದಲ್ಲಿ ಸಂಭವಿಸಿದ ಕಟ್ಟಡ ಕುಸಿತ ಪ್ರಕರಣದಲ್ಲಿ ಏಳು ಮಂದಿ ಸಮಾಧಿಯಾಗಿದ್ದರು. ಇದಕ್ಕೂ ಮುನ್ನ ಪ್ರೇಸ್ಟೀಜ್ ಗ್ರೂಪ್‍ನ ಕಟ್ಟಡ ಕುಸಿತ ಸೇರಿದಂತೆ ಹಲವಾರು ಘೋರ ದುರಂತಗಳು ಸಂಭವಿಸಿದ್ದವು. ಜಯನಗರದ ಮಾರೇನಹಳ್ಳಿ , ಯಶವಂತಪುರ, ಮತ್ತಿಕೆರೆ ಮತ್ತಿತರ ಕೆಲ ಪ್ರದೇಶಗಳಲ್ಲೂ ಕಟ್ಟಡ ವಾಲಿದ್ದ ಪ್ರಕರಣಗಳು ನಡೆದಿದ್ದವು. ಆದರೆ ಆ ಕಟ್ಟಡಗಳಲ್ಲಿ ವಾಸಿಸುತ್ತಿದ್ದವರ ಮುಂಜಾಗ್ರತಾ ಕ್ರಮದಿಂದ ಯಾವುದೇ ಅನಾಹುತ ಸಂಭವಿಸಿರಲಿಲ್ಲ. ಇಷ್ಟೆಲ್ಲ ಪ್ರಕರಣಗಳು ನಡೆದಿದ್ದರೂ ಬಿಬಿಎಂಪಿ ಅಧಿಕಾರಿಗಳು ಮಾತ್ರ ಅನಾಹುತಕ್ಕೂ ನಮಗೂ ಸಂಬಂಧವೇ ಇಲ್ಲ ಎಂದು ಕೈ ಕಟ್ಟಿ ಕುಳಿತಿದ್ದರಿಂದಲೇ ನಿನ್ನೆ ಮತ್ತೊಂದು ಅನಾಹುತ ಸಂಭವಿಸಿದೆ.

ಕಾರಣವೇನು:
ಕಟ್ಟಡ ನಿರ್ಮಿಸುವ ಮಾಲೀಕರು ಬಿಬಿಎಂಪಿ ನೀಡುವ ನಕ್ಷೆ ಮಂಜೂರಾತಿಗೆ ಅನುಗುಣವಾಗಿ ಕಟ್ಟಡ ನಿರ್ಮಿಸಿದರೆ ಬಹುತೇಕ ಅವಘಡಗಳನ್ನು ತಪ್ಪಿಸಬಹುದು. ಆದರೆ ದುರಾಸೆಯಿಂದ ಮಾಲೀಕರು ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವುದೇ ಕಟ್ಟಡ ಕುಸಿತದಂತಹ ಅನಾಹುತಗಳಿಗೆ ಕಾರಣವಾಗಿದೆ.
ಕೆಲ ಮಾಲೀಕರಂತೂ ದುರಾಸೆಗಾಗಿ ಕಳಪೆ ಕಾಮಗಾರಿ ನಡೆಸುತ್ತಿರುವುದು ಮತ್ತೊಂದು ಕಾರಣವಾಗಿದೆ. ಮಾಲೀಕರು ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದರೂ ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಅಕ್ರಮ ಕಾಮಗಾರಿಗಳನ್ನು ತಡೆಗಟ್ಟಲು ಮುಂದಾಗದೆ ಮಾಲೀಕರು ನೀಡುವ ಹಣದ ಆಮಿಷಕ್ಕೆ ಬಲಿಯಾಗಿ ಗೊತ್ತಿದ್ದು , ಗೊತ್ತಿಲ್ಲದವರಂತೆ ವರ್ತಿಸುವ ಮೂಲಕ ಅಮಾಯಕ ಜನರ ಸಾವಿಗೆ ಕಾರಣರಾಗುತ್ತಿದ್ದಾರೆ.

ಏನು ಮಾಡುತ್ತಿದೆ ಸ್ಥಾಯಿಸಮಿತಿ:
ನಗರದಲ್ಲಿ ಎಲ್ಲೆಂದರಲ್ಲಿ ನಿರ್ಮಿಸಲಾಗುತ್ತಿರುವ ಬೃಹತ್ ಕಟ್ಟಡಗಳು ಕಾನೂನು ಉಲ್ಲಂಘಿಸಿ ನಿರ್ಮಿಸಲಾಗುತ್ತಿದೆ ಎಂಬುದನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲೆಂದೇ ಬಿಬಿಎಂಪಿಯಲ್ಲಿ ನಗರ ಯೋಜನೆ ಸ್ಥಾಯಿ ಸಮಿತಿಯನ್ನು ನೇಮಿಸಲಾಗಿದೆ.  ಎಲ್ಲ ಪಕ್ಷಗಳನ್ನು ಒಳಗೊಂಡ ಸದಸ್ಯರಿರುವ ಸಮಿತಿ ಅಕ್ರಮ ಕಟ್ಟಡಗಳನ್ನು ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗದೆ ಕೇವಲ ಮಾಲೀಕರಿಂದ ಇಂತಿಷ್ಟು ಹಣ ಪಡೆದು ಸುಮ್ಮನಾಗುತ್ತಿದೆ. ಇಂಥ ಸ್ಥಾಯಿ ಸಮಿತಿ ಇದ್ದರೆಷ್ಟು ಬಿಟ್ಟರೆಷ್ಟು.

ಈಗಲೂ ಕಾಲ ಮಿಂಚಿಲ್ಲ:
ಬೆಂಗಳೂರು ಸುತ್ತಮುತ್ತ ಸಾವಿರಾರು ಕಟ್ಟಡಗಳು ತಲೆ ಎತ್ತುತ್ತಿವೆ. ಬಿಬಿಎಂಪಿ ಅಧಿಕಾರಿಗಳು ಮತ್ತು ಸ್ಥಾಯಿ ಸಮಿತಿ ಸದಸ್ಯರು ಯಾವುದೇ ಆಮಿಷಕ್ಕೊಳಗಾಗದೆ ಅಕ್ರಮವಾಗಿ ನಿರ್ಮಿಸುತ್ತಿರುವ ಕಟ್ಟಡಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿ ಕಾಮಗಾರಿ ತಡೆ ಹಿಡಿದರೆ ಭವಿಷ್ಯದಲ್ಲಿ ಸಂಭವಿಸಬಹುದಾದ ಇನ್ನಿತರ ಹಲವಾರು ದುರಂತಗಳನ್ನು ತಡೆಯಬಹುದು. ಆದರೆ ಇದಕ್ಕೆ ಅಧಿಕಾರಿಗಳಲ್ಲಿ ಇಚ್ಛಾಶಕ್ತಿಯ ಕೊರತೆಯಿದೆ.

Sri Raghav

Admin