ಬೇರೆ ರಾಜ್ಯಗಳಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 10,500ರೂ, ಸಹಾಯಕಿಯರಿಗೆ 7000 ವೇತನ ನೀಡಿ

Spread the love

Anganawadi--02

ಬೆಂಗಳೂರು, ಮಾ.21- ಹೊರರಾಜ್ಯಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ 10,500ರೂ. ವೇತನ ಮತ್ತು ಸಹಾಯಕಿಯರಿಗೆ 7000ರೂ. ವೇತನ ನೀಡಲಾಗುತ್ತಿದ್ದು, ನಮ್ಮ ರಾಜ್ಯದಲ್ಲೂ ಇದೇ ಮಾದರಿಯಲ್ಲಿ ವೇತನ ನೀಡಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ ಆಗ್ರಹಿಸಿದ್ದಾರೆ.  ವೇತನ ಹೆಚ್ಚಳಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಬಾರಿ ಪ್ರತಿಭಟನೆ ಮಾಡಿದಾಗಲೂ ಕೆಲವೇ ರೂಪಾಯಿಗಳ ಗೌರವಧನ ಹೆಚ್ಚಳ ಮಾಡಿ ಅಂಗನವಾಡಿ ಕಾರ್ಯಕರ್ತೆಯರ ಬಾಯಿ ಮುಚ್ಚಿಸುತ್ತಾರೆ. 26 ವರ್ಷಗಳಿಂದಲೂ ಇದೇ ರೀತಿ ಹೋರಾಟ ಮಾಡುತ್ತ ಬಂದಿದ್ದೇವೆ. ಸರ್ಕಾರ ನಮ್ಮ ಬೇಡಿಕೆ ಈಡೇರಿಸಬೇಕು, ವೇತನ ಹೆಚ್ಚಳ ಮಾಡಬೇಕು ಮತ್ತು ಸೇವಾ ನಿಯಮಗಳನ್ನು ಸರಳೀಕರಣಗೊಳಿಸಬೇಕು ಎಂದು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರು ಅತಿ ಹೆಚ್ಚು ಶ್ರಮ ವಹಿಸಿ ಕೆಲಸ ಮಾಡುತ್ತಾರೆ. ಅವರಿಗೆ ಕನಿಷ್ಟ ವೇತನ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯವಾಗಿದೆ. ನಿನ್ನೆ ನಮ್ಮ ಸಮಸ್ಯೆ ಆಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಸ್ಥಳಕ್ಕೆ ಆಗಮಿಸಿದ್ದರಾದರೂ ಬೇಡಿಕೆಗಳ ಈಡೇರಿಕೆಗೆ ಒಲವು ತೋರಲಿಲ್ಲ.  ಮುಖ್ಯಮಂತ್ರಿಗಳನ್ನು ಕೂಡ ಭೇಟಿ ಮಾಡಿ ಮಾತುಕತೆ ನಡೆಸಿದೆವು. ಅವರು ಕೂಡ ಯಾವುದೇ ಖಚಿತ ಭರವಸೆ ನೀಡಲಿಲ್ಲ. ಸರ್ಕಾರ ತನ್ನ ಇಚ್ಛಾಶಕ್ತಿ ಪ್ರದರ್ಶಿಸಿ ವೇತನ ಹೆಚ್ಚಳ ಮಾಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin