ಬೈಎಲೆಕ್ಷನ್ ಎಫೆಕ್ಟ್ , ವಿಧಾನಸೌಧ ಭಣ ಭಣ , ಕಣದಲ್ಲಿ ಕಲಿಗಳ ಭರ್ಜರಿ ಪ್ರಚಾರ

Spread the love

Vidhanasabha

ಬೆಂಗಳೂರು, ಮಾ.31-ವಿಧಾನಮಂಡಲ ಅಧಿವೇಶನ ಮುಕ್ತಾಯವಾಗಿದ್ದು ಇತ್ತ ಉಪ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದೆ. ರಾಜ್ಯದ ಬಹುತೇಕ ರಾಜಕಾರಣಿಗಳೆಲ್ಲಾ ಶಕ್ತಿಕೇಂದ್ರದಿಂದ ದೂರ ಸರಿದಿದ್ದು, ವಿಧಾನಸೌಧ ಬಿಕೋ ಎನ್ನುತ್ತಿದೆ. ಸಾಮಾನ್ಯವಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂದರ್ಭದಲ್ಲಷ್ಟೇ ವಿಧಾನಸೌಧ, ವಿಕಾಸಸೌಧದಲ್ಲಿ ಜನಪ್ರತಿನಿಧಿಗಳು ಕಾಣಿಸುತ್ತಿರಲಿಲ್ಲ. ಇನ್ನು ಐದು ವರ್ಷಕ್ಕೆ ಒಮ್ಮೆ ನಡೆಯುವ ಚುನಾವಣೆ ಸಂದರ್ಭ ರಾಜಕಾರಣಿಗಳು ಅಷ್ಟಾಗಿ ಶಕ್ತಿಕೇಂದ್ರ ಸುತ್ತಮುತ್ತ ಕಾಣಿಸುತ್ತಿರಲಿಲ್ಲ.

ಆದರೆ, ರಾಜ್ಯದ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆದ ಸಂದರ್ಭದಿಂದಲೂ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲೇ ಬೀಡು ಬಿಟ್ಟಿದ್ದಾರೆ. ನಂಜನಗೂಡು ಹಾಗೂ ಗುಂಡ್ಲುಪೇಟೆಯ ಉಪಚುನಾವಣೆಯ ಗೆಲುವನ್ನು ಎರಡೂ ಪಕ್ಷಗಳೂ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು, ಕಳೆದ 15 ದಿನಗಳಿಂದ ಎಲ್ಲವನ್ನೂ ಮರೆತು ಎರಡು ಜಿಲ್ಲೆಗೆ ಸೀಮಿತವಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವೈ ಹಾಗೂ ಪಕ್ಷದ ಹಿರಿಯ ನಾಯಕರು ತಮ್ಮ ಅಭ್ಯರ್ಥಿಗಳ ಪರ ಹಗಲು-ರಾತ್ರಿ ಕ್ಯಾಂಪೇನ್ ಮಾಡುತ್ತಿದ್ದಾರೆ. ಯುಗಾದಿ ಹಬ್ಬದ ದಿನ ಕೂಡ ಬಿಎಸ್‍ವೈ ಪ್ರಚಾರದಲ್ಲಿ ತೊಡಗಿದ್ದರು. ಇತ್ತ ಸಿಎಂ ಸಿದ್ದರಾಮಯ್ಯ ಇಂದಿನಿಂದ ಪ್ರಚಾರದ ಅಖಾಡಕ್ಕೆ ಇಳಿಯಲಿದ್ದಾರೆ. ಅವರ ಸಂಪುಟದ ಹಿರಿಯ ಸದಸ್ಯರು ಅದಾಗಲೇ ಎರಡು ಜಿಲ್ಲೆಯಲ್ಲಿ ಪ್ರಚಾರನಿರತರಾಗಿದ್ದಾರೆ. ಹಗಲು, ರಾತ್ರಿ ಕ್ಷೇತ್ರದ ಉದ್ದಗಲಕ್ಕೂ ಓಡಾಡಿಕೊಂಡು ಪಕ್ಷದ ಪ್ರಚಾರದಲ್ಲಿ ತೊಡಗಿದ್ದಾರೆ.

 

ಅಧಿವೇಶನವೂ ನಿರ್ಲಕ್ಷ್ಯ:

ಉಪಚುನಾವಣೆ ಹಿನ್ನೆಲೆ ಆಡಳಿತ ಪಕ್ಷದ ಬಹುತೇಕ ಸಚಿವರು ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನದಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಲಿಲ್ಲ. ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿರುವ ಉಪ ಚುನಾವಣೆ ಕಣ ದಿನದಿಂದ ದಿನಕ್ಕೆ ವಿಭಿನ್ನ ರೀತಿಯಲ್ಲಿ ರಂಗೇರುತ್ತಿದ್ದು, ಇಂದಿನಿಂದ ಎರಡೂ ಪಕ್ಷದ ನಾಯಕರು ಭಾರೀ ಪ್ರಚಾರದಲ್ಲಿ ತೊಡಗಲಿದ್ದಾರೆ.

 

ಶಕ್ತಿ ಕೇಂದ್ರ ಭಣ ಭಣ:

ರಾಜಕೀಯ ನಾಯಕರು, ಅವರ ಬೆಂಬಲಿಗರನ್ನು ಹೊರತುಪಡಿಸಿದರೆ ಉಳಿದವರು ಅಂದರೆ ಅಧಿಕಾರಿ ವರ್ಗ, ಸಿಬ್ಬಂದಿ ನಿತ್ಯದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ, ವಿಧಾನಸೌಧ, ವಿಕಾಸಸೌಧಗಳ ರಾಜಕಾರಣಿಗಳು ಇರುವಾಗ ಕಂಡುಬರುವ ತರಾತುರಿ ಕಂಡು ಬರುತ್ತಿಲ್ಲ. ಬದಲಾಗಿ ವಿಧಾನಸೌಧ ಅವಸರದ ನಡಿಗೆಯಿಲ್ಲದೇ, ನಿರಾಳವಾಗಿ, ನಿರುಮ್ಮಳವಾಗಿ ಗೋಚರಿಸುತ್ತಿದೆ. ಅಪರೂಪಕ್ಕೊಮ್ಮೆ ಈ ರೀತಿಯ ದೃಶ್ಯಾವಳಿಗಳು ವಿಧಾನಸೌಧ, ವಿಕಾಸಸೌಧ ಕಂಡು ಬರುತ್ತವೆ. ಸದ್ಯ ಈ ರೀತಿಯ ಗದ್ದಲರಹಿತ, ಜನರಹಿತ ವಾತಾವರಣ ಏ.9ರವರೆಗೂ ಗೋಚರಿಸಲಿದೆ ಎಂದು ಹೇಳಲಾಗುತ್ತಿದೆ.

 

ಗುಂಡ್ಲುಪೇಟೆ ಅಖಾಡ:

ಚಾಮರಾಜನಗರದ ಗುಂಡ್ಲುಪೇಟೆಯಲ್ಲಿ ಸಚಿವರಾಗಿದ್ದ ಹೆಚ್.ಎಸ್. ಮಹದೇವ್ ಪ್ರಸಾದ್  ನಿಧನದಿಂದ ತೆರವಾದ ಸ್ಥಾನಕ್ಕೆ ಅವರ ಪತ್ನಿ ಗೀತಾ ಮಹದೇವಪ್ರಸಾದ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಕಣಕ್ಕಿಳಿದಿರುವ ನಿರಂಜನ ಕುಮಾರ್ ಕೂಡ ಪ್ರಚಾರದಲ್ಲಿ ಅತ್ಯುತ್ಸಾಹ ತೋರಿಸುತ್ತಿದ್ದಾರೆ.  ಎರಡು ಬಾರಿ ತಮ್ಮ ತಂದೆ ಹಾಗೂ ತಾವು ಈ ಕ್ಷೇತ್ರದಲ್ಲಿ ಸೋಲನುಭವಿಸಿದ್ದು, ಈ ಅನುಕಂಪದಿಂದ ಗೆಲ್ಲಿಸುವಂತೆ ಮನೆ ಮನೆ ತಿರುಗಿ ಪ್ರಚಾರ ಮಾಡುತ್ತಿದ್ದಾರೆ. ಇವರ ಬೆನ್ನಿಗೆ ಬಿ.ಎಸ್. ಯಡಿಯೂರಪ್ಪ ನಿಂತಿದ್ದು, ಹೆಚ್ಚಿನ ಬಲ ತಂದುಕೊಟ್ಟಿದೆ. ಪ್ರಸಕ್ತ ಚುನಾವಣೆಯಲ್ಲಿ 20 ಸಾವಿರ ಯುವ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದು, ಇವರೇ ಗೇಮ್ ಚೇಂಜರ್  ಎಂದು ಹೇಳಲಾಗುತ್ತಿದೆ. ಇವರ ಒಲವು ಅಭಿವೃದ್ಧಿಗೆ ಇರಲಿದೆ ಹೊರತು ಯಾವುದೇ ಅನುಕಂಪಕ್ಕೆ ಅಲ್ಲ ಎನ್ನಲಾಗುತ್ತಿದೆ. ಹೀಗಾಗಿ ಗೆಲುವು ಇಬ್ಬರಿಗೂ 50:50 ಆಗಿದೆ.
ನಂಜನಗೂಡು ಅಖಾಡ:

ಮೈಸೂರಿನ ನಂಜನಗೂಡಿನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಸಚಿವ ವಿ. ಶ್ರೀನಿವಾಸ್‍ಪ್ರಸಾಸ್‍ಗೆ ಗೆಲುವು ಅನಿವಾರ್ಯವಾಗಿದೆ. ರಾಜಕೀಯ ಪ್ರಾಬಲ್ಯ ಉಳಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯಗೆ ಇಲ್ಲಿ ಗೆಲ್ಲಲೇಬೇಕಿದೆ. ಇದಕ್ಕಾಗಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕಳಲೆ ಕೇಶವಮೂರ್ತಿಯನ್ನು ಕಾಂಗ್ರೆಸ್‍ಗೆ ಕರೆತಂದು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಕಡಿಮೆ ಅಂತರದಿಂದ ಸೋತಿದ್ದ ಕೇಶವಮೂರ್ತಿ ಗೆಲುವಿನ ಆಶಯ ಹೊಂದಿದ್ದಾರೆ.   2018ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಪರಿಗಣನೆಯಾಗುತ್ತಿರುವ ಈ ಉಪಚುನಾವಣೆಯಲ್ಲಿ ಪ್ರಮುಖ ಪ್ರಾದೇಶಿಕ ಪಕ್ಷ ಜೆಡಿಎಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಆದ್ದರಿಂದ ಇಲ್ಲಿ ಮತ ಒಡೆಯುವ ಆತಂಕ ಇಲ್ಲ. ಇಲ್ಲಿನ ಗೆಲುವು ನೇರವಾಗಿ ಮುಂದಿನ ಚುನಾವಣೆಯ ಮೇಲೆ ಪರಿಣಾಮ ಬೀರಲಿದೆ. ಇದಕ್ಕಾಗಿಯೇ ಉಭಯ ರಾಷ್ಟ್ರೀಯ ಪಕ್ಷದ ನಾಯಕರೂ ಪ್ರತಿಷ್ಠೆಯಿಂದ ಪ್ರಚಾರದಲ್ಲಿ ನಿರತರಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin