ಬೋನಿಗೆ ಬಿದ್ದ ಚಿರತೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
ಮಾಗಡಿ, ಫೆ.8- ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡಿ ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದ್ದ ಚಿರತೆಯೊಂದು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಬೆಳಗ್ಗೆ ಸಿಕ್ಕಿ ಬಿದ್ದಿದೆ. ತಾಲ್ಲೂಕಿನ ಅಣ್ಣೇಕಾರನಹಳ್ಳಿ ಗ್ರಾಮ ಹೊರವಲಯದಲ್ಲಿ ಸುಮಾರು 4 ವರ್ಷದ ಗಂಡು ಚಿರತೆ ಬಸವ ದೇವಾಲಯದ ಬಳಿ ಇಟ್ಟಿದ್ದ ಬೋನಿಗೆ ಬಿದ್ದಿದ್ದು , ಇಂದು ಬೆಳಗ್ಗೆ ಇದನ್ನು ಕಂಡ ಸಾರ್ವಜನಿಕರು ಅರಣ್ಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಕುರಿ, ಮೇಕೆ ಸೇರಿದಂತೆ ನಾಯಿಗಳನ್ನು ಕೂಡ ತಿಂದು ಹಾಕಿ ಗ್ರಾಮಸ್ಥರು ಬೆಳಗಿನ ವೇಳೆಯಲ್ಲೂ ಓಡಾಡಲು ಭಯ ಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಎಚ್ಚೆತ್ತ ಅರಣ್ಯ ಸಿಬ್ಬಂದಿಗಳು ಗ್ರಾಮದ ಆಸು ಪಾಸಿನಲ್ಲಿ ಬೋನನ್ನು ಇಟ್ಟು ಚಿರತೆ ಸೆರೆಗೆ ಮುಂದಾಗಿದ್ದರು. ಮಾಗಡಿಯಿಂದ ಬಂದಂತಹ ಸಿಬ್ಬಂದಿಗಳು ಚಿರತೆಯನ್ನು ಈಗ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಿದ್ದಾರೆ. ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.